ಕನ್ನಡಕ್ಕೆ ಕುತ್ತು ತರುವ ಭಾಷಾಕೋಮುವಾದ

Update: 2018-11-17 13:02 GMT

ಮಾಲಿಕೆ-4

(ಕಳೆದ ವಾರದಿಂದ.....)

ಮೂಲಭೂತವಾದಿ ನೆಲೆಯ ಕನ್ನಡ ಅಸ್ಮಿತೆಯನ್ನು ಅದರ ಹುಟ್ಟಿನ ಮೂಲದಲ್ಲೇ ಗುರುತಿಸಿ ವಿರೋಧಿಸಿಕೊಂಡು ಬರಲಾಗಿದೆ. ನಿನ್ನೆ ಹಾಗು ಇಂದುಗಳೊಳಗಿನ ಅಂತರವು ಹೆಚ್ಚಿದಂತೆ ಜೀವನದಲ್ಲಿ ಅಭಾಸವು ತಲೆದೋರುತ್ತದೆ. ಸಾಂಪ್ರ ದಾಯಿಕ ಘನಶ್ರದ್ಧೆಗೆ, ಏನೆಲ್ಲವೂ ನಿನ್ನೆಗಳಲ್ಲಿ ಇದ್ದುದಾಗಿ ಕಾಣುತ್ತದೆ. ಆದರೆ, ನಾವು ಏನೆ ಕಲ್ಪಿಸಿಕೊಂಡರೂ ಇಡಿಯಾದ ನಿನ್ನೆಯೆ ಇಂದು ಆಗಿರಲಾರದು; ಆಗಬಾರದು. ನಿನ್ನೆಯ ಎಲ್ಲ್ಲವನ್ನೂ ಇಂದಿನಲ್ಲಿ ಉಳಿಸಿಕೊಳ್ಳುವ ಹಂಬಲವು, ವಿಕೃತ ಬುದ್ಧಿಯ ಅವಾಸ್ತವ ಭಾವನಾತ್ಮಕತೆಯ ಲಕ್ಷಣ; ಜೀವಂತ ಚೈತನ್ಯದ ಅಂಕುರ ಹೊಚ್ಚಹೊಸ, ನೂತನ ಎಂಬುದನ್ನರಿವ ಅದರಿಂದ ಆನಂದಿಸುವ ಮನೋಭಾವವು ಬಧಿರವಾದ ಲಕ್ಷಣವಿದು. ನಿನ್ನೆಯಲ್ಲಿಯೆ ಮುಗಿವ-ಪೂರ್ಣವಿರುವ ಸಂಸ್ಕೃತಿ ಜೀವಂತ ಚೈತನ್ಯಕ್ಕೆ ಎರವಾದ ಸಂಸ್ಕೃತಿಯಾಗಿರಲಿಕ್ಕೆ ಸಾಕು. ಇಂದಿನಲ್ಲಿ ಚಿಗುರಿ, ನಾಳೆಯಲ್ಲಿ ಕುಡಿವರಿದು ಹಬ್ಬುವ ಸರ್ಜಕ ಪ್ರವೃತ್ತಿಯ ಅಂತಃಶಕ್ತಿ ಎಂದೂ ಕುಗ್ಗದಂತೆ ನೋಡಿಕೊಳ್ಳುವ ದಕ್ಷತೆಯು ಬೇಕು, ರಾಜಕೀಯ ಸಾಮಾಜಿಕ ನೇತಾರದಲ್ಲಿ, ಈ ದಕ್ಷತೆಯ ಸಾಮಾಜಿಕ ಪ್ರಜ್ಞೆ ಇಲ್ಲದ ಸಂಸ್ಕೃತಿ, ವಿಕೃತ ನಾಗರಿಕತೆ ಯಾಗಿ ಪರಿಣಮಿಸುತ್ತದೆ ಎಂದು ಗತವನ್ನು ವೈಭವೀಕ ರಿಸುವ ಕುರಿತು ಹಿರಿಯ ಸಂಶೋಧಕ ಶಂಬಾ ಜೋಶಿ ಆಗಲೇ ಎಚ್ಚರಿಸಿದ್ದರು. ಮೂಲಭೂತವಾದಿ ನೆಲೆಯ ಕನ್ನಡ ಅಸ್ಮಿತೆ ಒಳಗಿರುವ ಸಂಸ್ಕತ ಪ್ರೇಮವನ್ನೂ ಪ್ರಶ್ನಿಸಲಾಗಿದೆ. ರಾಷ್ಟ್ರದಲ್ಲಿ ಮತೀಯ ಮೂಲಭೂತವಾದಿಗಳ ಪ್ರಭಾವ ಹೆಚ್ಚಾಗುತ್ತಿದ್ದಂತೆ ಸಂಸ್ಕೃತದ ಪ್ರಭಾವವನ್ನು ವಿಸ್ತರಿಸುವ ಹುನ್ನಾರವೂ ಹೆಚ್ಚಾಗುತ್ತಿರುವುದು ಕಾಕತಾಳೀಯವಲ್ಲ. ಇವೆರಡಕ್ಕೂ ಪರಸ್ಪರ ಸಂಬಂಧವಿದೆ. ಯಾಕೆಂದರೆ ಸಂಸ್ಕೃತ ಕಲಿಕೆ ಇಂದು ಕನ್ನಡದಂಥ ಜನಭಾಷೆಯ ಕಲಿಕೆಯಂತೆ ಧರ್ಮನಿರಪೇಕ್ಷವಾಗಿಲ್ಲ. ಅದು ಮಠಮಾನ್ಯಗಳ ಪವಿತ್ರ ಭಾಷೆಯಾಗಿ ಪರಿಗಣಿತವಾಗಿದೆ. ವೈದಿಕ ಮಠಮಾನ್ಯಗಳಷ್ಟೇ ಅಲ್ಲ, ವೀರಶೈವ, ಒಕ್ಕಲಿಗ, ಕುರುಬ, ನಾಯಕ - ಹೀಗೆ ಎಲ್ಲ ಮಠಗಳಲ್ಲಿ ಸಂಸ್ಕೃತಕ್ಕೆ ಇರುವ ಆದ್ಯತೆ, ಪವಿತ್ರತೆ ಕನ್ನಡಕ್ಕೆ ಇರುವುದಿಲ್ಲ. ಸಂಸ್ಕೃತದ ಬೋಧನಾಕ್ರಮದಲ್ಲೂ (ಪಠ್ಯಕ್ರಮವನ್ನು ಒಳಗೊಂಡಂತೆ) ಸನಾತನತೆಯದೇ ಮೇಲುಗೈಯಾಗಿದ್ದು ಇದು ಕನ್ನಡಕ್ಕೆ ಕುತ್ತು ತರುವ ಪ್ರಯತ್ನ ಎಂದು ಬರಗೂರರು ವಿರೋಧಿಸಿದ್ದಾರೆ.

ಮೂಲಭೂತವಾದಿ ನೆಲೆಯ ಚಿಂತನೆಗಳು ಖಚಿತ ಉದ್ದೇಶಕ್ಕಾಗಿಯೇ ಆಳಿದ ರಾಜರನ್ನು ವೈಭವೀಕರಿಸುವ ಕೆಲಸ ಮಾಡುತ್ತದೆ. ಈ ಸಂದರ್ಭದಲ್ಲಿ ರಾಜಮಹಾರಾಜರನ್ನೂ ಅವರ ಇಂತಹ ಕೆಲಸಗಳನ್ನು ಸ್ಮರಿಸುವಾಗ ಬೆವರು ಬಸಿದು ನಾಡು ಕಟ್ಟಿದ ಜನರನ್ನು ಮರೆಯಬಾರದು, ನಮ್ಮ ಪರಂಪರೆಯ ಎಲ್ಲ ಪ್ರತೀಕಗಳನ್ನು ಗೌರವಿಸುತ್ತಲೇ ಪ್ರಜಾಪ್ರಭುತ್ವದಲ್ಲಿ ಜನಪರಂಪರೆಯ ಪರಿಕಲ್ಪನೆಯನ್ನು ದೃಢಗೊಳಿಸುವುದು ಅಗತ್ಯ. ಎಂಬ ಎಚ್ಚರ ಕನ್ನಡ ಚಿಂತನೆಯಲ್ಲಿ ಮೂಡಿದೆ. ಆದರೆ ನಿಜವಾದ ತೊಡಕಿರುವುದು ಪ್ರಜಾಪ್ರಭುತ್ವೀಯ ವೌಲ್ಯಗಳಲ್ಲಿ ಅಚಲ ನಂಬಿಕೆಯಿರುವ ಕನ್ನಡದ ಪ್ರಮುಖ ಸಾಹಿತಿ-ಚಿಂತಕರಲ್ಲಿ ಆಳಿ ಹೋದ ರಾಜಪ್ರಭುತ್ವದ ಕೊಡುಗೆಯ ಬಗೆಗೆ ಅವಿಮರ್ಶಾತ್ಮಕ ಮೆಚ್ಚುಗೆ ಇರುವುದು. ನಿದರ್ಶನವಾಗಿ ಕುವೆಂಪು ಅವರ ನಾಡಗೀತೆಯಲ್ಲಿ ಇದನ್ನು ಗಮನಿಸಬಹುದು. ಸುಬ್ಬಣ್ಣ ಅವರು ಕವಿರಾಜಮಾರ್ಗವನ್ನು ವರ್ಣಿಸುವಾಗಲೂ ಇದನ್ನು ಗಮನಿಸಬಹುದು. ಪ್ರಜಾಪ್ರಭುತ್ವದ ವೌಲ್ಯಗಳನ್ನು ಎತ್ತಿ ಹಿಡಿಯುವ ಈ ದಿನಗಳಲ್ಲಿ ಸಾಮಂತಶಾಹಿಯ ನೆನಪುಗಳನ್ನು ನಮ್ಮ ಪರಂಪರೆಯ ಹೆಮ್ಮೆ ಎಂದು ಹಾಡುವ ಗೀತೆ ಸಹಜ ವಾಗಿಯೇ ವಿವಾದಗಳಿಗೆ ಅನುವು ಮಾಡಿಕೊಡುತ್ತದೆ ಎಂದು ಕೆ.ವಿ ನಾರಾಯಣ ಅವರು ವಿಶ್ಲೇಷಿಸುತ್ತಾರೆ.

ದೇಶದಲ್ಲಿ ಬೆಳೆಯುತ್ತಿರುವ ಕೋಮುವಾದ ಕನ್ನಡಕ್ಕೂ ಅಡ್ಡಿಯುಂಟು ಮಾಡುತ್ತಿದೆ. ಕನ್ನಡವು ಹಿಂದೂ ಭಾಷೆಯೆಂಬ ಮೂಢನಂಬಿಕೆಯು ಕೋಮುವಾದಕ್ಕೆ ಪೂರಕವಾಗುವ ಅಪಾಯವಿದೆ. ವೈಭವೀಕರಣದ ಪುನರುತ್ಥಾನವಾದೀ ನಿಲುವು ಅಪಾಯಕಾರಿಯೂ ಅಗುತ್ತಿದೆ. ಯಾಕೆಂದರೆ ತನ್ನೊಟ್ಟಿಗೆ ಬದುಕುತ್ತಿರುವ ಕನ್ನಡೇತರ ಭಾಷಿಕ ಸಮುದಾಯಗಳನ್ನು ಮತ್ತು ಹಿಂದೂ ಅಲ್ಲದ ಧಾರ್ಮಿಕ ಸಮುದಾಯಗಳನ್ನು ಇಲ್ಲಿ ಶತ್ರುಗಳನ್ನಾಗಿ ರೂಪಿಸಿಕೊಳ್ಳಲಾಗುತ್ತದೆ. ನಿಜಶತ್ರುಗಳಾದ ಹಿಂದಿ ಇಂಗ್ಲಿಷ್ ಸಂಸ್ಕೃತಗಳ ಸಾಮ್ರಾಜ್ಯಶಾಹಿ ಹೇರಿಕೆಯ ರಾಜಕಾರಣವನ್ನು ಕಡೆಗಣಿಸಲಾಗುತ್ತದೆ. ಕಲ್ಪಿತ ಶತ್ರುವನ್ನು ಸೃಷ್ಟಿಸಿ ಸಮಾಜದ ಎರಡು ಸಮುದಾಯಗಳಿಗೆ ಸಂಘರ್ಷಕ್ಕೆ ಹಚ್ಚಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುತ್ತ ಸಾಮಾಜಿಕ ಮುಂಚಲನೆಯನ್ನು ತಡೆಯುವುದು ಮೂಲಭೂತವಾದ ಮತ್ತು ಕೋಮುವಾದದ ಆಳದ ಉದ್ದೇಶ. ಭಾಷೆಯ ಮುಸುಕಿನಲ್ಲಿರುವ ಮೂಲಭೂತವಾದವೂ ಇದಕ್ಕೆ ಹೊರತಲ್ಲ. ಬೆಂಗಳೂರು ದೂರದರ್ಶನವು ತನ್ನ ದಿನದ ಕಾರ್ಯಕ್ರಮಗಳಲ್ಲಿ ಕೆಲವು ನಿಮಿಷಗಳ ಕಾಲ ಉರ್ದು ಭಾಷೆಯ ವಾರ್ತಾ ಪ್ರಸಾರವನ್ನು ಮಾಡುವ ನಿರ್ಧಾರವನ್ನು ಪ್ರಕಟಿಸಿದ ಕೂಡಲೇ ಚಳವಳಿ ಮೊದಲಾಯಿತು. ಈ ಚಳವಳಿಯು ಉರ್ದು ಭಾಷೆಗೆ ದೊರೆತ ಅವಕಾಶವನ್ನು ವಿರೋಧಿಸುವ ಭರದಲ್ಲಿ ಆ ಭಾಷೆಯನ್ನಾಡುವ ಮುಸ್ಲಿಮರನ್ನು ಗುರಿಮಾಡಿಕೊಂಡಿತ್ತು. ಕಾವೇರಿ ಸಮಸ್ಯೆ, ಉರ್ದು ಪ್ರಸಾರ ಘಟನೆಗಳು ಕರ್ನಾಟಕದಲ್ಲಿ ಬೇರು ಬಿಟ್ಟಿದ್ದ ಭಾಷಿಕ ಅಸಹನೆಯನ್ನು ತೋರಿಸುತ್ತವೆ. ಬೆಂಗಳೂರು ಆಕಾಶವಾಣಿಯಲ್ಲಿ ಜನರ ಆಡುನುಡಿಯಲ್ಲದ ಸಂಸ್ಕೃತ ಭಾಷೆಯಲ್ಲಿ ವಾರ್ತಾಪ್ರಸಾರದ ಬಗ್ಗೆ ಚಕಾರ ಎತ್ತದೆ ದೂರದರ್ಶನದಲ್ಲಿ ಉರ್ದು ಭಾಷೆಯಲ್ಲಿ ವಾರ್ತಾಪ್ರಸಾರ ವಿರೋಧಿಸಿ ನಡೆಸಿದ ಗಲಭೆಯ ಹಿಂದೆ ಮೂಲಭೂತವಾದಿ ನೆಲೆಯ ಅಂಶಗಳಿರುವುದನ್ನು ಕಂಡು ಆಕ್ರೋಶಗೊಂಡ ಬರಗೂರರು ಸಾವಿರಾರು ವರ್ಷಗಳಿಂದ ಭಾಷಿಕ ಮೂಲಭೂತವಾದವನ್ನು ವಿರೋಧಿಸಿಕೊಂಡು ಉಳಿದು ಬಂದ ಕನ್ನಡವನ್ನೇ ಭಾಷಿಕ ಮೂಲಭೂತವಾದದ ಬಾಗವಾಗಿಸುವ ಮನೋಧರ್ಮವೊಂದು ಇತ್ತೀಚೆಗೆ ಮೇಲುಗೈ ಪಡೆಯುತ್ತಿದ್ದು, ಈ ಕಾರಣದಿಂದಾಗಿ ಕನ್ನಡದ ಮೂಲಕ ಆಡಳಿತ, ಕನ್ನಡಿಗರಿಗೆ ಉದ್ಯೋಗದಲ್ಲಿ ಸಂಪೂರ್ಣ ಆಧ್ಯತೆಯಂತಹ ಕನ್ನಡದ ಅಭಿವೃದ್ಧಿಯ ಆಧ್ಯತೆೆಗಳು ಹಿಂದೆ ಸರಿಯುತ್ತಿವೆ ಎಂದು ಎಚ್ಚರಿಸಿದರು. ಮೂಲಭೂತವಾದಿ ಕನ್ನಡ ಅಸ್ಮಿತೆ ಮುಕ್ತ ಸಂಶೋಧನೆಗೂ ತಡೆ ಒಡ್ಡುತ್ತಿದೆ. ಇದರೊಂದಿಗೆ ತಮ್ಮ ಪೂರ್ವಗ್ರಹೀತಗಳನ್ನು ಸಾಧಿಸಲೆಂದೇ ಆಧಾರಗಳನ್ನು ಹುಡುಕಿ ಜೋಡಿಸುವ ಕನ್ನಡಾಭಿಮಾನಿ ಅಧ್ಯಯನಗಳ ಕೆಟ್ಟ ಪರಂಪರೆಯೂ ಆರಂಭವಾಗಿದೆ. ಶಂಗಂ ತಮಿಳಗಂ ಕೃತಿ ತನ್ನ ವಿಶ್ಲೇಷಣೆಯಲ್ಲಿ ಕಂಡುಕೊಂಡ ನಿಜವನ್ನು ದಿಟ್ಟತನದಲ್ಲಿ ಮಂಡಿಸಿದಂತೆ ಕನ್ನಡದಲ್ಲಿ ಮಂಡಿಸುವುದು ಕಷ್ಟಕರವಾಗುತ್ತಿದೆ. ಏಕೆಂದರೆ ಶಂಗಂ ತಮಿಳಗಂ ನಲ್ಲಿರುವ ಅನೇಕ ನಿರ್ಣಯಗಳನ್ನು ಮಂಡಿಸುವ ಕ್ರಮ ಮುಕ್ತವೂ, ಡೆಮಾಕ್ರಟಿಕ್ ಆಗಿದ್ದು ಇದಕ್ಕೆ ತದ್ವಿರುದ್ಧವೆನಿಸುವ, ಕನ್ನಡತನವನ್ನು ಒಂದು ಧಾರ್ಮಿಕ ನಿಷ್ಟೆಯನ್ನಾಗಿ ಅವಾಹಿಸಿಕೊಂಡು ಅದರ ಮೇಲೆ ಹುಂಬ ಅಭಿಮಾನ ಬೆಳೆಸುವ ಸಂಶೋಧಕರಿಗೂ, ಅವರ ಅನುಯಾಯಿಗಳಿಗೂ ಪ್ರಿಯವಾಗುವುದಿಲ್ಲ.

ಮೂಲಭೂತವಾದಿ ನೆಲೆಗೆ ವಿರುದ್ಧವಾಗಿ ಕನ್ನಡ ಭಾಷೆಯನ್ನು ಜಾತ್ಯತೀತ ಮತ್ತು ಧರ್ಮಾತೀತ ನೆಲೆಯಲ್ಲಿ ಕಟ್ಟಬಯಸುವ ಹಂಬಲ ಶತಮಾನದುದ್ದಕ್ಕೂ ಕ್ರಿಯಾಶೀಲವಾಗಿದೆ. ಅಂತಹ ಹಂಬಲವನ್ನು ಬಿ.ಎಂ.ಶ್ರೀ ಅವರ ಮಾತುಗಳಲ್ಲಿ ಕಾಣಬಹುದು: ನಮ್ಮ ಹಿರಿಯರು ಕೂಡಿಸಿಟ್ಟಿದ್ದ ನಿಕ್ಷೇಪ ಹಸ್ತಗತವಾಗಿ, ಸರ್ವರಿಗೂ ಸಮಾನವಾದ ಸಾಹಿತ್ಯವಾಗಿ, ಜೈನಕಾವ್ಯವೇ ಆಗಲಿ, ವೀರಶೈವ ಕಾವ್ಯವೇ ಆಗಲಿ, ಬ್ರಾಹ್ಮಣಕಾವ್ಯವೇ ಆಗಲಿ- ಆಗಲೇ ಸಿದ್ಧವಾಗಿರುವ ಕನ್ನಡದ ಬೈಬಲ್ ಜೊತೆಗೆ ಒಂದು ಕ್ರೈಸ್ತ ಕಾವ್ಯಮಾಲೆಯೂ ಮತ್ತು ಮಹಮ್ಮದೀಯರ ಕಾವ್ಯಮಾಲೆಯೂ ಶೀಘ್ರದಲ್ಲಿಯೇ ನಮ್ಮ ಇತರ ಸಾಹಿತ್ಯವಾಹಿನಿಗಳೊಡನೆ ತಾವೂ ಬಂದು ಕೂಡುವುದೆಂದು ನಾನು ಹಾರೈಸುತ್ತೇನೆ. ಯಾವ ಸಾಹಿತ್ಯದ ಶಾಖೆಯೇ ಆಗಲಿ ಎಲ್ಲವೂ ನಮ್ಮ ಕನ್ನಡವೆಂದೂ, ಆದುದರಿಂದ ನಮ್ಮದೆಂದೂ ಆದರಿಸುವ ಕಾಲ ಇದು. ಎಲ್ಲಾ ಸಂಸ್ಕೃತಿಗಳಲ್ಲಿಯೂ, ಎಲ್ಲಾ ಧರ್ಮಗಳಲ್ಲಿಯೂ, ಎಲ್ಲಾ ಕವಿತಾಮಾರ್ಗಗಳಲ್ಲಿಯೂ ವಿಮರ್ಶನಪೂರ್ವಕವಾದ ವಿಶ್ವಾಸವಿಟ್ಟು ಎಲ್ಲಾಕಡೆಗಳಿಂದಲೂ ಉತ್ತಮ ಪಕ್ಷವನ್ನು ಸ್ವೀಕಾರ ಮಾಡುವ ವಿಶಾಲಹೃದಯದ ಕಾಲ ಇದು.

ಕನ್ನಡ ಚಳವಳಿ ಎನ್ನುವುದು ಕೇವಲ ಭಾಷಾ ಚಳವಳಿಯಲ್ಲ, ಮೂಲಭೂತವಾದದ ವಿರುದ್ಧ ದನಿ ಮಾಡುವ ಜನಸಂಸ್ಕೃತಿ ಚಳವಳಿ ಎಂದು ಕನ್ನಡ ಭಾಷಾ ಚಳವಳಿ ಮೂಲಭೂತವಾದಿ ನೆಲೆಯತ್ತ ಹೊರಳಿದಾಗಲೆಲ್ಲಾ ಅದನ್ನು ಎಚ್ಚರಿಸುವ ಕೆಲಸವನ್ನು ಕನ್ನಡದ ಚಿಂತಕರು ಮಾಡುತ್ತಲೇ ಬಂದಿದ್ದಾರೆ. ಬಹಳಷ್ಟು ಜನ ವ್ಯತ್ಯಾಸ ವೈವಿಧ್ಯಗಳನ್ನು, ಭಿನ್ನ ಅಸ್ಮಿತೆಯವರನ್ನು ಸಹಿಸಲಾರರು. ಅವರನ್ನು ತಿರಸ್ಕರಿಸಿ, ದಾಳಿ ಮಾಡಿ ದಮನಿಸುವ ಅವಕಾಶಕ್ಕೆ ಕಾಯುತ್ತಿರುತ್ತಾರೆ. ರಾಷ್ಟ್ರೀಯ ಭಾವನೆಯಿಂದ, ಜನಾಂಗೀಯ ಭಾವನೆಯಿಂದ ಹುಟ್ಟಿದ ದ್ವೇಷದ ಪರಿಣಾಮ ಭಾಷೆಯ ಮೇಲೂ ಆಗುತ್ತದೆ. ಕನ್ನಡ ಚಿಂತನೆಯು ಮೂಲಭೂತವಾದಿ ನೆಲೆಯ ಈ ಅಪಾಯದ ವಿರುದ್ಧ ಮನುಷ್ಯ ಸಮಾನತೆಯಲ್ಲಿ ನಂಬಿಕೆ ಇರುವ ಪರಿಸರ ವೈವಿಧ್ಯದಲ್ಲಿ ಸಂತೋಷ ಕಾಣುವ, ಜೀವವೈವಿಧ್ಯದಂತೆಯೇ ನುಡಿ ವೈವಿಧ್ಯವನ್ನು ಉಳಿಸಿ ಬೆಳೆಸುವ ವಿವೇಕವನ್ನು ಉದ್ದಕ್ಕೂ ಮೂಡಿಸುತ್ತ ಬಂದಿದೆ. (ಲೇಖಕರು ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಸಂಸ್ಥೆಯಲ್ಲಿ ಸಹ ಸಂಶೋಧಕರು)

Writer - ಡಾ.ಸರ್ಜಾಶಂಕರ ಹರಳಿಮಠ

contributor

Editor - ಡಾ.ಸರ್ಜಾಶಂಕರ ಹರಳಿಮಠ

contributor

Similar News