ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿ: ಪದಕ ದೃಢಪಡಿಸಿದ ಲಕ್ಷ ಸೇನ್

Update: 2018-11-17 18:12 GMT

ಹೊಸದಿಲ್ಲಿ, ನ.17: ಕೆನಡಾದಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸೆಮಿ ಫೈನಲ್‌ಗೆ ತಲುಪಿರುವ ಭಾರತದ ಯುವ ಶಟ್ಲರ್ ಲಕ್ಷ ಸೇನ್ ಚೊಚ್ಚಲ ಪದಕವನ್ನು ದೃಢಪಡಿಸಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 17ರ ಹರೆಯದ ಲಕ್ಷ ಸೇನ್ ಶ್ರೇಯಾಂಕರಹಿತ ಮಲೇಶ್ಯಾದ ಅದಿಲಿ ಶೊಲೆ ಅಲಿ ಸಾಡಿಕಿನ್‌ರನ್ನು 21-8, 21-18 ನೇರ ಗೇಮ್‌ಗಳ ಅಂತರದಿಂದ ಸುಲಭವಾಗಿ ಮಣಿಸಿದರು. ಈ ಗೆಲುವಿನೊಂದಿಗೆ ಸೆಮಿ ಫೈನಲ್‌ಗೆ ತಲುಪಿರುವ ಸೇನ್ ಕನಿಷ್ಠ ಕಂಚಿನ ಪದಕವನ್ನು ದೃಢಪಡಿಸಿದ್ದಾರೆ.

ಸೇನ್ ಸೆಮಿ ಫೈನಲ್‌ನಲ್ಲಿ ಅಗ್ರ ಶ್ರೆಯಾಂಕದ ಹಾಗೂ ಹಾಲಿ ಚಾಂಪಿಯನ್ ಕುಲವುಟ್ ವಿಟಿಸರ್ನ್‌ರನ್ನು ಎದುರಿಸಲಿದ್ದಾರೆ. ಇತ್ತೀಚೆಗೆ ನಡೆದಿದ್ದ ಏಶ್ಯನ್ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಸೇನ್ ಅವರು ಥಾಯ್ಲೆಂಡ್ ಆಟಗಾರರನ್ನು ಸೋಲಿಸಿದ್ದರು.

ಪುರುಷರ ಡಬಲ್ಸ್ ಜೋಡಿ ವಿಷ್ಣು ವರ್ಧನ್ ಹಾಗೂ ಶ್ರೀಕೃಷ್ಣ ಸಾಯಿ ಕುಮಾರ್ ಕ್ವಾರ್ಟರ್ ಫೈನಲ್‌ನಲ್ಲಿ ಎಡವಿದ ಹಿನ್ನೆಲೆಯಲ್ಲಿ ಸೇನ್ ಟೂರ್ನಿಯಲ್ಲಿ ಭಾರತದ ಆಶಾಕಿರಣವಾಗಿದ್ದಾರೆ.

ವಿಷ್ಣುವರ್ಧನ್-ಶ್ರೀಕೃಷ್ಣ ಜೋಡಿ ಕೊರಿಯಾದ 10ನೇ ಶ್ರೇಯಾಂಕದ ತಾಯ್ ಯಾಂಗ್ ಶಿನ್ ಹಾಗೂ ಚಾನ್ ವಾಂಗ್ ವಿರುದ್ಧ 11-21, 8-21 ಗೇಮ್‌ಗಳ ಅಂತರದಿಂದ ಸೋತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News