ಬೆಂಗಳೂರು: ನ.18ಕ್ಕೆ 20ನೆ ರಾಷ್ಟ್ರೀಯ ವಾರ್ಷಿಕ ಸಮ್ಮೇಳನ

Update: 2018-11-15 17:01 GMT

ಬೆಂಗಳೂರು, ನ.15: ಸಾರ್ಕ್ ರಾಷ್ಟ್ರಗಳಲ್ಲಿ ಅನಾಹುತ, ಪ್ರಾಕೃತಿಕ ದುರಂತ ಸಂದರ್ಭದಲ್ಲಿ ತುರ್ತುಚಿಕಿತ್ಸೆ ನಿರ್ವಹಣೆ ಕುರಿತು ವಿಶೇಷ ಚರ್ಚೆಯನ್ನು ಭಾರತೀಯ ತುರ್ತು ಚಿಕಿತ್ಸಾ ಸೇವಾ ಸಂಘವು ನ.18ರಂದು ನಗರದ ಲಲಿತ್ ಅಶೋಕ್ ಹೊಟೇಲ್‌ನಲ್ಲಿ, 20ನೆ ರಾಷ್ಟ್ರೀಯ ವಾರ್ಷಿಕ ಸಮ್ಮೇಳನವನ್ನು ಆಯೋಜಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಸೆಮಿಯ ಡಾ.ಎ.ಎನ್.ವೆಂಕಟೇಶ್ ಮಾತನಾಡಿ, ಇಸ್ರೋ ಸಹಯೋಗದಲ್ಲಿ ಅಂತರಿಕ್ಷ ತಂತ್ರಜ್ಞಾನವನ್ನು ಬಳಸಿಕೊಂಡು ಅತ್ಯಂತ ನಿಖರವಾಗಿ ಲೋಪದೋಷ ರಹಿತ ತುರ್ತು ಚಿಕಿತ್ಸೆ ನೀಡುವ ಯೋಜನೆಯನ್ನು ಕೈಗೊಳುತ್ತೇವೆ ಹಾಗೂ ಅಂತರ್‌ರಾಷ್ಟ್ರೀಯ ಗುಣಮಟ್ಟದ ಸೇವೆಯನ್ನು ಎಲ್ಲರ ಕೈಗೆಟುಕುವಂತೆ ಒದಗಿಸಲು ಪ್ರಯತ್ನಿಸುತ್ತೇವೆಂದು ತಿಳಿಸಿದರು.

ತುರ್ತು ಚಿಕಿತ್ಸೆಯ ಗುಣಮಟ್ಟವನ್ನು ಉನ್ನತ ದರ್ಜೆಗೆ ಏರಿಸುವುದು, ವಿಶೇಷ ಪರಿಣಿತಿಯನ್ನು ಸಾಧಿಸುವುದು ಸೇವಾಸಂಘದ ಉದ್ದೇಶವಾಗಿದೆ. ಈ ಗುರಿಯನ್ನು ಸಾಧಿಸಲು ಅಗತ್ಯ ಶಿಕ್ಷಣ ನೀಡುವುದು, ವೈದ್ಯರು ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡುವುದು, ಸಂತ್ರಸ್ತರಿಗೆ ಚಿಕಿತ್ಸೆ ನೀಡಲು ಉತ್ತಮ ಗುಣಮಟ್ಟದ ವಿಧಾನಗಳನ್ನು ಅಭಿವೃದ್ಧಿಗೊಳಿಸುವುದು ಮುಂತಾದ ವಿಷಯಗಳಿಗೆ ಸೇವಾ ಸಂಘ ಬದ್ಧವಾಗಿದೆ ಎಂದು ಹೇಳಿದರು.

ಭಾರತ ಮತ್ತು ಸಾರ್ಕ್ ರಾಷ್ಟ್ರಗಳಲ್ಲಿ ತುರ್ತು ಚಿಕಿತ್ಸೆ ವಿಷಯದಲ್ಲಿ ಮಾಡಿರುವ ಸಾಧನೆ ಹಾಗೂ ಪ್ರಗತಿಯನ್ನು ವಿಶ್ವ ತುರ್ತು ಚಿಕಿತ್ಸೆ ವಿಧಾನಗಳೊಂದಿಗೆ ಹೊಂದಾಣಿಕೆ ಮಾಡುವ ಕುರಿತು ಚರ್ಚಿಸುವುದು ಈ ವರ್ಷದ ಸಮ್ಮೇಳನದ ಪ್ರಧಾನ ವಿಷಯವಾಗಿದೆ. ಅಲ್ಲದೆ, ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅಶ್ವಿನ್ ಕುಮಾರ್ ಚೌಬೆ ಹಾಗೂ ರಾಜ್ಯ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಪಾಲ್ಗೊಳ್ಳಲಿದ್ದು, ಪರಿಣಿತ ವೈದ್ಯರು, ಶುಶ್ರೂಷಿಕಿಯರು ಸಮ್ಮೇಳನದಲ್ಲಿ ಭಾಗವಹಿಸುತ್ತಾರೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News