ಮಾಲ್ದೀವ್ಸ್ ಅಧ್ಯಕ್ಷರಾಗಿ ಸಾಲಿಹ್ ಅಧಿಕಾರ ಸ್ವೀಕಾರ: ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿ

Update: 2018-11-17 15:12 GMT

ಮಾಲೆ (ಮಾಲ್ದೀವ್ಸ್), ನ. 17: ಮಾಲ್ದೀವ್ಸ್‌ನ ನೂತನ ಅಧ್ಯಕ್ಷರಾಗಿ ಇಬ್ರಾಹೀಮ್ ಮುಹಮ್ಮದ್ ಸಾಲಿಹ್ ಶನಿವಾರ ಅಧಿಕಾರ ಸ್ವೀಕರಿಸಿದರು.

ನಿರ್ಗಮನ ಅಧ್ಯಕ್ಷ ಯಮೀನ್ ಅಬ್ದುಲ್ ಗಯೂಮ್‌ರ ಸರ್ವಾಧಿಕಾರಿ ಆಳ್ವಿಕೆಯಿಂದ ದೇಶದಲ್ಲಿ ಉಂಟಾಗಿರುವ ರಾಜಕೀಯ ವೈಷಮ್ಯದ ನಡುವೆಯೇ ಈ ಅಧಿಕಾರ ಹಸ್ತಾಂತರ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಯಮೀನ್ ಆಳ್ವಿಕೆಯಲ್ಲಿ ಚೀನಾದತ್ತ ವಾಲಿದ್ದ ಮಾಲ್ದೀವ್ಸ್‌ನ್ನು ಮತ್ತೆ ಭಾರತದತ್ತ ಕರೆತರುವ ಕಾರ್ಯವನ್ನು ಭಾರತ ಈಗ ಮಾಡಬೇಕಾಗಿದೆ.

ರಾಜಧಾನಿ ಮಾಲೆಯ ಫುಟ್ಬಾಲ್ ಮೈದಾನವೊಂದರಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾಲ್ದೀವಿಯನ್ ಡೆಮಾಕ್ರಟಿಕ್ ಪಾರ್ಟಿಯ ಸಾಲಿಹ್ ಪ್ರಮಾಣವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅವರ ಸಾವಿರಾರು ಬೆಂಬಲಿಗರು ಉಪಸ್ಥಿತರಿದ್ದರು.

ಮುಖ್ಯ ನ್ಯಾಯಾಧೀಶ ಅಬ್ದುಲ್ಲಾ ದೀದಿ 54 ವರ್ಷದ ಅಧ್ಯಕ್ಷರಿಗೆ ಅಧಿಕಾರದ ಪ್ರಮಾಣವಚನ ಬೋಧಿಸಿದರು.

ಹಿಂದೂ ಮಹಾಸಾಗರದ ದ್ವೀಪಗಳ ಸಮೂಹ ಮಾಲ್ದೀವ್ಸ್ 2008ರಲ್ಲಿ ಬಹುಪಕ್ಷೀಯ ಪ್ರಜಾಸತ್ತೆಯಾಯಿತು.

2013ರಲ್ಲಿ ಅಧಿಕಾರಕ್ಕೆ ಬಂದ ಯಮೀನ್ ರಾಜಕೀಯ ವಿರೋಧಿಗಳ ವಿರುದ್ಧ ಪ್ರಹಾರಗೈದರು. ವಿರೋಧಿಗಳು ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಜೈಲಿಗೆ ಕಳುಹಿಸಿದರು.

ಆದರೆ, ಸೆಪ್ಟಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಅನಿರೀಕ್ಷಿತ ಸೋಲನುಭವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News