ಸರ್ದಾರ್ ಪಟೇಲ್ ಕೊರಗುತ್ತಿರಬಹುದೇ?

Update: 2018-11-16 18:37 GMT

ಪ್ರತಿಮೆಯ ನಿರ್ಮಾಣದಿಂದಾಗಿ ನರ್ಮದಾ ಜಿಲ್ಲೆಯ 72 ಹಳ್ಳಿಗಳು, ಸುಮಾರು 75 ಸಾವಿರ ಆದಿವಾಸಿಗಳು ಬಾಧಿತರಾಗಿದ್ದಾರೆಂದು ಮುದ್ರಣ ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮಗಳು ವರದಿ ಮಾಡಿವೆ. ಈ ಪೈಕಿ 32 ಗ್ರಾಮಗಳು ತೀವ್ರವಾಗಿ ತೊಂದರೆಗೀಡಾಗಿವೆ. ಆದಿವಾಸಿ ಜನರು, ತಮ್ಮ ನೆಲೆಗಳನ್ನು, ಜಮೀನು, ಜೀವನೋಪಾಯ, ಅರಣ್ಯ, ಜಲಸಂಪನ್ಮೂಲಗಳನ್ನು ಕಳೆದುಕೊಂಡಿದ್ದಾರೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ, ಸ್ಥಳಾಂತರಗೊಂಡು ಸಮಸ್ಯೆಗಳ ಸರಮಾಲೆಯನ್ನೇ ಎದುರಿಸುತ್ತಿದ್ದಾರೆ. 19 ಜಿಲ್ಲೆಗಳ ಗ್ರಾಮಸ್ಥರ ಪುನರ್ವಸತಿ ಪ್ರಕ್ರಿಯೆ ಇನ್ನೂ ಪೂರ್ತಿಯಾಗಿಲ್ಲ. 13 ಜಿಲ್ಲೆಗಳ ಜನತೆಗೆ ಜಮೀನು ಹಾಗೂ ಉದ್ಯೋಗದ ಭರವಸೆಗಳನ್ನು ಇನ್ನೂ ಈಡೇರಿಸಲಾಗಿಲ್ಲ.


 ನರ್ಮದಾ ಜಿಲ್ಲೆಯ ಕೆವಡಿಯಾ ಕಾಲನಿಯಲ್ಲಿ ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಅನಾವರಣಗೊಳಿಸುತ್ತಾ, ‘‘ಪಟೇಲ್ ಬಯಸಿದಂತೆ, ಅಭಿವೃದ್ಧಿಯ ಪ್ರಯೋಜನಗಳು, ಯಾವುದೇ ಭ್ರಷ್ಟಾಚಾರರಹಿತವಾಗಿ ಹಾಗೂ ಸ್ವಜನಪಕ್ಷಪಾತವಿಲ್ಲದೆ ಅತ್ಯಂತ ದುರ್ಬಲ ವರ್ಗಕ್ಕೆ ತಲುಪುವುದನ್ನು ಖಾತರಿಪಡಿಸಲು ಎಲ್ಲಾ ರೀತಿಯ ನಿರ್ಧಾರಗಳನ್ನು ಕೈಗೊಳ್ಳಲಾಗುವುದು’’ ಎಂದಿದ್ದರು. ಹಾಗಾದರೆ, ಗುಜರಾತ್‌ನ 22 ಗ್ರಾಮಪಂಚಾಯತ್‌ಗಳ ಸರಪಂಚರುಗಳು, ಬಹಿರಂಗ ಪತ್ರವೊಂದನ್ನು ಬರೆದು, ‘ಏಕತಾ ಪ್ರತಿಮೆ’ಯಂತಹ ಯೋಜನೆಗಳಿಗೆ ಅಪಾರ ಹಣವನ್ನು ವ್ಯಯಿಸಿದ್ದಕ್ಕಾಗಿ ಪ್ರಧಾನಿಯನ್ನು ಪ್ರಶ್ನಿಸಿದ್ದರು. ಸರ್ದಾರ್ ಸರೋವರ ಅಣೆಕಟ್ಟು ಸಮೀಪದ 72 ಗ್ರಾಮಗಳಲ್ಲಿ ವಾಸಿಸುವ ಜನರು, ಏಕತಾ ಪ್ರತಿಮೆಯ ಅನಾವರಣದ ದಿನದಂದು ಅಡಿಗೆಯನ್ನು ಮಾಡದೆ ಪ್ರತಿಭಟನೆ ವ್ಯಕ್ತಪಡಿಸಿದರು ಹಾಗೂ ಮೋದಿಯವರ ನೇತೃತ್ವದಲ್ಲಿ ನಡೆದ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಿದ್ದರು. ಒಂದು ವೇಳೆ ಮೇಲೆ ಉಲ್ಲೇಖಿಸಿದ ಪ್ರಧಾನಿಯ ಮಾತುಗಳು ನಿಜವೇ ಆಗಿದ್ದಲ್ಲಿ, ಆದಿವಾಸಿಗಳು ಹಾಗೂ ಸ್ಥಳೀಯ ಜನತೆ ಈ ‘ಅಭಿವೃದ್ಧಿ’ ಯೋಜನೆಯನ್ನು ಯಾಕೆ ವಿರೋಧಿಸಿದ್ದಾರೆ?.

 ಐತಿಹಾಸಿಕವಾಗಿ, ಅದರಲ್ಲೂ ಸ್ವಾತಂತ್ರ ದೊರೆತಾಗಿನಿಂದ ಭಾರತದಲ್ಲಾಗಿರುವ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಆದಿವಾಸಿಗಳನ್ನು ಹೊರಗಿಡಲಾಗಿದೆ. ಈ ಗ್ರಹಿಕೆಯೊಂದಿಗೆ, ಗುಜರಾತ್‌ನಂತಹ ‘ಅಭಿವೃದ್ಧಿ ಹೊಂದಿದ’ ರಾಜ್ಯದಲ್ಲಿ, ನರ್ಮದಾ ಜಿಲ್ಲೆಯಲ್ಲಿ ಮಾನವ ಅಭಿವೃದ್ಧಿಯ ಕುರಿತಾದ ಅಂಶಗಳ ಬಗ್ಗೆ ದೃಷ್ಟಿಹರಿಸುವುದು ಸಮಂಜಸವಾದುದಾಗಿದೆ.

ನರ್ಮದಾ ಜಿಲ್ಲೆಯಲ್ಲಿ ಜನರು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವಾಗ ಬರೋಬ್ಬರಿ 2,989 ಕೋಟಿ ರೂ. ವೆಚ್ಚದಲ್ಲಿ, ಕೇವಲ 42 ತಿಂಗಳುಗಳಲ್ಲಿ ನಿರ್ಮಾಣಗೊಂಡ ಈ ‘ಏಕತಾ ಪ್ರತಿಮೆ’ಯ ನಿರ್ಮಾಣ ಅಗತ್ಯವಾದರೂ ಏನಿತ್ತು ಎಂಬ ಬಗ್ಗೆ ವ್ಯಾಪಕವಾದ ಟೀಕೆಗಳು ವ್ಯಕ್ತವಾಗಿವೆ.
 ನರ್ಮದಾ ಜಿಲ್ಲೆಯ ಸಾಮಾಜಿಕ-ಆರ್ಥಿಕ ಅಂಕಿ ಅಂಶಗಳು ಅಲ್ಲಿ ವಾಸಿಸುವ ಸಾವಿರಾರು ಆದಿವಾಸಿಗಳ ಗೋಳಿನ ಕಥೆಯನ್ನು ಹೇಳುತ್ತವೆೆ. ಆ ಜಿಲ್ಲೆಯಲ್ಲಿ ಲಿಂಗಾನುಪಾತವು ಪ್ರತಿ ಸಾವಿರ ಗಂಡಸರಿಗೆ 961 ಮಹಿಳೆಯರಿದ್ದರೆ, ಸಾಕ್ಷರತಾ ಪ್ರಮಾಣವು ಶೇ. 72.31 ಆಗಿದೆ. ಜಿಲ್ಲೆಯಲ್ಲಿ ಸರಾಸರಿ ಶೇ. 56 ಮಂದಿ ಮಾತ್ರವೇ ಕುಡಿಯುವ ನೀರಿಗಾಗಿ ಕೈಪಂಪ್ ಬಳಸುತ್ತಿದ್ದಾರೆ. ಕೇವಲ ಶೇ. 17.21 ಮನೆಗಳಲ್ಲಿ ಮಾತ್ರವೇ ಶೌಚಾಲಯದ ವ್ಯವಸ್ಥೆಯಿದೆ.

 2016ರ ನರ್ಮದಾ ಜಿಲ್ಲಾ ಮಾನವ ಅಭಿವೃದ್ಧಿ ವರದಿಯ ಪ್ರಕಾರ, ಜಿಲ್ಲೆಯಲ್ಲಿ ಸಮೀಕ್ಷೆಗೊಳಗಾದ ಕುಟುಂಬಗಳ ಪೈಕಿ ಶೇ.72.13ರಷ್ಟು ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳಾಗಿವೆ. ಅವರಲ್ಲಿ ಶೇ.64.34 ಮಂದಿ ಕಡುಬಡತನದಲ್ಲಿ ಬದುಕುತ್ತಿದ್ದಾರೆ. ಕೇವಲ ಶೇ. 8.46 ಬಿಪಿಎಲ್ ಕುಟುಂಬಗಳು ಮಾತ್ರವೇ ಸಮರ್ಪಕ ಆಹಾರವನ್ನು ಹೊಂದಿಸಿಕೊಳ್ಳಲು ಶಕ್ತವಾಗಿವೆ. ಹಲವಾರು ಆಹಾರ ಭದ್ರತಾ ಯೋಜನೆಗಳು ಜಾರಿಯಲ್ಲಿರುವ ಹೊರತಾಗಿಯೂ ಹಲವು ಕುಟುಂಬಗಳು ಹಸಿವಿನಿಂದಲೇ ದಿನಗಳೆಯುತ್ತಿವೆ. ಶೇ.30.24 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ನರ್ಮದಾ ಜಿಲ್ಲೆಯ ಜನತೆಗೆ ಕೃಷಿ ಹಾಗೂ ಅದಕ್ಕೆ ಸಂಬಂಧಪಟ್ಟ ಉಪಚಟುವಟಿಕೆಗಳು ಮುಖ್ಯ ಜೀವನಾಧಾರವಾಗಿದೆ. ಶೇ.85ಕ್ಕೂ ಅಧಿಕ ಜನರು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಶೇ.25.4 ಮಂದಿ ಕೃಷಿಕರು ಹಾಗೂ ಶೇ. 74.96 ಮಂದಿ ಕೃಷಿ ಕಾರ್ಮಿಕರು. ಇಲ್ಲಿನ ಶೇ.82.28ರಷ್ಟು ಕುಟುಂಬಗಳ ಮಾಸಿಕ ಆದಾಯವು 5 ಸಾವಿರ ರೂ.ಗಿಂತಲೂ ಕಡಿಮೆಯಿದ್ದು, ಶೇ. 12.01 ಕುಟುಂಬಗಳು 10 ಸಾವಿರ ರೂ.ವರೆಗೆ ಸಂಪಾದಿಸುತ್ತವೆ ಮತ್ತು ಉಳಿದ ಶೇ.5.71ಕ್ಕೂ ಅಧಿಕ ಮಂದಿ 10 ಸಾವಿರ ರೂ.ಗಿಂತಲೂ ಕಡಿಮೆ ಮಾಸಿಕ ಆದಾಯವುಳ್ಳವರಾಗಿದ್ದಾರೆ. ದೆಡಿಯಾಪಾಡ ಹಾಗೂ ಸಾಗ್‌ಬರಾ ತಾಲೂಕುಗಳು, ಗುಜರಾತ್‌ನ ಅತ್ಯಂತ 50 ಹಿಂದುಳಿದ ತಾಲೂಕುಗಳ ಸಾಲಿಗೆ ಸೇರಿವೆ. ಕಳಪೆ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಮತ್ತು ಕಳಪೆ ಮಾನವ ಅಭಿವೃದ್ಧಿ ಸೂಚ್ಯಂಕಗಳು, ನರ್ಮದಾ ಜಿಲ್ಲೆಯ ಜನತೆಯ ಅದರಲ್ಲೂ ವಿಶೇಷವಾಗಿ ಆದಿವಾಸಿಗಳ ಶೋಚನೀಯ ಸ್ಥಿತಿಯನ್ನು ಎತ್ತಿತೋರಿಸುತ್ತವೆ.

ನರ್ಮದಾ ಜಿಲ್ಲೆಯ ಜನತೆಯ ಸಾಮಾಜಿಕ-ಆರ್ಥಿಕ ಸ್ಥಿತಿಗತಿಯನ್ನು ಗಮನಿಸಿದಾಗ, ಅವರು ತಮ್ಮ ಜೀವನೋಪಾಯ ಹಾಗೂ ಅಸ್ತಿತ್ವಕ್ಕಾಗಿ ಸಂಪೂರ್ಣವಾಗಿ ಜಮೀನನ್ನೇ ಅವಲಂಬಿಸಿರುವುದು ಕಂಡುಬರುತ್ತದೆ. ಇಡೀ ನರ್ಮದಾ ಜಿಲ್ಲೆಯ ಆಡಳಿತವು ಸಂವಿಧಾನದ ಐದನೇ ಶೆಡ್ಯೂಲ್‌ನ 244(1) ಕಲಮಿನ ನಿಯಮಾವಳಿಗಳಿಗೊಳಪಟ್ಟಿದೆ. 1996ರ ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆಗೊಂಡ ಪಂಚಾಯತ್‌ಗಳು (ಪಿಇಎಎಸ್) ಕಾಯ್ಡೆಯಡಿ ನರ್ಮದಾ ಜಿಲ್ಲೆಯ ಆಡಳಿತವನ್ನು ನಡೆಸುತ್ತಿದೆ.

 ಪಿಇಎಸ್‌ಎ ಕಾಯ್ದೆಯ ಪ್ರಕಾರ ಪರಿಶಿಷ್ಟ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳಿಗಾಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಮುನ್ನ ಹಾಗೂ ಇಂತಹ ಯೋಜನೆಗಳಿಂದ ಸಂತ್ರಸ್ತರಾದ ಜನರನ್ನು ಪುನರ್ವಸತಿಗೊಳಿಸುವ ಮುನ್ನ ಗ್ರಾಮ ಸಭೆ ಅಥವಾ ಪಂಚಾಯತ್‌ಗಳಲ್ಲಿ ಸೂಕ್ತ ಹಂತದವರೆಗೆ ಸಮಾಲೋಚನೆ ನಡೆಸಬೇಕಾಗುತ್ತದೆ.

 ಆದರೆ ಏಕತಾ ಪ್ರತಿಮೆಯ ನಿರ್ಮಾಣಕ್ಕಾಗಿ ಸ್ಥಳೀಯ ಜನರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಾಗ ಜಿಲ್ಲಾಡಳಿತವಾಗಲಿ ಅಥವಾ ರಾಜ್ಯ ಸರಕಾರವಾಗಲಿ ಸಂವಿಧಾನದ ಈ ನಿಯಮಗಳಿಗೆ ಬದ್ಧವಾಗಿ ನಡೆದುಕೊಂಡಿಲ್ಲ. ಈವರೆಗೆ ದೇಶದ ಅರ್ಧಾಂಶದಷ್ಟು ರಾಜ್ಯಗಳು ಮಾತ್ರವೇ ತಮ್ಮದೇ ಪೇಸಾ ನಿಯಮವನ್ನು ರೂಪಿಸಿವೆ. ಆದರೆ ‘ಮಾದರಿ ರಾಜ್ಯ’ವೆಂದು ಹೇಳಿಕೊಳ್ಳುತ್ತಿರುವ ಗುಜರಾತ್, ಪೇಸಾ ಕಾಯ್ದೆಯನ್ನು ಅನುಸರಿಸುವುದು ಬಿಡಿ, ಅಂತಹ ಯಾವುದೇ ಕಾನೂನುಗಳನ್ನು ಈವರೆಗೆ ರೂಪಿಸಿಲ್ಲ.

ಪ್ರತಿಮೆಯ ನಿರ್ಮಾಣದಿಂದಾಗಿ ನರ್ಮದಾ ಜಿಲ್ಲೆಯ 72 ಹಳ್ಳಿಗಳು, ಸುಮಾರು 75 ಸಾವಿರ ಆದಿವಾಸಿಗಳು ಬಾಧಿತರಾಗಿದ್ದಾರೆಂದು ಮುದ್ರಣ ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮಗಳು ವರದಿ ಮಾಡಿವೆ. ಈ ಪೈಕಿ 32 ಗ್ರಾಮಗಳು ತೀವ್ರವಾಗಿ ತೊಂದರೆಗೀಡಾಗಿವೆ. ಆದಿವಾಸಿ ಜನರು, ತಮ್ಮ ನೆಲೆಗಳನ್ನು, ಜಮೀನು, ಜೀವನೋಪಾಯ, ಅರಣ್ಯ, ಜಲಸಂಪನ್ಮೂಲಗಳನ್ನು ಕಳೆದುಕೊಂಡಿದ್ದಾರೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ, ಸ್ಥಳಾಂತರಗೊಂಡು ಸಮಸ್ಯೆಗಳ ಸರಮಾಲೆಯನ್ನೇ ಎದುರಿಸುತ್ತಿದ್ದಾರೆ. 19 ಜಿಲ್ಲೆಗಳ ಗ್ರಾಮಸ್ಥರ ಪುನರ್ವಸತಿ ಪ್ರಕ್ರಿಯೆ ಇನ್ನೂ ಪೂರ್ತಿಯಾಗಿಲ್ಲ. 13 ಜಿಲ್ಲೆಗಳ ಜನತೆಗೆ ಜಮೀನು ಹಾಗೂ ಉದ್ಯೋಗದ ಭರವಸೆಗಳನ್ನು ಇನ್ನೂ ಈಡೇರಿಸಲಾಗಿಲ್ಲ. ಸಾಮಾಜಿಕ ಹೋರಾಟಗಾರ್ತಿ, ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್, ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರದಲ್ಲಿ, ಏಕತಾ ಪ್ರತಿಮೆಯ ನಿರ್ಮಾಣಕ್ಕೆ ಸ್ಥಳೀಯ ಆದಿವಾಸಿಗಳನ್ನು ಕೈಬಿಟ್ಟು, ಚೀನಾದಿಂದ 1500 ಮಂದಿ ಕಾರ್ಮಿಕರನ್ನು ಕರೆತರುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸರಕಾರದ ಈ ಕ್ರಮದಿಂದಾಗಿ ಆದಿವಾಸಿಗಳು ತಮ್ಮ ಜೀವನೋಪಾಯ ಹಾಗೂ ಉಳಿವಿಗಾಗಿ ದೂರದ ಊರುಗಳಿಗೆ ವಲಸೆ ಹೋಗಬೇಕಾಯಿತೆಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ‘‘ಏಕತಾ ಪ್ರತಿಮೆಯ ಯೋಜನೆಗಾಗಿ ನಡೆದ ಭೂಸ್ವಾಧೀನ ಪ್ರಕ್ರಿಯೆಯಿಂದ ನರ್ಮದಾ ಜಿಲ್ಲೆಯ ಸುಮಾರು 13 ಜಿಲ್ಲೆಗಳ ಅಂದಾಜು 20 ಸಾವಿರ ಜನರು ನೇರವಾಗಿ ಬಾಧಿತರಾಗಿದ್ದಾರೆ’’ ಎಂದು ಸ್ಥಳೀಯ ಮಾನವಹಕ್ಕುಗಳ ಕಾರ್ಯಕರ್ತೆ ಆನಂದ್ ಮಝ್‌ಗಾಂವ್ಕರ್ ಹೇಳುತ್ತಾರೆ. ಈ ಯೋಜನೆಗೆ ಪಾರಿಸಾರಿಕ ಅನುಮೋದನೆ ಕೂಡಾ ದೊರೆತಿಲ್ಲವೆಂದು ಅವರು ತಿಳಿಸುತ್ತಾರೆ.

ನಿಯಮಾವಳಿಗಳನ್ನು ಉಲ್ಲಂಘಿಸಿ ಪ್ರತಿಮೆಗೆ ಬುನಾದಿ

‘ಏಕತಾ ಪ್ರತಿಮೆ’ ಯೋಜನೆಯನ್ನು ವಿವಿಧ ಸಾಂವಿಧಾನಿಕ ನಿಯಮಗಳ ನ್ನು ಹಾಗೂ ಸಂವಿಧಾನದ ಐದನೆ ಶೆಡ್ಯೂಲ್, ಪರಿಸರ ರಕ್ಷಣೆ ಕಾಯ್ದೆ 1986, ಪಿಇಎಸ್‌ಎ 1996, ಅರಣ್ಯ ಹಕ್ಕುಗಳ ಕಾಯ್ದೆ 2006 ಹಾಗೂ 2013ರ ಭೂಸ್ವಾಧೀನ ಪುನರ್ವಸತಿ ಕಾಯ್ದೆ (ಎಲ್‌ಎಆರ್‌ಆರ್)ಯಂತಹ ಕಾನೂನುಗಳ ಉಲ್ಲಂಘನೆಯ ಬುನಾದಿಯಲ್ಲಿ ನಿರ್ಮಿಸಲಾಗಿದೆ. ಆದಿವಾಸಿಗಳನ್ನು ಹೊರಗಿಟ್ಟ ಈ ಯೋಜನೆಯು, ಅವರಿಗೆ ಭೂಮಿಯ ಹಕ್ಕುಗಳನ್ನು ಹಾಗೂ ನ್ಯಾಯವನ್ನು ನಿರಾಕರಿಸಿದೆ.

‘ಪೇಸಾ’ ಪ್ರದೇಶಗಳಲ್ಲಿ ಭೂಸ್ವಾಧೀನದ ಕುರಿತ ನಿರ್ಧಾರವನ್ನು ಕೈಗೊಳ್ಳಲು ಗ್ರಾಮಸಭೆಯು ಯೋಗ್ಯವಾದ ಅಧಿಕಾರವನ್ನು ಹೊಂದಿದೆ. ಪರಿಶಿಷ್ಟ ಪ್ರದೇಶಗಳಲ್ಲಿ ಆದಿವಾಸಿಗಳ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವಾಗ, ಸಾಂವಿಧಾನಿಕವಾಗಿ, ಕಾನೂನಾತ್ಮಕವಾಗಿ ಹಾಗೂ ನೈತಿಕತೆಯೊಂದಿಗೆ ಕಾರ್ಯನಿರ್ವಹಿಸಬೇಕಾಗಿದ್ದ ಸರಕಾರವು ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ನಿರ್ಮಿಸುವಾಗ ಸಂವಿಧಾನವನ್ನು ವ್ಯಾಪಕವಾಗಿ ಉಲ್ಲಂಘಿಸಿದೆ. ನರೇಂದ್ರ ಮೋದಿಯವರು ಪ್ರತಿಮೆಯನ್ನು ಉದ್ಘಾಟಿಸುವುದಕ್ಕೆ ಒಂದು ದಿನ ಮುನ್ನ ಆದಿವಾಸಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಪ್ರತಿಭಟನೆಯನ್ನು ಹತ್ತಿಕ್ಕಲು ಅವರನ್ನು ಬಂಧಿಸಿದರು.

ಅಭಿವೃದ್ಧಿಯ ಪರಿಕಲ್ಪನೆಯ ಬಗ್ಗೆ ಗುಜರಾತ್ ಮಾತ್ರವಲ್ಲ ಇಡೀ ಭಾರತ ಮರುಚಿಂತಿಸಬೇಕಾದ ಅಗತ್ಯವಿದೆ. ಪರಿಸರ, ಜೀವವೈವಿಧ್ಯತೆ, ನ್ಯಾಯಪರತೆಯನ್ನು ಕಡೆಗಣಿಸಿ ಕೇವಲ ಆರ್ಥಿಕ ಬೆಳವಣಿಗೆಗಷ್ಟೇ ಅದು ಗಮನಹರಿಸುತ್ತದೆ. ಸ್ವಾತಂತ್ರ ನಂತರ ಅದರಲ್ಲೂ 1991ರ ಆರ್ಥಿಕ ಸುಧಾರಣೆಗಳ ಬಳಿಕ ಭಾರತವು ಈ ರೀತಿಯ ಅಭಿವೃದ್ಧಿಯ ದಾರಿಯನ್ನು ಹಿಡಿದಿದೆ. ಇಂತಹ ಅಭಿವೃದ್ಧಿಯು ಜನರ ನಡುವಿನ ಆರ್ಥಿಕ-ಸಾಮಾಜಿಕ ಅಸಮಾನತೆಗಳನ್ನು ವಿಸ್ತರಿಸಿದೆ. ನ್ಯಾಯ ಹಾಗೂ ಸ್ವಾತಂತ್ರದ ಚಿಂತನೆಗಳನ್ನು ಅಳವಡಿಸಿಕೊಂಡ ಜನ ಕೇಂದ್ರಿತ ಅಭಿವೃದ್ಧಿಯನ್ನು ನಾವು ಅನುಸರಿಸಬೇಕಾಗಿದೆ. ಖ್ಯಾತ ಅರ್ಥಶಾಸ್ತ್ರ ಅಮಾರ್ತ್ಯ ಸೇನ್ ಅವರು ಜನತೆಯ ಸ್ವಾತಂತ್ರವೇ ನಿಜವಾದ ಅಭಿವೃದ್ಧಿಯೆಂದು ಪ್ರತಿಪಾದಿಸಿರುವುದು, ಅಕ್ಷರಶಃ ನಿಜವೆಂಬುದನ್ನು ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಮನದಟ್ಟಾಗುತ್ತದೆ.


ಕೃಪೆ: deccanherald.com

Writer - ನಾಯಕರ ವೀರೇಶ

contributor

Editor - ನಾಯಕರ ವೀರೇಶ

contributor

Similar News