ಬಿಜೆಪಿಯವರ ಅಜ್ಜ-ಅಜ್ಜಿ ಬ್ರಿಟಿಷರೊಂದಿಗೆ ಕೈಜೋಡಿಸಿದ್ದರು: ಮೋದಿ ಹೇಳಿಕೆಗೆ ಸಿಬಲ್ ತಿರುಗೇಟು

Update: 2018-11-17 17:21 GMT

ಹೊಸದಿಲ್ಲಿ, ನ. 17: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕುರಿತು ‘ನಿಮ್ಮ ಅಜ್ಜ, ಅಜ್ಜಿ ನೀರಿನ ಪೈಪ್ ಹಾಕಿದ್ದಾರಾ?’ ಎಂದು ಪ್ರಶ್ನಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಪಿಲ್ ಸಿಬಲ್, ‘ಆಧುನಿಕ ಕೈಗಾರಿಕಾ ಭಾರತಕ್ಕೆ ನೆಹರೂ ಅವರು ಅಡಿಗಲ್ಲು ಹಾಕಿದರು’ ಎಂದಿದ್ದಾರೆ.

ಛತ್ತೀಸ್‌ಗಡದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಿಜೆಪಿ ಸುಳ್ಳು ಭರವಸೆ ನೀಡುತ್ತಿದೆ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ ಎಂದು ರಾಹುಲ್ ಗಾಂಧಿ ಬಿಜೆಪಿ ಬಗ್ಗೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮೋದಿ ಅವರು, ಭಾರತದಲ್ಲಿ ರಾಹುಲ್ ಅವರ ಅಜ್ಜಿ, ಅಜ್ಜ ಪೈಪ್‌ಲೈನ್ ಅಳವಡಿಸಿದ್ದಾರೆಯೇ ಎಂದು ಪ್ರಶ್ನಿಸಿದ್ದರು. ಬಿಜೆಪಿಯ ಪೂರ್ವಿಕರು ವಸಾಹತುಶಾಹಿ ಆಡಳಿತದ ಸಂದರ್ಭ ಬ್ರಿಟೀಷರೊಂದಿಗೆ ಕೈಜೋಡಿಸಿದ್ದರು ಎಂದು ಸಿಬಲ್ ಹೇಳಿದರು. ನೀವು ಯುವಕರಿರುವಾಗ ಕುಡಿಯುವ ನೀರು ಹೇಗೆ ಪಡೆದಿರಿ ಎಂದು ಪ್ರಶ್ನಿಸಿಕೊಳ್ಳಿ. ಆಧುನಿಕ ಕೈಗಾರಿಕಾ ಭಾರತಕ್ಕೆ ನೆಹರೂ ಅವರು ಅಡಿಗಲ್ಲು ಹಾಕಿದರು.

ಆದರೆ, ನಿಮ್ಮ ಪಕ್ಷದ ಅಜ್ಜಿ, ಅಜ್ಜಂದಿರು ಬ್ರಿಟಿಷರೊಂದಿಗೆ ಕೈಜೋಡಿಸಿದರು ಎಂದು ಸಿಬಲ್ ಟ್ವೀಟ್ ಮಾಡಿದ್ದಾರೆ. 1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಅವರು ಬ್ರಿಟಿಷರೊಂದಿಗೆ ಸೇರಿದರು. ಇದು ಅವರ ಅಪ್ಪ-ಅಮ್ಮ, ಅಜ್ಜ-ಅಜ್ಜಿಯಂದಿರ ನಡವಳಿಕೆ. ದುರಾದೃಷ್ಟವೆಂದರೆ ಈಗ ಅವರಿಗೆ ಅವರ ಅಪ್ಪ, ಅಮ್ಮನ ಬಗ್ಗೆ ಕೂಡ ತಿಳಿದಿಲ್ಲ ಎಂದು ಸಿಬಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News