ಲಕ್ಷ ಸೇನ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶ

Update: 2018-11-16 18:25 GMT

ಮಾರ್ಕಮ್, ನ.16: ಭಾರತದ ಯುವ ಬ್ಯಾಡ್ಮಿಂಟನ್ ಆಟಗಾರ ಲಕ್ಷ ಸೇನ್ ಬಿಡಬ್ಲುಎಫ್ ವರ್ಲ್ಡ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ಇಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್ ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ 17ರ ಹರೆಯದ ಸೇನ್ ಚೈನೀಸ್ ತೈಪೆಯ ಚೆನ್ ಶಿಯಾವು ಚೆಂಗ್‌ರನ್ನು 15-21, 21-17, 21-14 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ.

ಈ ವರ್ಷದ ಜುಲೈನಲ್ಲಿ ಏಶ್ಯನ್ ಜೂನಿಯರ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಜಯಿಸಿರುವ ನಾಲ್ಕನೇ ಶ್ರೇಯಾಂಕದ ಸೇನ್ ಸೆಮಿ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಮಲೇಶ್ಯಾದ ಆದಿಲ್ ಶೊಲ್ಹೆ ಅಲಿ ಸಡಿಕಿನ್‌ರನ್ನು ಎದುರಿಸಲಿದ್ದಾರೆ.

ಲಕ್ಷ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು. ಎರಡು ಹಾಗೂ ಮೂರನೇ ಸುತ್ತಿನಲ್ಲಿ ಕ್ರಮವಾಗಿ ಮೆಕ್ಸಿಕೊದ ಅರ್ಮಾಂಡೊ ಗೈಟನ್ ಹಾಗೂ ಇಟಲಿಯ ಜಿಯೊವನ್ನಿ ಟೊಟಿ ಅವರನ್ನು ಮಣಿಸಿದ್ದರು.

ಇದೇ ವೇಳೆ ಪುರುಷರ ಡಬಲ್ಸ್‌ನಲ್ಲಿ ವಿಷ್ಣುವರ್ಧನ್ ಹಾಗೂ ಶ್ರೀಕೃಷ್ಣ ಸಾಯಿ ಕುಮಾರ್ ಇಂಡೋನೇಶ್ಯಾದ ಡ್ವಿಕಿ ರಫಿಯನ್ ರೆಸ್ಟು ಹಾಗೂ ಬೆರ್ನಾಂಡಸ್ ಬಗಾಸ್ ಕುಸುಮಾ ವರ್ದಾನರನ್ನು 21-11, 21-17 ನೇರ ಗೇಮ್‌ಗಳಿಂದ ಮಣಿಸುವುದೊಂದಿಗೆ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ. ಭಾರತದ ಜೋಡಿ ಮುಂದಿನ ಸುತ್ತಿನಲ್ಲಿ 10ನೇ ಶ್ರೇಯಾಂಕದ ಕೊರಿಯಾ ಜೋಡಿ ಟಾಯ್ ಯಂಗ್ ಶಿನ್ ಹಾಗೂ ಚಾನ್ ವಾಂಗ್‌ರನ್ನು ಎದುರಿಸಲಿದ್ದಾರೆ.

ಭಾರತದ ಇತರ ಸ್ಪರ್ಧಾಳುಗಳಾದ ಪ್ರಿಯಾಂಶು ರಜಾವತ್, ಆಲಾಪ್ ಮಿಶ್ರಾ ಹಾಗೂ ಕಿರಣ್ ಜಾರ್ಜ್ ಪುರುಷರ ಸಿಂಗಲ್ಸ್ ನ ಮೂರನೇ ಸುತ್ತಿನಲ್ಲಿ ಸೋತಿದ್ದಾರೆ.

ಮಾಳವಿಕಾ ಹಾಗೂ ಗಾಯತ್ರಿ ಗೋಪಿಚಂದ್ ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯಲ್ಲಿ ಕ್ರಮವಾಗಿ ಮೊದಲ ಹಾಗೂ ಎರಡನೇ ಸುತ್ತಿನಲ್ಲಿ ಸೋತು ಹೊರ ನಡೆದಿದ್ದಾರೆ. 8ನೇ ಶ್ರೇಯಾಂಕದ ಪೂರ್ವ ಬಾರ್ವೆ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದು, ಮೂರನೇ ಸುತ್ತಿನಲ್ಲಿ ಸೋತಿದ್ದಾರೆ.

ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಸೈನಾ ನೆಹ್ವಾಲ್ ಚಿನ್ನ ಜಯಿಸಿರುವ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ. 2008ರಲ್ಲಿ ಪುಣೆಯಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಸೈನಾ ಈ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News