ಅರಿತು ಅಕ್ಷರ ಕಲಿಸಿ

Update: 2018-11-17 14:03 GMT

ಭಾಗ 6

ಅಧ್ಯಯನ ಮತ್ತು ಅರಿವು

►ಇತಿಮಿತಿಗಳ ಅರಿತಾದ ಮೇಲೆ

ಪೋಷಕರು ಮತ್ತು ಶಿಕ್ಷಕರು ಕಲಿಕೆಯ ನ್ಯೂನತೆಗಳನ್ನು ಹೊಂದಿರುವ ಮಕ್ಕಳ ಬಗ್ಗೆ ಯಾವ ಬಗೆಯ ಧೋರಣೆಗಳನ್ನು ಹೊಂದಬೇಕು, ಯಾವ ರೀತಿಯಲ್ಲಿ ಅವರ ನ್ಯೂನತೆಗಳನ್ನು ಗುರುತಿಸಬೇಕು ಮತ್ತು ಒಂದೊಂದು ಮಗುವನ್ನೂ ಕೂಡ ವ್ಯಕ್ತಿಗತವಾಗಿ ಗಮನಿಸುತ್ತಾ ತಕ್ಕಂತಹ ಕಲಿಕೆಯ ವಿಧಾನವನ್ನು ರೂಪಿಸಿಕೊಳ್ಳಬೇಕು ಎಂಬ ಮಾನಸಿಕ ಮತ್ತು ಭಾವನಾತ್ಮಕ ಸಿದ್ಧತೆಗಳನ್ನು ಮಾಡಿಕೊಂಡಾಯಿತು. ಇನ್ನು ರೂಪಿಸಬೇಕಾಗಿರುವುದು ಯೋಜನೆ.

ಮಗುವಿನ ಕಲಿಕೆಗೆ ಮತ್ತು ಸಂವಹನಕ್ಕೆ ಬಹಳ ಮುಖ್ಯವಾಗಿ ಬೇಕಾಗಿರುವುದು ಭಾಷೆಯಾದ್ದರಿಂದ, ಭಾಷೆಯ ಕಲಿಕೆ ಬಗ್ಗೆಯೇ ಮೊದಲನೆ ಆದ್ಯತೆಯನ್ನು ನೀಡುವುದು ಒಳಿತೇನೋ ಎಂದೆನಿಸುತ್ತದೆ. ಇಂಗ್ಲಿಷೇ ಆಗಲಿ, ಅಥವಾ ಬೇರೆ ಯಾವುದೇ ಭಾಷೆಯಾಗಲಿ ಪೊನೋಲಜಿ ಅಂದರೆ ಆಡುವ ಪದಗಳ ಸ್ವರ ರಚನೆಯನ್ನು ಅಭ್ಯಾಸ ಮಾಡುವುದು. ಮಗುವು ಪದವನ್ನು ಉಚ್ಚರಿಸಲು ಕಷ್ಟಪಡುವುದೋ ಅಥವಾ ಬೇರೆಯೇ ರೀತಿಯಲ್ಲಿ ಹೇಳುವುದೋ; ಅದರ ಬಗ್ಗೆ ಗಮನ ಹರಿಸಬೇಕು. ಸಮಸ್ಯೆಯು ಇದ್ದಲ್ಲಿ ಮಗುವಿನ ಜೊತೆಯಲ್ಲಿ ನಿಧಾನವಾಗಿ ಮಾತಾಡುತ್ತಾ ನಾಲಿಗೆ, ಬಾಯಿ ಇವುಗಳನ್ನು ಹೇಗೆ ಉಪಯೋಗಿಸುತ್ತೇವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತಾ ಹೇಳಿಕೊಡಬೇಕು. ನೇರವಾಗಿ ಬರವಣಿಗೆಗೆ ಹೋಗಬಾರದು.

► ಧ್ವನ್ಯೋಚ್ಚಾರಣೆ

ಪೊನೋಲಜಿಯಲ್ಲಿ ಪ್ರಾಸದ ಪದಗಳನ್ನು ಹೇಳಿಕೊಡುವುದು, ಆಡಿದ ವಾಕ್ಯದಲ್ಲಿ ಪದಗಳನ್ನು ಲೆಕ್ಕಿಸುವುದು, ಯಾವ್ಯಾವ ಬಗೆಯ ಧ್ವನಿಗಳನ್ನು ಹೊರಡಿಸುತ್ತದೆ ಎಂಬುದನ್ನು ಗುರುತಿಸುವಂತೆ ಮಾಡುವುದು, ಯಾವ್ಯಾವ ಪದಗಳು ಯಾವ್ಯಾವ ಧ್ವನಿಗಳ ಸಾಮ್ಯತೆಯಲ್ಲಿ ಬರುತ್ತವೆ ಎಂಬುದನ್ನು ಗುರುತಿಸುವುದು ಮತ್ತು ಪಟ್ಟಿ ಮಾಡುವುದು; ಇವೆಲ್ಲವೂ ಸೇರುತ್ತದೆ.

ಉದಾಹರಣೆಗೆ: ಸಾಕು, ಹಾಕು, ಬಾಗು, ಮಾಗು, ತಾಗು, ಆಗು; ಇಂಥವನ್ನು ಹೇಳಿಕೊಡುವಾಗ; ಸ್ (ಧ್ವನಿ) + ಆ (ಸ್ವರ) = ಸಾ, ಕ್ + ಉ = ಕು. ಹೀಗೆ ಹೇಳಿಕೊಡುವುದರಿಂದ, ಅವರಿಗೆ ಪದಗಳಲ್ಲಿ ವಿವಿಧ ಧ್ವನಿಯ ಭಾಗಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಹಾಗೆಯೇ ಅವರಿಗೆ ಓದುವುದಕ್ಕೂ ಮತ್ತು ಬರೆಯುವುದಕ್ಕೂ ಸ್ಪಷ್ಟತೆ ಸಿಗುತ್ತದೆ. ಒಟ್ಟಾರೆ ಮಕ್ಕಳಿಗೆ ವಾಕ್ಯಗಳಲ್ಲಿ ಪದಗಳನ್ನು ಗುರುತಿಸುವುದಕ್ಕೂ, ಪದಗಳಲ್ಲಿ ಸಣ್ಣ ಸಣ್ಣ ಧ್ವನಿಯ ಭಾಗಗಳನ್ನೂ ಗುರುತಿಸುವುದಕ್ಕೂ ನೆರವಾಗಬೇಕು. ಇವೆಲ್ಲವೂ ಬರವಣಿಗೆಯ ನೆರವಿಲ್ಲದೆಯೇ ಆಗಬೇಕು. ಮೊದಲು ವೌಖಿಕವಾಗಿರುವಂತಹ ಪರಿಚಯ ಪಾಠಗಳಾಗಬೇಕು. ಇದರ ನಂತರ ಸ್ವರಗಳನ್ನು ಮತ್ತು ಧ್ವನಿಗಳನ್ನು ಗುರುತಿಸುವಂತಹ ಸಂಕೇತಗಳನ್ನು, ಅಂದರೆ ಅಕ್ಷರಗಳನ್ನು ಪರಿಚಯಿಸಬೇಕು. ಧ್ವನ್ಯೋಚ್ಚಾರಣೆಯನ್ನು ಅನುಸರಿಸಿ ಸಂಕೇತಾನುಸಾರ ಅಕ್ಷರಗಳನ್ನು ಮತ್ತು ಕಾಗುಣಿತಗಳನ್ನು ಬರೆಯಲು ಹೇಳಿಕೊಟ್ಟರೆ ಮಕ್ಕಳು ಆಡುವ ಮಾತುಗಳನ್ನು ಬರೆಯುವುದರಲ್ಲಿ ಮುಂದೆ ತೊಡಕನ್ನು ಹೊಂದಿರುವುದಿಲ್ಲ. ಬಹಳಷ್ಟು ಜನರು ಆಡುವ ಮಾತುಗಳನ್ನು ಬರಹದ ರೂಪಕ್ಕೆ ಇಳಿಸುವುದಕ್ಕೆ ಬಹಳ ಕಷ್ಟಪಡುತ್ತಾರೆ. ಇನ್ನು ಪರೀಕ್ಷೆಗಳನ್ನು ಎದುರಿಸುವ ಮಕ್ಕಳಂತೂ ಪ್ರತಿ ಸರ್ತಿಯೂ ಆಲೋಚನೆಗಳನ್ನು, ತಿಳಿದಿರುವ ವಿಚಾರಗಳನ್ನು ಮತ್ತು ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಬರಹದ ರೂಪಕ್ಕೆ ಇಳಿಸಲು ಬಹಳವೇ ಕಷ್ಟಪಡುವುದರ ಕಾರಣವೇ ಇದು. ಇನ್ನು ನಮ್ಮ ದೇಶದ ಸಾಮಾನ್ಯ ಶಾಲೆ ಮತ್ತು ಕುಟುಂಬಗಳಲ್ಲಿ ಮಕ್ಕಳ ಅಭಿಪ್ರಾಯಗಳನ್ನು ಕೇಳುವ ರೂಢಿಯೇ ಇರದು. ಎಲ್ಲವನ್ನೂ ಪೋಷಕರು ಮತ್ತು ಶಿಕ್ಷಕರೇ ನಿರ್ಧರಿಸುತ್ತಾರೆ. ಅಥವಾ ರೂಢಿಗತವಾಗಿ ಬಂದಿರುವಂತಹ ಸಿದ್ಧರೂಪದ ಅಭಿಪ್ರಾಯಗಳನ್ನೇ ಅಪೇಕ್ಷಿಸುತ್ತಾರೆ. ಇರಲಿ, ಇನ್ನು ಮುಖ್ಯವಾಗಿ ಗಮನಿಸಬೇಕಾಗಿರುವುದೇನೆಂದರೆ, ಮಕ್ಕಳು ಮೊದಲು ಕೇಳುವುದನ್ನು ಕಲಿಯಬೇಕು. ಕೇಳಿದ್ದನ್ನು ಪುನರುಚ್ಚರಿಸಲು ಕಲಿಯಬೇಕು. ಉಚ್ಚರಿಸುವ ಧ್ವನಿಗಳಲ್ಲಿ ಅವರು ಸಂಜ್ಞೆಗಳನ್ನು ಗುರುತಿಸಬೇಕು. ನಂತರ ಓದಲು ಕಲಿಯಬೇಕು. ನಂತರ ಅದನ್ನು ಅನುಸರಿಸಿದಂತೆ ಬರೆಯಲು ಕಲಿಯಬೇಕು.

ಬಿಡಿಬಿಡಿಯಾಗಿ ಗ್ರಹಿಸಲಿ

ಮಕ್ಕಳು ಪದಗಳಲ್ಲಿರುವ ಧ್ವನಿಗಳನ್ನು ಗುರುತಿಸುವುದರಲ್ಲಿ ಕರಗತವಾಗುವವರೆಗೂ ಮುಂದಕ್ಕೆ ಹೋಗಬಾರದು. ಅದೊಮ್ಮೆ ಪಕ್ಕಾ ಆದ ನಂತರ ತಪ್ಪಿಲ್ಲದಂತೆ ಉಚ್ಚರಿಸುವುದನ್ನು, ಓದುವುದನ್ನು ಮತ್ತು ತಾನು ಏನನ್ನು ಉಚ್ಚರಿಸುತ್ತಾನೋ, ತಾನೇನನ್ನು ಓದುತ್ತಾನೋ ಅದನ್ನು ಬರೆಯಲು ಸಾಧ್ಯವಾಗುವುದು. ರಾಶಿ ರಾಶಿ ಪದಗಳ ಮತ್ತು ವಾಕ್ಯಗಳನ್ನು ಮಕ್ಕಳ ಮೇಲೆ ಸುರಿದು ಹೇಗೋ ಕಲಿಯುತ್ತಾರೆ ಎಂಬ ಕುರುಡು ಕಲಿಕೆಯನ್ನು, ಯಾವುದೇ ಮಕ್ಕಳಲ್ಲಿ, ಅದರಲ್ಲೂ ನ್ಯೂನತೆ ಇರುವಂತಹ ಮಕ್ಕಳ ವಿಷಯದಲ್ಲಂತೂ ಎಂದಿಗೂ ಮಾಡಲೇಬಾರದು.

ವ್ಯಾಕರಣದ ಬಗ್ಗೆ ತಲೆ ಕೆಡಿಸಿಕೊಳ್ಳುವುದಂತೂ ಬೇಡವೇ ಬೇಡ. ಆಡುವ ಭಾಷೆಂುಲ್ಲಿ ಸಹಜವಾದ ವ್ಯಾಕರಣವನ್ನು ಅವರು ಅವರಿಗೆ ಅರಿವಿಲ್ಲದಂತೆಯೇ ಕಲಿತಿರುತ್ತಾರೆ. ಆಡುವ ಮಾತಿನ ಸಹಜ ವ್ಯಾಕರಣವು ಕಲಿಕೆಯ ಸಿದ್ಧ ಪಾಠಕ್ಕೆ ಒಳಗಾಗದೆಯೇ ಬಂದಿರುತ್ತದೆ. ಇನ್ನು ಮುಂದಿನ ಗ್ರಾಂಥಿಕ ವ್ಯಾಕರಣಕ್ಕೆ ಈಗಂತೂ ಸಮಯವಲ್ಲ. ಒಟ್ಟಾರೆ, ಪೋಷಕರು ಮತ್ತು ಶಿಕ್ಷಕರು ಪದಗಳಲ್ಲಿನ ಧ್ವನಿಗಳನ್ನು ಬಿಡಿಬಿಡಿಯಾಗಿ ಉಚ್ಚರಿಸಿ, ಅದನ್ನು ಕೇಳಿಸುವುದು, ಅವುಗಳನ್ನು ಪುನರುಚ್ಚರಿಸುವಂತೆ ಮಾಡುವುದು, ಅವುಗಳ ಸಂಕೇತಗಳನ್ನು ಗುರುತಿಸುವಂತೆ ಮಾಡುವುದು, ಧ್ವನ್ಯೋಚ್ಚಾರಗಳನ್ನು ಸಂಕೇತಗಳಲ್ಲಿ ಅಥವಾ ಅಕ್ಷರಗಳಲ್ಲಿ ಓದುವುದು ಮತ್ತು ಬರೆಯು ವಂತೆ ಮಾಡಿಬಿಟ್ಟರೆ, ಮಕ್ಕಳು ತಾವಾಗಿಯೇ ಮುಂದೆ ಭಾಷೆಯನ್ನು ವಿವಿಧ ರೀತಿಯಲ್ಲಿ ಅಭ್ಯಾಸ ಮಾಡಲು ತೊಡಗುತ್ತಾರೆ. ಇಂಗ್ಲಿಷ್ ಭಾಷೆಯ ಅಭ್ಯಾಸದಲ್ಲಿ ಧ್ವನಿಗಳನ್ನು ಅಥವಾ ಫೋನಿಕ್‌ಗಳನ್ನು ಗುರುತಿಸಲು ಕಲಿಸಿದಾದ ಮೇಲೆ ಸಿಲಬಲ್‌ಗಳನ್ನು ಕಲಿಸಬೇಕು. ಉಚ್ಚರಿಸುವ ಪದದಲ್ಲಿ ವವಲ್ಸ್ (ಸ್ವರಗಳು - ಅ ಇ ಐ ಓ ಯು) ಗಳನ್ನು ಉಚ್ಚರಿಸುವಾಗ ಧ್ವನಿಯು ಹೊರಡುವ ಬಗೆ ಮತ್ತು ಅವುಗಳ ಮೇಲಿನ ನಮ್ಮ ನಿಯಂತ್ರಣ ಹೇಗಿರಬೇಕೆಂಬುದನ್ನು ಕಲಿಸಬೇಕು. ಇವುಗಳನ್ನು ನೋಡಿದರೆ ಎಷ್ಟೊಂದು ಕಲಿಸಬೇಕು, ಅದೆಷ್ಟೊಂದು ವಿವರಗಳಿಗೆ ಗಮನ ಕೊಡಬೇಕು, ಕಷ್ಟ, ಆಗುವುದಿಲ್ಲ ಎಂದೆಲ್ಲಾ ಕೆಲವರಿಗೆ ಅನ್ನಿಸಬಹುದು. ಆದರೆ, ಇದು ಹಾಗೇನೂ ಇಲ್ಲ. ಪ್ರಾರಂಭಿಕ ಪಾಠಗಳನ್ನು ಹೀಗೆ ಮಾಡಿಬಿಟ್ಟರೆ ಮುಂದೆ ಮಕ್ಕಳ ಕಲಿಕೆಯ ಸಮಯದ ಪೂರ್ತಿ ನೀವು ತಲೆ ಚಚ್ಚಿಕೊಳ್ಳುವಷ್ಟಿರುವುದಿಲ್ಲ. ಮಕ್ಕಳಿಗೆ ಓದಿಸಿಕೊಂಡು ಕೂರ ಬಾರದು. ಹೇಗೆ ಓದುವುದು, ಹೇಗೆ ಬರೆಯುವುದು ಎಂದು ಹೇಳಿ ಕೊಟ್ಟು ಬಿಟ್ಟುಬಿಡುವುದು ಜಾಣ ಪೋಷಕರ ಮತ್ತು ಶಿಕ್ಷಕರ ಕೆಲಸ.

ಸಾಮ್ಯತೆಯ ಧ್ವನಿಗಳಿಂದ ಉಚ್ಚಾರಣೆ ಕಲಿಸಿ

ಬಿಡಿಬಿಡಿಯಾಗಿ ಧ್ವನಿಗಳನ್ನು, ಉಚ್ಚಾರಣೆಗಳನ್ನು, ಸಂಕೇತಗಳನ್ನು ಹೇಳಿಕೊಡುತ್ತಾ ಭಾಷಾ ಕಲಿಕೆಯನ್ನು ಮುಂದುವರಿಸುವುದು ಹೇಗೆಂದರೆ, ಪ್ರಾಸ ಮತ್ತು ಸಾಮ್ಯ ಇರುವಂತಹ ಪದಗಳ ಪರಿಚಯವನ್ನು ಮಾಡಿಸುವುದು. ಈಗ ಮೂಲ ಶಬ್ದ ಕಾ ಎಂಬುದನ್ನು ತೆಗೆದುಕೊಳ್ಳಿ. ಕಾರು, ಕಾಸು, ಕಾಡು, ಕಾಳು, ಕಾವು, ಕಾಲು, ಕಾಣು, ಕಾಗೆ, ಕಾಫಿ, ಕಾಫಿ, ಕಾಲ, ಕಾರ, ಕಾಟ, ಕಾರಣ, ಕಾಗದ, ಕಾವಲು, ಕಾವೇರಿ, ಕಾಡಿಗೆ; ಹಾಗೆಯೇ, ಇವುಗಳನ್ನು ಅಭ್ಯಾಸ ಮಾಡುತ್ತ ಮತ್ತೊಂದು ಶಬ್ದ ಪರಿಚಯಿಸುವುದು, ಮಾ - ಮಾರು, ಮಾಸು, ಮಾಡು, ಮಾವು, ಮಾಲು, ಮಾಣು, ಮಾಲ, ಮಾಫಿ, ಮಾಟ, ಮಾರಣ; ಹೀಗೆ ಹಲವಾರು ಪದಗಳನ್ನು ಪರಿಚಯಿಸುವುದು. ಅದರ ಅರ್ಥದ ಬಗ್ಗೆ ಈ ಹೊತ್ತಿಗೆ ತಲೆಕೆಡಿಸಿಕೊಳ್ಳುವುದೇನೂ ಬೇಡ. ಒಮ್ಮೆ ಪದಗಳು ಪರಿಚಯವಾದ ಮೇಲೆ ಬಳಸಿದಂತೆ ಅಥವಾ ಓದುತ್ತಿದ್ದಂತೆ ಅವುಗಳ ಅರ್ಥ ಪರಿಚಯವಾಗುತ್ತದೆ.

ಭಾಷೆಯನ್ನು ರಚನಾತ್ಮಕವಾಗಿ ಕಲಿಸಿಕೊಡಲು ಸೃಜನಾತ್ಮಕ ವಾದಂತಹ ವಿಧಾನಗಳನ್ನು ಬಳಸಬೇಕು. ಹಾಗೆಯೇ ಶಾಸ್ತ್ರೀಯ ವಾಗಿ, ಅಂದರೆ ಹಂತಹಂತವಾಗಿ ಹೇಳಿಕೊಡುವಂತಹ ಸಾಂಪ್ರದಾಯಿಕ ವಿಧಾನವೊಂದಾದರೆ ಅಶಾಸ್ತ್ರೀಯವಾಗಿ ಮತ್ತು ಕ್ರಮರಹಿತವಾಗಿ ಹೇಳಿಕೊಡುವುದೂ ಕೂಡಾ ಹೇಳಿ ಕೊಡಬಹುದು. ಭಾಷೆಯನ್ನು ಹೇಗೆಯೇ ಕಲಿತರೂ ಅದನ್ನು ಕೇಳಲು, ಆಡಲು, ಗುರುತಿಸಲು, ಓದಲು, ಬರೆಯಲು ನೆರವಾಗಿಯೇ ತೀರುತ್ತವೆ. ಆದರೆ ಮಗುವಿಗೆ ಏನನ್ನು ಕಲಿಸುತ್ತಿದ್ದೇವೆ ಮತ್ತು ಏಕೆ ಕಲಿಸುತ್ತಿದ್ದೇವೆ ಎಂಬುದು ಮಾತ್ರ ಪೋಷಕರಿಗೆ ಮತ್ತು ಶಿಕ್ಷಕರಿಗೆ ತರ್ಕಬದ್ಧವಾಗಿ ಅರಿವಿರಲಿ. ಏಕೆಂದರೆ ಭಾಷಾ ಕಲಿಕೆಯಲ್ಲಿ ಯಾವ ಅಂಶಗಳನ್ನು ಕಲಿಸುತ್ತಿದ್ದೇವೆ, ಯಾವ ಹಂತದಲ್ಲಿ ಕಲಿಕೆ ಇದೆ ಎಂಬುದರ ಅರಿವು ಕಲಿಸುವವರಿಗೆ ಇರಲೇಬೇಕು. ಒಟ್ಟಾರೆ ಸರಳತೆಯಿಂದ ಸಂಕೀರ್ಣತೆಯ ಕಡೆಗೆ ಹೋಗಬೇಕಾಗಿರುವುದು ಉತ್ತಮ ವಿಧಾನ. ಉದ್ದೇಶಪೂರ್ವಕವಾಗಿ ತಾವೇನೆಲ್ಲಾ ಕಲಿಸಬೇಕೆಂಬುದನ್ನು ದಾಖಲು ಮಾಡಿಕೊಳ್ಳುವುದು ಒಂದಾದರೆ, ಅದರಲ್ಲಿ ಎಷ್ಟರ ಮಟ್ಟಿಗೆ ಮಗುವು ಪ್ರಗತಿಯನ್ನು ಹೊಂದುತ್ತಿದೆ ಎಂಬುದನ್ನೂ ಕೂಡಾ ದಾಖಲಾಗುತ್ತಾ ಹೋಗಬೇಕು. ಇಲ್ಲಿ ಪ್ರಗತಿಯನ್ನು ದಾಖಲಿಸುವುದೆಂದರೆ, ಮಗುವಿನ ಕಲಿಕೆಯನ್ನು ಪರೀಕ್ಷಿಸಿ ಅದನ್ನೊಂದು ಮಾನದಂಡದ ಪ್ರಕಾರ ಅಂಕದ ಶ್ರೇಣಿಗೆ ಒಳಪಡಿಸುವುದಲ್ಲ. ಬದಲಾಗಿ ತಮ್ಮ ಕಲಿಕೆಯ ವಿಧಾನದಲ್ಲಿ ಮಗುವಿಗೆ ಎಷ್ಟರಮಟ್ಟಿಗೆ ಕಲಿಕೆ ಸಾಧ್ಯವಾಯಿತು ಎಂಬುದು ಗುರುತಿಸುವುದು ಮತ್ತು ಅದನ್ನು ದಾಖಲು ಮಾಡುವುದು. ಭಾಷೆಯಲ್ಲಿ ಅಗತ್ಯವಿರುವ ಎಲ್ಲಾ ಮೂಲಭೂತ ಕಲಿಕೆಗಳನ್ನೂ ಕಲಿಸಿಯೇ ತೀರಬೇಕು. ಏಕೆಂದರೆ ಎಳೆವಯಸ್ಸಿನಲ್ಲಿಯೇ ಅದರ ಕಲಿಕೆ ಸ್ಪಷ್ಟವಾಗಿ ಮತ್ತು ನಿರ್ದಿಷ್ಟವಾಗಿ ಮಕ್ಕಳಿಗೆ ದಾಟಿಸಲು ಸಾಧ್ಯವಾದರೆ ಭಾಷೆ, ವಿಷಯಗಳು, ವಿಚಾರಗಳು, ಅಧ್ಯಯನ, ಸಂಶೋಧನೆ; ಇವೆಲ್ಲವೂ ನಂತರದ ವಿಸ್ತಾರಗಳಾಗುತ್ತವೆ ಮತ್ತು ಅವುಗಳು ಮಕ್ಕಳ ಆಸಕ್ತಿ, ಸಾಮರ್ಥ್ಯ ಮತ್ತು ಪ್ರತಿಭೆೆಗಳ ಮೇಲೆ ಆಧಾರಿತವಾಗುತ್ತವೆ. ಆದ್ದರಿಂದ ಭಾಷೆಯ ಮೂಲಭೂತ ಅಂಶಗಳನ್ನು ಕ್ರಮವಾಗಿಯೋ ಅಥವಾ ಅನೌಪಚಾರಿಕವಾಗಿಯೋ ಕಲಿಸಲೇಬೇಕು.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News