ಸರಿತಾ, ಮನೀಶಾ ಪ್ರಿ-ಕ್ವಾರ್ಟರ್ ಫೈನಲ್‌ಗೆ

Update: 2018-11-16 18:28 GMT

ಹೊಸದಿಲ್ಲಿ, ನ.16: ಭಾರತದ ಹಿರಿಯ ಬಾಕ್ಸರ್ ಎಲ್. ಸರಿತಾದೇವಿ ಹಾಗೂ ಯುವ ಬಾಕ್ಸರ್ ಮನೀಶಾ ವೌನ್ ಎಐಬಿಎ ಮಹಿಳಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಶುಭಾರಂಭ ನೀಡಿದ್ದಾರೆ. 2006ರ ಚಾಂಪಿಯನ್ ಸರಿತಾದೇವಿ ಶುಕ್ರವಾರ ನಡೆದ 60 ಕೆಜಿ ವಿಭಾಗದಲ್ಲಿ ಸ್ವಿಟ್ಝರ್ಲೆಂಡ್‌ನ ಡಿಯಾನಾ ಸಾಂಡ್ರಾ ಬ್ರಗರ್ ವಿರುದ್ಧ 4-0 ಅಂತರದಿಂದ ಗೆಲುವು ಸಾಧಿಸಿದರು. ಸರಿತಾ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಐರ್ಲೆಂಡ್‌ನ ಕೆಲ್ಲಿ ಹ್ಯಾರಿಂಗ್ಟನ್‌ರನ್ನು ಎದುರಿಸಲಿದ್ದಾರೆ.

ಹರ್ಯಾಣದ 20ರ ಹರೆಯದ ಬಾಕ್ಸರ್ ಮನೀಶಾ ಅಮೆರಿಕದ ಕ್ರಿಸ್ಟಿನಾ ಕ್ರೂಝ್‌ರನ್ನು 54 ಕೆಜಿ ತೂಕ ವಿಭಾಗದಲ್ಲಿ ಐವರು ತೀರ್ಪುಗಾರರ ಒಮ್ಮತದ ತೀರ್ಪು (29-28, 30-27, 30-26, 30-26,29-28)ನೆರವಿನಿಂದ ಮಣಿಸಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿ ಸ್ಪರ್ಧಿಸಿದ ಮನೀಶಾ 36ರ ಹರೆಯದ ಅಮೆರಿಕದ ಬಾಕ್ಸರ್ ಕ್ರಿಸ್ಟಿನಾ ವಿರುದ್ಧ ಮೊದಲ ಸುತ್ತಿನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದರು. ಕ್ರಿಸ್ಟಿನಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಕಂಚಿನ ಪದಕ ಜಯಿಸಿದ್ದರು. ರವಿವಾರ ನಡೆಯಲಿರುವ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಮನೀಶಾ ವಿಶ್ವ ಚಾಂಪಿಯನ್ ಕಝಕ್‌ಸ್ತಾನದ ಡಿನಾ ರೊಲಮನ್‌ರನ್ನು ಎದುರಿಸಲಿದ್ದಾರೆ. ಕೆ.ಡಿ. ಜಾಧವ್ ಸ್ಟೇಡಿಯಂನಲ್ಲಿ ನಡೆದಿದ್ದ ಬಾಕ್ಸಿಂಗ್ ಸ್ಪರ್ಧೆಯನ್ನು ಮನೀಶಾರ ತಾಯಿ ಉಷಾರಾಣಿ ಹಾಗೂ ಅಜ್ಜಿ ಸರೋಜಾದೇವಿ ವೀಕ್ಷಿಸಿದರು. ‘‘ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾಕ್ಸಿಂಗ್ ಸ್ಪರ್ಧೆಯನ್ನು ಜಯಿಸಿದ್ದಕ್ಕೆ ತುಂಬಾ ಹೆಮ್ಮೆಯಾಗುತ್ತಿದೆ. ಈ ಹಂತಕ್ಕೆ ತಾನು ತಲುಪಬಲ್ಲೆನೆಂದು ಸಾಬೀತುಪಡಿಸಿದ್ದೇನೆ. ಮುಂದಿನ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ನನಗಿದೆ. ನನ್ನ ಮುಂದಿನ ಎದುರಾಳಿ ವಿಶ್ವ ಚಾಂಪಿಯನ್ ಬಾಕ್ಸರ್. ಆಕೆಯನ್ನು ನಾನು ಪೊಲೆಂಡ್‌ನಲ್ಲಿ ಮಣಿಸಿದ್ದೆ’’ ಎಂದು ಮನೀಶಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News