ಖಾಸಗಿ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಅಳವಡಿಕೆ ವಿಚಾರ: ವರದಿ ನೀಡಲು 7 ದಿನ ಗಡುವು ನೀಡಿದ ಎಸ್.ಜಿ.ಸಿದ್ದರಾಮಯ್ಯ

Update: 2018-11-15 16:25 GMT

ಬೆಂಗಳೂರು, ನ.15: ಬೆಂಗಳೂರು ಗ್ರಾಮಾಂತರದಲ್ಲಿರುವ ಐಸಿಎಸ್ಸಿ, ಸಿಬಿಸಿಎಸ್ ಪಠ್ಯಕ್ರಮಗಳನ್ನೂ ಒಳಗೊಂಡ ಖಾಸಗಿ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬೋಧಿಸಲಾಗುತ್ತಿದೆಯೇ ಎಂಬ ವರದಿಯನ್ನು 7 ದಿನಗಳ ಒಳಗಾಗಿ ನೀಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸಂಬಂಧಪಟ್ಟ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕನ್ನಡ ಕಡ್ಡಾಯ ಅಳವಡಿಕೆ ಕಾಯ್ದೆಯನ್ನು ಉಲ್ಲಂಘಿಸುವ ಶಾಲೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಅನೇಕ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳಿದ್ದು ಅವುಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲಾಗಿದೆಯೇ ಎಂಬುದನ್ನೂ ಸಹ ಖಾತ್ರಿಪಡಿಸಿಕೊಂಡು, ಕನ್ನಡಿಗರಿಗೆ ಉದ್ಯೋಗ ನೀಡದ ಕಂಪೆನಿಗಳ ಪರವಾನಿಗೆ ರದ್ದುಪಡಿಸಲು ಜಿಲ್ಲಾಧಿಕಾರಿಗಳು ಸರಕಾರಕ್ಕೆ ಶಿಫಾರಸು ಮಾಡುವಂತೆ ಅವರು ತಿಳಿಸಿದರು.

ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ಮಾತನಾಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇರುವಂತೆ ಬೇರೆ ರಾಜ್ಯಗಳಲ್ಲೆಲ್ಲೂ ಭಾಷೆಗೆ ಸಂಬಂಧಿಸಿದ ಪ್ರಾಧಿಕಾರ ಎಂಬುದಿಲ್ಲ. ಆದರೂ ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಸ್ಥಳೀಯ ಭಾಷೆಯನ್ನೇ ಆಡಳಿತ ಭಾಷೆಯನ್ನಾಗಿ ಬಳಸುತ್ತಿರುವುದು ಅಲ್ಲಿನ ಇಚ್ಛಾಶಕ್ತಿಗೆ ನಿದರ್ಶನವಾಗಿದೆ. ಕರ್ನಾಟಕದಲ್ಲಿಯೂ ಸಹ ಅಂತಹ ಇಚ್ಛಾಶಕ್ತಿಯನ್ನು ಅಧಿಕಾರಿ/ನೌಕರರು ಪ್ರದರ್ಶಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಕರಿಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಪ್ರಾಧಿಕಾರದ ರಾಜ್ಯ ಸದಸ್ಯ ಪ್ರಭಾಕರ್ ಪಟೇಲ್, ಗಿರೀಶ್ ಪಟೇಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಆರಾಧ್ಯ, ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜೆ.ನರಸಿಂಹಮೂರ್ತಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News