‘ಕೊಡಗಿನ ನೀರು ಬೇಕು, ಪರಿಹಾರವನ್ನೇಕೆ ನೀಡಲಿಲ್ಲ’: ಸಿಎಂಗೆ ಸಾಹಿತಿ ಎಸ್.ಎಲ್.ಭೈರಪ್ಪ ಪತ್ರ

Update: 2018-11-15 17:05 GMT

ಬೆಂಗಳೂರು, ನ. 15: ‘ಮಳೆಗಾಗಿ ಕೊಡಗಿನಲ್ಲಿ ಕಾಡು ಬೆಳೆಸುವ ಕರ್ತವ್ಯ ಕರ್ನಾಟಕದ್ದು, ಅದರ ಫಲ ಉಣ್ಣುವ ಹಕ್ಕು ಮಾತ್ರ ತಮಿಳುನಾಡಿನದು. ಅಲ್ಲಿ ಆಗಿರುವ ಹಾನಿ ತುಂಬುವುದರಲ್ಲಿ ತನ್ನ ಕರ್ತವ್ಯವೇ ಇಲ್ಲ ಎಂಬಂತಿದೆ. ಆದುದರಿಂದ ಈ ಬಗ್ಗೆ ರಾಜ್ಯ ಸರಕಾರ, ಕೇಂದ್ರ ಅಥವಾ ನ್ಯಾಯಾಧೀಕರದಲ್ಲಿ ಹಕ್ಕೊತ್ತಾಯವನ್ನು ಮಂಡಿಸಬೇಕು’ ಎಂದು ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪ, ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಪತ್ರ ಬರೆದಿದ್ದಾರೆ.

‘ಕೊಡಗಿನಲ್ಲಿ ಮಳೆ ಬಂದರೆ ನೀರು ಬಿಡಿ ಎಂದು ತಮಿಳುನಾಡಿನವರು ಕರ್ನಾಟಕವನ್ನು ಒತ್ತಾಯಿಸುತ್ತಾರೆ. ನ್ಯಾಯಾಲಯದ ಮೊರೆ ಹೋಗುತ್ತಾರೆ. ಕೊಡಗಿನಲ್ಲಿರುವ ಕಾಡುಗಳಿಂದಾಗಿ ಮಳೆ ಸುರಿಯುತ್ತದೆ. ಕಾವೇರಿ ನದಿ ಹರಿಯುತ್ತದೆ. ಆದರೆ ಅಲ್ಲಿ ಅನಾಹುತ ಸಂಭವಿಸಿದಾಗ ತನ್ನ ಯಾವ ಕರ್ತವ್ಯವೂ ಇಲ್ಲವೆಂಬಂತೆ ತೆಪ್ಪಗಿದೆ’ ಎಂದು ಭೈರಪ್ಪ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅನೇಕರು ಸಹಾಯ ಮಾಡಿದ್ದಾರೆ. ಆದರೆ, ಪ್ರತಿಬಾರಿ ರಾಜ್ಯದ ನೀರಿನ ಪರಿಸ್ಥಿತಿಯನ್ನು ಬದಿಗಿಟ್ಟು, ಕಾದುಕುಳಿತಂತೆ ತಗಾದೆ ತೆಗೆದು ತಮಿಳುನಾಡು ನೀರು ಕಬಳಿಸುತ್ತಲೇ ಇದೆ. ಜತೆಗೆ, ಕೇಂದ್ರ ಹಾಗೂ ನ್ಯಾಯಾಲಯಗಳನ್ನೂ ಒತ್ತಾಯಿಸುವ ಕೆಲಸಕ್ಕೂ ತಮಿಳುನಾಡು ಮುಂದಿರುತ್ತದೆ. ಆದುದರಿಂದ ಇದನ್ನು ಕೇಂದ್ರ ಸರಕಾರ ಹಾಗೂ ನ್ಯಾಯಾಧಿಕರಣದ ಗಮನಕ್ಕೆ ತರುವುದು ಅಗತ್ಯ. ಅಲ್ಲದೆ, ನಮ್ಮ ಪಾಲಿನ ನೀರಿನ ಹಕ್ಕೊತ್ತಾಯ ಮಾಡುವ ವೇಳೆ ಈ ಅಂಶವನ್ನು ಸೇರಿಸಲು ಇದು ಆಧಾರವಾಗುತ್ತದೆ. ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಭೈರಪ್ಪ ಪತ್ರದಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News