ಜೀಶಂಪ -ಸಾಹಿತ್ಯ - ಜಾನಪದ

Update: 2018-11-17 12:44 GMT
ಡಾ. ಜೀ.ಶಂ.ಪರಮಶಿವಯ್ಯನವರು

ಕರ್ನಾಟಕದಲ್ಲಿ ಜಾನಪದ ಅಧ್ಯಯನದ ರೂವಾರಿ ಡಾ. ಜೀ.ಶಂ.ಪರಮಶಿವಯ್ಯನವರು 1933ನೇ ನವೆಂಬರ್ 16ರಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಅಂಬಲಜೀರ ಹಳ್ಳಿಯಲ್ಲಿ ಜನಿಸಿದರು. ತಂದೆ ಶಂಕರಗೌಡ, ತಾಯಿ ರಂಗಮ್ಮ. ಹಳ್ಳಿಯ ಕೂಲಿಮಠದಲ್ಲಿ ವಿದ್ಯಾಭ್ಯಾಸ ಪ್ರಾರಂಭವಾಯಿತು. ಉಪಾಧ್ಯಾಯರಾದ ಸಣ್ಣ ನಂಜುಂಡಯ್ಯನವರು ಹೇಳುತ್ತಿದ್ದ ಅನೇಕ ಪುರಾಣ ಕತೆಗಳು ಬಾಲಕನಲ್ಲಿ ಆಸಕ್ತಿ ಮೂಡಿಸುತ್ತಿದ್ದವು. ಮುಂದೆ ವಿದ್ಯಾಭ್ಯಾಸಕ್ಕಾಗಿ ಮೈಸೂರಿನ ಅಕ್ಕನ ಮನೆಯಲ್ಲಿದ್ದಾಗ ಬೇಸರ ನೀಗಿಸಲು ರಾಮಾಯಣ, ಮಹಾಭಾರತ ಮತ್ತು ಭಾಗವತಗಳನ್ನು ಓದುತ್ತಿದ್ದರು. ಅನಂತರ ವರ್ಗವಾದ ಭಾವನ ಜೊತೆಗೆ ಬೆಂಗಳೂರಿಗೆ ಬಂದಾಗ ಕವಿ ಪು.ತಿ.ನ. ಅವರ ನೆರೆಮನೆಯ ವಾಸದ ಸುಯೋಗ ಲಭ್ಯವಾಯಿತು. ಆ ವಯಸ್ಸಿನಲ್ಲೇ ಜೀ.ಶಂ.ಪ.ರವರ ಕವಿಮನಸ್ಸು ಭೀಷ್ಮ ವಿಜಯ ನಾಟಕ ಕೃತಿಯಿಂದ ಪ್ರಕಟಗೊಂಡಿತು. ಆಗ ಪು.ತಿ.ನ. ಅವರ ಮೆಚ್ಚುಗೆಯ ನುಡಿಗಳು ಅವರನ್ನು ಹುರಿದುಂಬಿಸಿದವು. ಜೀ.ಶಂ.ಪ. ಅವರ ಕವನಗಳು ತಾಯಿನಾಡು ಪತ್ರಿಕೆಯಲ್ಲಿ ಪ್ರತಿವಾರವು ಪ್ರಕಟಗೊಳ್ಳುತ್ತಿದ್ದವು. ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಭೀಮಪ್ಪನ ಬೇಟೆ ಎಂಬ ಇನ್ನೊಂದು ನಾಟಕವನ್ನು ಬರೆದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದಾಗ ತಮ್ಮ ಗೆಳೆಯರ ಜೊತೆಗೆ ಸೇರಿ ತಾವರೆ, ಕಲಾಕ್ಷೇತ್ರ ಮುಂತಾದ ಸಾಂಸ್ಕೃತಿಕ ಸಂಘಗಳನ್ನು ಆರಂಭಿಸಿ, ಕೈ ಬರಹದ ಪತ್ರಿಕೆಗಳನ್ನು ಹೊರಡಿಸಿ ಸ್ನೇಹಿತರನ್ನು ಆ ರಂಗದಲ್ಲಿ ತೊಡಗಿಸಿಕೊಂಡರು. ಕವಿತೆ ಹಾಗೂ ಕಥೆಗಳ ಸಣ್ಣ ಪುಟ್ಟ ಪುಸ್ತಕಗಳನ್ನು ಬರೆದು ಪ್ರಕಟಿಸುತ್ತಿದ್ದರು. ಜಾನಪದ ವಿಶ್ವಕೋಶ, ಜಾನಪದ ಜಂಗಮ ಮುಂತಾಗಿ ಕೀರ್ತಿ, ಪ್ರತಿಷ್ಠೆಗಳನ್ನು ಪಡೆದ ಅವರ ದೈತ್ಯ ಪ್ರತಿಭೆಯು ಇಂತಹ ಸ್ವಪ್ರಯತ್ನಗಳಿಂದಲೇ ಸಾಧ್ಯವಾಯಿತು. ಈ ಸಾಹಿತ್ಯದ ಅಭಿರುಚಿ, ಶಕ್ತಿ ಬೆಳೆದು ಬಲಗೊಳ್ಳಲು ಏಕವ್ಯಕ್ತಿಯೇ ಒಂದು ಸಂಸ್ಥೆಯಂತಾಗಿ ಕರ್ನಾಟಕ ಜಾನಪದವನ್ನು ಅಂತರ್‌ರಾಷ್ಟ್ರೀಯ ಮಟ್ಟದವರೆಗೂ ಕೊಂಡೊಯ್ಯುವುದು ಸಾಧ್ಯವಾಯಿತು.

ಅವರು ತಮ್ಮ ಹೈಸ್ಕೂಲು ಜೀವನದಲ್ಲೇ ಬರೆದ 1,254 ಸಾಲುಗಳ 58 ಪುಟಗಳಿಂದ ಕೂಡಿದ ಸುದೀರ್ಘ ಕಥನಕವನ ದಿಬ್ಬದಾಚೆ ಅವರ ಪ್ರಕಟಗೊಂಡ ಪ್ರಥಮ ಪುಸ್ತಕ. ಇದಾದ ಒಂದು ವರ್ಷದಲ್ಲೇ ಜೀವನ ಗೀತೆ ಕವನ ಸಂಕಲನ ಪ್ರಕಟವಾಗುವ ಮೂಲಕ ಜೀಶಂಪರವರ ಸಾಹಿತ್ಯಿಕ ಜೀವನ ಅಧಿಕೃತವಾಗಿ ಆರಂಭಗೊಂಡಿತು. ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಕಟವಾಗುತ್ತಿದ್ದ ಪ್ರಬುದ್ಧ ಕರ್ನಾಟಕ ಸಾಹಿತ್ಯಿಕ ಪತ್ರಿಕೆಯಲ್ಲಿ ಜೀಶಂಪ ಅವರ ಅನೇಕ ಕಥೆ, ಕವನ, ಪ್ರಬಂಧಗಳು ಪ್ರಕಟಗೊಂಡವು. ಕೇವಲ ತಮ್ಮ ಬರವಣಿಗೆಯಿಂದಲೇ ವ್ಯಾಸಂಗದ ಖರ್ಚುವೆಚ್ಚಗಳನ್ನು ನಿಭಾಯಿಸುವ ಛಾತಿ ಧೀಮಂತ ಚೇತನ ಜೀ.ಶಂ.ಪರಮಶಿವಯ್ಯನವರದು. ಎಂ.ಎ. ಪದವೀಧರರಾಗುವ ವೇಳೆಗೆ ಕಾವಲುಗಾರ ಮತ್ತು ಇತರ ಕಥೆಗಳು, ಮಬ್ಬು ಜಾರಿದ ಕಣಿವೆಯಲ್ಲಿ ಎಂಬ 2 ಕಥಾ ಸಂಕಲನಗಳು ಹಾಗೂ ಅವರ ನೆನೆದೇವು ಎಂಬ ಜಾನಪದ ಗೀತೆಗಳ ಸಂಕಲನ ಪ್ರಕಟವಾಗಿದ್ದವು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಪ್ರಜಾವಾಣಿ ಕಥಾಸ್ಪರ್ಧೆಯಲ್ಲಿ ಸತತವಾಗಿ 3 ಬಾರಿ ಬಹುಮಾನ ಗಳಿಸಿ ಹ್ಯಾಟ್ರಿಕ್ ಸಾಧಿಸಿದ ಹಿರಿಮೆ ಅವರದು.

ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯ ರಚನೆಯಲ್ಲಿ ತೊಡಗಿದ್ದ ಜೀಶಂಪ ಅವರ ಮನಸ್ಸು ಚಿಕ್ಕಂದಿನಿಂದಲೇ ಯಕ್ಷಗಾನದೆಡೆಗೆ ಒಲಿದಿತ್ತು. ಜೀಶಂಪ ಅವರು ಜೂನಿಯರ್ ಇಂಟರ್‌ಮೀಡಿಯೇಟ್ ವಿದ್ಯಾರ್ಥಿಯಾಗಿದ್ದಾಗಲೇ 1950ರ ಸುಮಾರಿನಲ್ಲಿ ಜನಪದ ಗೀತೆಗಳನ್ನು ಸಂಗ್ರಹಿಸಲು ಆರಂಭಿಸಿದರು. ಹೀಗೆ ಅವರ ಜಾನಪದ ಅಧ್ಯಯನದ ಬೀಜಾಂಕುರವು ವಿದ್ಯಾರ್ಥಿದೆಸೆಯಲ್ಲೇ ಆಯಿತು. ಗೀತೆಗಳ ಮೂಲಕ ಜಾನಪದ ಸಂಗ್ರಹಣೆ ಮಾಡಿದ ಅವರು ತಾವು ಸಂಗ್ರಹಿಸಿದ ಜನಪದ ಸಾಹಿತ್ಯವನ್ನು ಗದ್ಯರೂಪದಲ್ಲಿ ಪರಿಚಯಿಸಲು ನಾನಾ ರೀತಿಯ ಲೇಖನಗಳನ್ನು ಪ್ರಮುಖ ಪತ್ರಿಕೆಗಳಲ್ಲಿ ಬರೆಯತೊಡಗಿದರು. ಅವರ ಈ ಕಾರ್ಯವನ್ನು ರಾಷ್ಟ್ರಕವಿ ಕುವೆಂಪು ಹಾಗೂ ಪ್ರೊ. ದೇ. ಜವರೇಗೌಡರು ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಆನಂತರ ಅವರ ‘ಮಬ್ಬು ಜಾರಿದ ಕಣಿವೆ’ಯಲ್ಲಿ ಕಥಾ ಸಂಕಲನವು ಹೊರಬಂದಿತು. ಜೀಶಂಪ ಅವರ ಪ್ರತಿಭೆ, ಚಟುವಟಿಕೆಗಳನ್ನು ಕಂಡ ದೇ.ಜ.ಗೌ. ಅವರು ಮುಂದೆ ವಿಶ್ವವಿದ್ಯಾನಿಲಯಕ್ಕೆ ಆಹ್ವಾನಿಸಿ ಮಾನಸ ಗಂಗೋತ್ರಿಯಲ್ಲಿ ಜಾನಪದಕ್ಕೆ ದುಡಿಯಲು ಒಂದು ವಿಶೇಷ ಸ್ಥಾನವನ್ನು ಕಲ್ಪಿಸಿದರು. ಅಲ್ಲಿ ಜಾನಪದ ವಿಭಾಗವನ್ನು ತೆರೆದು ಅದರ ಮುಖ್ಯಸ್ಥರನ್ನಾಗಿ ಜೀಶಂಪ ಅವರನ್ನು ನೇಮಿಸಿ, ಜಾನಪದ ವಸ್ತು ಸಂಗ್ರಹಾಲಯದ ನಿರ್ಮಾಣದ ಜವಾಬ್ದಾರಿಯನ್ನು ಅವರಿಗೆ ವಹಿಸಿದರು. ತಮ್ಮ ಪಾಲಿಗೆ ಬಂದ ಈ ಕರ್ತವ್ಯವನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಿದ ಜೀಶಂಪ ಅವರು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗಕ್ಕೆ ವಿಶ್ವವಿಖ್ಯಾತಿಯನ್ನು ತಂದುಕೊಟ್ಟರು. ಇಂದು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಜಾನಪದ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಗ್ರಹ ಮತ್ತು ಅಧ್ಯಯನಗಳಿಗೆ ನೇರವಾಗಿ ಜೀಶಂಪ ಅವರೇ ಕಾರಣವಾಗಿದ್ದು, ಅಧ್ಯಯನಕಾರರ ಸ್ಫೂರ್ತಿಯ ಸೆಲೆ ಅನಿಸಿದರು.

ಕರ್ನಾಟಕದಲ್ಲಿ 60ರ ದಶಕಕ್ಕೂ ಮೊದಲು ಜನಪದ ಗೀತೆಗಳ ಸಂಗ್ರಹವನ್ನು ಹೊರತು ಪಡಿಸಿ ಜಾನಪದ ಕ್ಷೇತ್ರಕ್ಕೆ ನಿರ್ದಿಷ್ಟ ನಿಶ್ಚಿತ ವೈಜ್ಞಾನಿಕ ಗುರಿಗಳೊಂದೂ ರೂಪಿತವಾಗಿರಲಿಲ್ಲ. ಇನ್ನೂ ಕನ್ನೆನೆಲವಾಗಿ ಉಳಿದಿದ್ದ ಜಾನಪದ ರಂಗಕ್ಕೆ ಪ್ರವೇಶ ಮಾಡಿದ ಜೀಶಂಪ ಅವರು ದೀರ್ಘಕಾಲವನ್ನು ಅದಕ್ಕಾಗಿ ಮುಡುಪಿಟ್ಟು ವ್ಯಾಪಕವಾದ ಕ್ಷೇತ್ರಕಾರ್ಯದಲ್ಲಿ ತೊಡಗಿದರು. ಅಂತರ್‌ರಾಷ್ಟ್ರೀಯ ಜಾನಪದ ಅಧ್ಯಯನದ ಧೋರಣೆಗಳನ್ನು ತಮ್ಮ ಅಧ್ಯಯನಕ್ಕೆ ಅಳವಡಿಸಿಕೊಂಡು ದೇಶೀಯವಾದ ಸ್ವಂತ ಧೋರಣೆಗಳನ್ನು ರೂಪಿಸಿಕೊಂಡು ಮಾಡಿದ ಮಹತ್ವದ ಅಧ್ಯಯನದ ಫಲಶ್ರುತಿಯೇ ದಕ್ಷಿಣ ಕರ್ನಾಟಕದ ಜನಪದ ಕಾವ್ಯ ಪ್ರಕಾರಗಳು ಎಂಬ ಪಿಎಚ್.ಡಿ. ಮಹಾಪ್ರಬಂಧವಾಗಿದೆ. ಈ ಕೃತಿಯು ಜೀಶಂಪ ಅವರ ವಿಸ್ತೃತವಾದ ವ್ಯಾಸಂಗ ಹಾಗೂ ಸಮಗ್ರ ದೃಷ್ಟಿಗೆ ನಿದರ್ಶನವಾಗಿದೆ. ಇಲ್ಲಿ ಪ್ರಾಥಮಿಕ ಹಂತದಿಂದ ಜಾನಪದದ ಪರಿಚಯವನ್ನು ಮಾಡಿಕೊಡುತ್ತಾ ಸ್ವರೂಪವನ್ನು ಸಂಶೋಧನೆ ನಡೆಸಿ, ಹೊಸ ಸಂಪ್ರದಾಯಗಳು ಹಾಗೂ ಸಾಹಿತ್ಯವನ್ನು ಪ್ರಥಮಬಾರಿಗೆ ಶಾಸ್ತ್ರೀಯ ಅಧ್ಯಯನಕ್ಕೆ ಒಳಪಡಿಸಿದರು. ಇವುಗಳಲ್ಲಿ ಮಲೆಯಮಾದೇಶ್ವರ ದೇವರ ಗುಡ್ಡರ ಸಂಪ್ರದಾಯ, ಮಂಟೇಸ್ವಾಮಿ ಪರಂಪರೆಯ ನೀಲಗಾರ ಸಂಪ್ರದಾಯ, ಎಲ್ಲಮ್ಮನ ಜೌಡಿಗೆ ಸಂಪ್ರದಾಯ, ಕಾಡುಗೊಲ್ಲರ ಜುಂಜಪ್ಪ ಸಂಪ್ರದಾಯ, ಇವಲ್ಲದೆ ಲೌಖಿಕ ಕಾವ್ಯ ಸಂಪ್ರದಾಯಗಳಲ್ಲಿ ಹೆಳವರು, ಕಿನ್ನರಿಜೋಗಿಗಳು, ಕರಪಾಲದವರು ಮುಂತಾಗಿ ಕನ್ನಡ ವೃತ್ತಿಗಾಯಕರ ಚರಿತ್ರೆ, ಸಂಪ್ರದಾಯ ಮತ್ತು ಕಲಾ ಪ್ರಪಂಚದ ಮೇಲೆ ಹೊಸ ಬೆಳಕನ್ನು ಚೆಲ್ಲಿದರು.

ಜೀಶಂಪ ಅವರ ಪಿಎಚ್.ಡಿ. ಅಲ್ಲದೆ ನಮ್ಮ ಜನಪದ ಸಾಹಿತ್ಯ, ಜನಪದ ಸಾಹಿತ್ಯ ಸಮೀಕ್ಷೆ, ಜಾನಪದ : ಕೆಲವು ಮುಖಗಳು, ಜಾನಪದ ಸಂಗಮ, ಜಾನಪದ, ಜಾನಪದ ಕಲಾವಿಹಾರ ಮುಂತಾದ ಪ್ರಮುಖ ಕೃತಿಗಳೇ ಅಲ್ಲದೆ ನಮ್ಮ ಜನಪದ ಕಲೆಗಳು, ನಮ್ಮ ಅಡುಗೆಗಳು, ದಕ್ಷಿಣ ಕರ್ನಾಟಕದ ಹೆಂಗಸರ ಗೀತೆಗಳು, ದ.ಕ. ಗಂಡಸರ ಗೀತೆಗಳು, ಕಂಸಾಳೆಯವರು, ಕಿನ್ನರಿಜೋಗಿಗಳು, ಮಂಟೆಸ್ವಾಮಿ ನೀಲಗಾರರು, ಕರ್ನಾಟಕ ಜನಪದ ವಾದ್ಯಗಳು, ಮೈಲಾರನ ಗೊರವರು, ಸೂತ್ರದ ಗೊಂಬೆಯಾಟ ಮುಂತಾದ ಪ್ರತ್ಯೇಕ ಪ್ರತ್ಯೇಕ ಕಿರುಕೃತಿಗಳನ್ನು ಹೊರತಂದರು. ಇದಲ್ಲದೇ ಕರ್ನಾಟಕದಲ್ಲಿ ಜಾನಪದ ಅಧ್ಯಯನ, ದ.ಕ.ಜನಪದ ಸಾಹಿತ್ಯ, ಕರ್ನಾಟಕದಲ್ಲಿ ಜನಪದ ಅಧ್ಯಯನದ ನಾಲ್ಕು ಹಂತಗಳು, ಜಾನಪದ ಸಾಹಿತ್ಯ ದರ್ಶನ, ಪ್ರಾಕೃತಿಕ ಜಾನಪದ ರೂಪುಗೊಳ್ಳಬೇಕಾದ ಅಧ್ಯಯನದ ವಿಷಯ, ಜನಪದ ಕಲೆಗಳ ಗಂಭೀರ ಅಧ್ಯಯನದ ಅಗತ್ಯ, ಜಾನಪದ ಸಾಹಿತ್ಯ ಸಂಗ್ರಹದಲ್ಲಿ ನಮ್ಮ ಹೊಣೆ, ಜಾನಪದ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಜಿಲ್ಲಾ ಪರಿಷತ್ತುಗಳು ಕೈಗೊಳ್ಳಬೇಕಾದ ಕಾರ್ಯ, ಕರ್ನಾಟಕದ ಜಾನಪದದ ವೈಜ್ಞಾನಿಕ ಬಗೆಗಳು, ಜನಪದ ಕಥೆಗಳು, ಜನಪದ ಪದ್ಯ ಸಾಹಿತ್ಯ, ಜಾನಪದ ಗೃಹ ವಿಜ್ಞಾನ, ಜಾನಪದ ಜೀವನದಲ್ಲಿನ ಮದುವೆ ಸಂಪ್ರದಾಯ, ಮೂಡಲಪಾಯ, ತುಮಕೂರು ಜಿಲ್ಲೆಯ ಜಾನಪದ ಸಮೃದ್ಧಿ, ಕರ್ನಾಟಕ ರಂಗಭೂಮಿಯ ಪ್ರಕಾರಗಳು, ನಮ್ಮ ಜನಪದ ಕಲೆಗಳಿಗೆ ಆಗಬೇಕಾದುದೇನು? ಕಣ್ಮರೆಯಾಗುತ್ತಿರುವ ಜನಪದ ಕಲೆಗಳು, ಗೊರವರು ಯಾರು? ಜನಪದ ಸಾಹಿತ್ಯದಲ್ಲಿ ಹಾಸ್ಯ, ಜನಪದ ನಂಬಿಕೆಗಳು, ಕನಕದಾಸರ ಕೃತಿಗಳಲ್ಲಿ ಜಾನಪದ ಅಂಶಗಳು, ತಾಳವಾದ್ಯ : ಕಂಸಾಳೆ, ಕರಪಾಲ, ಭಾಗವಂತಿಕೆ ಸಂಪ್ರದಾಯ - ಹೀಗೆ ಜೀಶಂಪ ಅವರ ಲೇಖನಗಳ ಹರಹನ್ನು ನೋಡಿದಾಗ ಅವರ ಜಾನಪದ ಬಗೆಗಿನ ಕಾಳಜಿ ವ್ಯಕ್ತವಾಗುತ್ತದೆ.

ಜಾನಪದದ ಯಾವುದೇ ಪ್ರಕಾರವನ್ನು ಕೈಗೆತ್ತಿಕೊಂಡರೂ ಅವುಗಳ ಮೂಲ, ಪರಂಪರೆ, ಚಾರಿತ್ರಿಕ ಅಂಶಗಳ ಸಾಧ್ಯತೆ, ಅಳಿವು - ಉಳಿವು, ಸಂವರ್ಧನೆಯ ಅಗತ್ಯ ಮತ್ತು ರೀತಿ ಮುಂತಾದವುಗಳನ್ನು ಸವಿಸ್ತಾರವಾಗಿ ವಿವೇಚಿಸಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಅಪರಿಚಿತವಾಗಿದ್ದ ಹಲವಾರು ಪ್ರಕಾರಗಳನ್ನು, ಪ್ರಭೇದಗಳನ್ನು ಪರಿಚಯಿಸಿದ್ದಾರೆ. ಅವರ ನೆನೆದೇವು, ಜನಪದ ಖಂಡಕಾವ್ಯಗಳು, ಜನಪದ ಕಾವ್ಯ ಕಥೆಗಳು, ಮಂಟೇಸ್ವಾಮಿ ಕಾವ್ಯ, ಎರಡು ಜನಪದ ಕಾವ್ಯಗಳು, ಪಿರಿಯಾಪಟ್ಟಣದ ಕಾಳಗ, ಜನಪದ ವೀರಕಾವ್ಯಗಳು, ಹೆಳವರ ಕಾವ್ಯಗಳು, ಭಾಗವಂತಿಕೆ ಮೇಳ, ದೊಂಬಿದಾಸರ ಲಾವಣಿಗಳು, ಕರುಣಿ ಕಣ್ಣ ತೆರೆಯೇ, ಕನ್ನಡ ವೃತ್ತಿಗಾಯಕರ ಕಾವ್ಯಗಳು, ಗೆಜ್ಜೆ ಗಲಿರೆಂದವೋ, ಕನ್ನಡ ಜನಪದ ಕಥೆಗಳು - ಈ ಎಲ್ಲ ಕೃತಿಗಳನ್ನು ಗಮನಿಸಿದಾಗ ಅವರ ವೈಜ್ಞಾನಿಕ ಕ್ಷೇತ್ರಕಾರ್ಯದ ಮಹತ್ವದ ಅರಿವಾಗುತ್ತದೆ. ಪ್ರತಿಯೊಂದು ಕೃತಿಯ ಪರಿಚಯದ ಮೊದಲು ಆಯಾ ಕಾವ್ಯ ಅಥವಾ ಕಥೆಗಳು, ಪ್ರಚಲಿತವಿರುವ ಪ್ರದೇಶ, ಅದರ ವೃತ್ತಿಗಾಯಕರು, ಅವರಲ್ಲಿನ ಪ್ರಭೇದಗಳು, ಅದಕ್ಕೆ ಕಾರಣ - ಹೀಗೆ ಅಧ್ಯಯನಕ್ಕೆ ತಕ್ಕ ಮಾಹಿತಿಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಅವರ ಜಾನಪದ ಸಂಗ್ರಹಗಳ ಪ್ರಸ್ತಾವನೆಗಳೇ ಒಂದೊಂದು ಪ್ರತ್ಯೇಕ ಕೃತಿಯಾಗಿ ನಿಲ್ಲಬಲ್ಲ ಗಟ್ಟಿತನದಿಂದ ಕೂಡಿವೆ.

ಜೀಶಂಪ ಅವರು 1980ರಲ್ಲಿ ಆರಂಭಗೊಂಡ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಆರಂಭಿಕ ಸದಸ್ಯರಾಗಿ ದುಡಿದವರು. ಮುಂದೆ, 1991ರಲ್ಲಿ ಅಕಾಡಮಿ ಅಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಅಪಾರ. ಆ ದಿನಗಳಲ್ಲಿ ಹಳ್ಳಿಯ ಸಮಸ್ತರನ್ನು ಗುರುತಿಸಿ ವೇದಿಕೆಯ ಮೇಲೆ ತರುವ ಒಂದು ಹಳ್ಳಿಯ ಜಾನಪದ, ಒಂದು ಸುತ್ತಿನ ಜಾನಪದ, ಒಂದು ಪ್ರದೇಶದ ಜಾನಪದ ಕಾರ್ಯಕ್ರಮಗಳು ತುಂಬಾ ಯಶಸ್ವಿಯಾದವು. ಆ ಮೂಲಕ ಅಕಾಡಮಿಯು ಹಳ್ಳಿಯ ಜನಗಳಲ್ಲಿ ಒಂದು ಹೊಸ ಸ್ಪಂದನವನ್ನು ಉಂಟುಮಾಡಿತು. ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡಿದ ಹಿರಿಯರನ್ನು ಕುರಿತ ವಿಚಾರಗೋಷ್ಠಿಗಳ ವೈಶಿಷ್ಟದೊಂದಿಗೆ, ಜಾನಪದ ಅಧ್ಯಯನದ ಹೊಸ ಆಯಾಮಗಳ ಬಗೆಗಿನ ವಿಚಾರಗೋಷ್ಠಿಗಳು ವೈವಿಧ್ಯಮಯ ಎನಿಸಿದವು. ಮರೆಯಲಾರದ ಕಲಾವಿದರು, ಮರೆಯಲಾರದ ವಿದ್ವಾಂಸರು ಎಂಬ ಎರಡು ಕವಲಿನಲ್ಲಿ ಅನೇಕ ಜಾನಪದ ಸಂಬಂಧಿಯಾದ ಪುಸ್ತಕಗಳನ್ನು ಬೇರೆ ಬೇರೆ ವಿದ್ವಾಂಸರಿಂದ ಬರೆಸಿ ಅಚ್ಚುಹಾಕಿಸಿದರು. ವಿಶ್ವಜಾನಪದಕ್ಕೆ ಒದಗಿಸುವ ದೃಷ್ಟಿಯಿಂದ ಕನ್ನಡ ಜಾನಪದದ ಪ್ರಮುಖ ಪ್ರಕಾರಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿಸಿ ಐದು ಸಂಪುಟಗಳಲ್ಲಿ ಸಿದ್ಧಪಡಿಸಿದರು. ಹೀಗೆ ತಮ್ಮಿಳಗೆ ಜಾನಪದದ ಸರ್ವವನ್ನು ತುಂಬಿಕೊಂಡಿದ್ದ ಜೀಶಂಪ ಕನ್ನಡ ಜಾನಪದವನ್ನು ಉಳಿಸಿ, ಗಳಿಸಿ, ಪಸರಿಸುವತ್ತ ವಿಶ್ವಾತ್ಮಕ ನೆಲೆಯೆಡೆಗೂ ಮುಖ ಮಾಡಿದ ಅಂತರ್‌ರಾಷ್ಟ್ರೀಯ ಖ್ಯಾತಿಯನ್ನು ಪಡೆದ ಜಾನಪದ ವಿದ್ವಾಂಸರು. ಅನೇಕ ಜಾನಪದ ಕೃತಿಗಳ ಸಂಪಾದಕತ್ವದ ಹೊಣೆ ಹೊತ್ತು ಅವುಗಳನ್ನು ಅಚ್ಚುಕಟ್ಟಾಗಿ ಹೊರತಂದಿದ್ದಾರೆ. ಅವುಗಳಲ್ಲಿ ಆಯ್ದ ಜನಪದ ಕಥೆಗಳು, ಕರ್ನಾಟಕದ ಜಾನಪದ ಸಮೀಕ್ಷೆ, ಹೊನ್ನ ಬೆತ್ತೇವು ಹೊಲಕ್ಕೆಲ್ಲ (ಇತರರೊಂದಿಗೆ), ಮತ್ತು ಮುತ್ತ ತುಂಬೇವು ಕಣಜಕ್ಕೆ (ಇತರರೊಂದಿಗೆ) ಮುಂತಾದ ಮೌಲಿಕ ಕೃತಿಗಳು ಕನ್ನಡ ಜಾನಪದ ಸಾರಸ್ವತ ಲೋಕಕ್ಕೆ ಉತ್ತಮ ಕೊಡುಗೆಗಳೆನಿಸಿವೆ.

ಹೀಗೆ ಜೀಶಂಪ ಅವರು ಜಾನಪದ ಕ್ಷೇತ್ರಕ್ಕೆ ತಮ್ಮನ್ನೇ ಮುಡುಪಾಗಿಟ್ಟು ದುಡಿಯುವುದರೊಂದಿಗೆ, ಈ ದಾರಿಯಲ್ಲಿ ನಡೆಯುವಂತೆ ಅನೇಕರಿಗೆ ಮಾರ್ಗದರ್ಶನ ಮಾಡಿದರು, ಪ್ರೇರೇಪಿಸಿದರು. ಅವರ ಸಮಕಾಲೀನ ವಿದ್ವಾಂಸರಾದ ಡಾ.ಎ.ಕೆ. ರಾಮಾನುಜನ್, ಡಾ.ಎಲ್.ಆರ್. ಹೆಗಡೆ, ಪಿ.ಆರ್. ತಿಪ್ಪೇಸ್ವಾಮಿ, ಡಾ.ಎಸ್.ಕೆ. ಕರೀಂಖಾನ್ ಮುಂತಾದ ಅನೇಕರು ಹಾಗೂ ಜೀಶಂಪ ಪರಸ್ಪರ ಪ್ರಭಾವಿತರಾಗಿದ್ದರು. ಅನೇಕ ಜಾನಪದ ವಿದ್ವಾಂಸರ ಕಾರ್ಯಗಳಿಂದ ನಾಡಿನ ಆಯಾ ಭಾಗಗಳ ಜಾನಪದ ಸಂಪತ್ತನ್ನು ಅರಿಯಲು ತಮಗೆ ಸಹಾಯಕವಾಯಿತು ಎಂಬುದನ್ನು ಜೀಶಂಪ ಅವರೆ ಸೌಜನ್ಯದಿಂದ ಸ್ಮರಿಸಿದ್ದಾರೆ. ಇಂದು ಬದಲಾಗುತ್ತಿರುವ ಜಾನಪದ ಸಿದ್ಧಾಂತಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವ ಅಧ್ಯಯನಕ್ಕೆ ಜೀಶಂಪ ಅವರು ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣ. ಏಕೆಂದರೆ ಜೀಶಂಪ ತಾವೇ ಸ್ವತಃ ಸಂಶೋಧನೆ ಮಾಡಿ ಪ್ರಕಟಿಸಿದ ಕೃತಿಗಳು ಮಹತ್ವಪೂರ್ಣ ಕೊಡುಗೆ ಎಂದರೆ ತಮ್ಮ ನೂರಾರು ಶಿಷ್ಯರನ್ನು ಜಾನಪದ ಕ್ಷೇತ್ರಕ್ಕೆ ದೀಕ್ಷೆ ನೀಡಿ ದುಡಿಯುವಂತೆ ಮಾಡಿರುವುದು ಅಷ್ಟೇ ಮುಖ್ಯವಾದುದು. ಹಾಗೆಯೇ ಪ್ರೊ.ಹಿ.ಶಿ. ರಾಮಚಂದ್ರೇಗೌಡ, ಪ್ರೊ.ತೀ.ನಂ. ಶಂಕರನಾರಾಯಣ, ಪ್ರೊ. ಪುರುಷೋತ್ತಮ ಬಿಳಿಮಲೆ, ಪ್ರೊ. ಕಾಳೇಗೌಡ ನಾಗವಾರ, ಡಾ. ಅಂಬಳಿಕೆ ಹಿರಿಯಣ್ಣ, ಡಾ.ಪಿ.ಕೆ. ರಾಜಶೇಖರ, ಡಾ. ಬಸವರಾಜ ನೆಲ್ಲೀಸರ, ಡಾ.ಎ.ವಿ. ನಾವಡ, ಡಾ. ರಂಗಾರೆಡ್ಡಿ ಕೋಡಿರಾಮಪುರ, ಕ್ಯಾತನಹಳ್ಳಿ ರಾಮಣ್ಣ, ಟಿ.ಎಸ್. ರಾಜಪ್ಪ - ಹೀಗೆ ಇನ್ನೂ ಅನೇಕ ಅಧ್ಯಾಪಕರನ್ನು ಸಹಾಯಕ ಸಂಶೋಧಕರನ್ನು, ಜಾನಪದ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಜಾನಪದ ಸಂಗ್ರಹ, ವಿಶ್ಲೇಷಣೆಗೆ ಅನೇಕ ಜಾನಪದ ಮಹಾಪ್ರಬಂಧಗಳಿಗೆ ಮಾರ್ಗದರ್ಶಕರಾಗಿ ಕನ್ನಡ ಜಾನಪದವನ್ನು ಉಳಿಸಿ ಬೆಳೆಸಿದವರು ಜೀಶಂಪ.

ಈ ಎಲ್ಲ ಕಾರ್ಯಗಳಿಗೆ ಶಿಖರವಿಟ್ಟಂತೆ ಅವರು ಹಳ್ಳಿಯ ಕಲಾವಿದರೊಡನೆ ಬೆರೆತು ಗಳಿಸಿದ್ದು ಅಪಾರ. ಪ್ರಸಿದ್ಧ ಜಾನಪದ ವಿದ್ವಾಂಸರೆನಿಸಿದ್ದ ಜೀಶಂಪ ಅವರು ಜನಪದ ಕಲೆಯನ್ನು, ಕಲಾವಿದರನ್ನು ಅದೇ ನೆಲೆಯಲ್ಲಿ ಹತ್ತಿರದಿಂದ ಕಂಡವರು, ಕಲೆಗಳ ಪರಿಷ್ಕರಣೆ, ಕಲಾವಿದರಿಗೆ ಮನ್ನಣೆ ದೊರಕಿಸಿಕೊಡುವಲ್ಲಿ ಅವರ ಮನಸ್ಸು ಹಾಗೂ ಕಾರ್ಯ ಎರಡೂ ವಿಸ್ತೃತವಾದುದು. ಈ ಉದ್ದೇಶಕ್ಕಾಗಿ ಅವರು ಹಮ್ಮಿಕೊಂಡ ಕಾರ್ಯಯೋಜನೆಗಳು, ಕಮ್ಮಟಗಳು, ವಿಚಾರ ಸಂಕಿರಣಗಳು, ಕಲಾಮೇಳಗಳು ಅಗಣಿತ. ಇಂದು ದಸರ ಉತ್ಸವ, ನಾಡಹಬ್ಬಗಳು, ಸಂಸ್ಕೃತಿ ಉತ್ಸವಗಳು, ಮುಂತಾದ ಕಡೆಗಳಲ್ಲಿ ನಡೆಯುತ್ತಿರುವ ನಮ್ಮ ಜಾನಪದ ಕಲಾಮೇಳಗಳ ಇಂದಿನ ಜನಪ್ರಿಯತೆಗೆ ಜೀಶಂಪ ಅವರ ಪ್ರತಿಭಾಪೂರ್ಣ ನಿರ್ದೇಶನ ಮತ್ತು ಪರಿಶೋಧನೆಗಳು ಕಾರಣವಾಗಿದೆ.

ಹೀಗೆ ಜಾನಪದಕ್ಕಾಗಿ ತಮ್ಮ ಜೀವಿತಾವಧಿಯನ್ನು ಮುಡುಪಾಗಿಟ್ಟಿದ್ದ ಜೀಶಂಪ ಅವರು 1995ರ ಜೂನ್ 17ರಂದು ಬೆಂಗಳೂರಿನಲ್ಲಿ ನಿಧನರಾದರು.

ಜಾನಪದದ ಯಾವುದೇ ಪ್ರಕಾರವನ್ನು ಕೈಗೆತ್ತಿಕೊಂಡರೂ ಅವುಗಳ ಮೂಲ, ಪರಂಪರೆ, ಚಾರಿತ್ರಿಕ ಅಂಶಗಳ ಸಾಧ್ಯತೆ, ಅಳಿವು - ಉಳಿವು, ಸಂವರ್ಧನೆಯ ಅಗತ್ಯ ಮತ್ತು ರೀತಿ ಮುಂತಾದವುಗಳನ್ನು ಸವಿಸ್ತಾರವಾಗಿ ವಿವೇಚಿಸಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಅಪರಿಚಿತವಾಗಿದ್ದ ಹಲವಾರು ಪ್ರಕಾರಗಳನ್ನು, ಪ್ರಭೇದಗಳನ್ನು ಪರಿಚಯಿಸಿದ್ದಾರೆ. ಅವರ ನೆನೆದೇವು, ಜನಪದ ಖಂಡಕಾವ್ಯಗಳು, ಜನಪದ ಕಾವ್ಯ ಕಥೆಗಳು, ಮಂಟೇಸ್ವಾಮಿ ಕಾವ್ಯ, ಎರಡು ಜನಪದ ಕಾವ್ಯಗಳು, ಪಿರಿಯಾಪಟ್ಟಣದ ಕಾಳಗ, ಜನಪದ ವೀರಕಾವ್ಯಗಳು, ಕನ್ನಡ ಜನಪದ ಕಥೆಗಳು - ಈ ಎಲ್ಲ ಕೃತಿಗಳನ್ನು ಗಮನಿಸಿದಾಗ ಅವರ ವೈಜ್ಞಾನಿಕ ಕ್ಷೇತ್ರಕಾರ್ಯದ ಮಹತ್ವದ ಅರಿವಾಗುತ್ತದೆ.

Writer - ಡಾ.ಎಸ್. ನಾಗಮಣಿ

contributor

Editor - ಡಾ.ಎಸ್. ನಾಗಮಣಿ

contributor

Similar News