ಸೋನಿಯಾ, ಸಿಮ್ರನ್‌ಜೀತ್ ಪ್ರಿ-ಕ್ವಾರ್ಟರ್ ಫೈನಲ್‌ಗೆ

Update: 2018-11-17 18:25 GMT

ಹೊಸದಿಲ್ಲಿ, ನ.17: ಭಾರತದ ಯುವ ಬಾಕ್ಸರ್ ಸೋನಿಯಾ, ಪಿಂಕಿ ರಾಣಿ ಹಾಗೂ ಸಿಮ್ರನ್‌ಜೀತ್ ಕೌರ್ ಇಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಇಲ್ಲಿ ಶನಿವಾರ ನಡೆದ ಎರಡನೇ ಸುತ್ತಿನ ಪಂದ್ಯದ ವನಿತೆಯರ 57 ಕೆಜಿ ತೂಕ ವಿಭಾಗದಲ್ಲಿ 21ರ ಹರೆಯದ ಸೋನಿಯಾ ಮೊರೊಕ್ಕೊದ ಬಾಕ್ಸರ್ ಡೊಯಾ ಟೌಜಾನಿ ವರನ್ನು 5-0 ಅಂತರದಿಂದ ಮಣಿಸಿದರು.

ರಾಣಿ ಅಮೆರಿಕದ ಅನುಶ್ ಗ್ರಿಗೊರಿಯನ್‌ರನ್ನು 4-1 ಅಂತರದಿಂದ ಮಣಿಸಿದರು. 28ರ ಹರೆಯದ ರಾಣಿ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಎಬೊನಿ ಜಾನ್ಸ್‌ರನ್ನು ಎದುರಿಸಲಿದ್ದಾರೆ. 64 ಕೆಜಿ ಲೈಟ್ ವೆಲ್ಟರ್‌ವೇಟ್ ವಿಭಾಗದಲ್ಲಿ ಸಿಮ್ರನ್‌ಜೀತ್ ಅಮೆರಿಕದ ಅಮೆಲಿಯ ಮೂರ್ ವಿರುದ್ದ 4-1 ಅಂತರದಿಂದ ಗೆಲುವು ಸಾಧಿಸಿದರು. ಸಿಮ್ರನ್‌ಜೀತ್ ಮುಂದಿನ ಸುತ್ತಿನಲ್ಲಿ ಸ್ಕಾಟ್ಲೆಂಡ್‌ನ ಮೆಗಾನ್ ರೆಡ್‌ರನ್ನು ಮುಖಾಮುಖಿಯಾಗಲಿದ್ದಾರೆ.

ಹರ್ಯಾಣದ ಭಿವಾನಿ ಜಿಲ್ಲೆಯ ನಿಮ್ರಿ ಹಳ್ಳಿಯ ರೈತನ ಪುತ್ರಿ ಸೋನಿಯಾ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಮೊರೊಕ್ಕೊ ಬಾಕ್ಸರ್ ವಿರುದ್ಧ ತನ್ನ ರಕ್ಷಣಾತ್ಮಕ ಶೈಲಿಯ ಆಟದಿಂದ 29-28, 30-27, 30-27, 30-27, 30-27 ಅಂತರದಿಂದ ಜಯಶಾಲಿಯಾದರು. 2016ರಲ್ಲಿ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿರುವ ಸೋನಿಯಾ ಇದೀಗ ಅಂತರ್‌ರಾಷ್ಟ್ರೀಯ ಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೊದಲ ಬಾರಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಸೋನಿಯಾ ಸೋಮವಾರ ನಡೆಯಲಿರುವ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಬಲ್ಗೇರಿಯದ 2014ರ ವಿಶ್ವ ಚಾಂಪಿಯನ್ ಸ್ಟಾನಿಮಿರಾ ಪೆಟ್ರೋವಾರನ್ನು ಎದುರಿಸಲಿದ್ದಾರೆ.

‘‘ನಾನು 2011ರಲ್ಲಿ ಶಾಲಾ ಮಟ್ಟದಲ್ಲಿ ಬಾಕ್ಸಿಂಗ್ ಆರಂಭಿಸಿದ್ದೆ. ಇದು ನನ್ನ ಮೊದಲ ಅಂತರ್‌ರಾಷ್ಟ್ರೀಯ ಸ್ಪರ್ಧೆ. ಈ ಪಂದ್ಯ ಜಯಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಇದೊಂದು ಕಠಿಣ ಹೋರಾಟವಾಗಿತ್ತು. ಅಂತರ ಕಾಯ್ದುಕೊಂಡು, ಎದುರಾಳಿಗೆ ಪಂಚ್ ನೀಡಬೇಕೆಂದು ನನ್ನ ಕೋಚ್ ಸಲಹೆ ನೀಡಿದ್ದರು. ಅವರು ಹೇಳಿದಂತೆಯೇ ಮಾಡಿದ್ದೇನೆ. ಮೊದಲೆರಡು ಸುತ್ತಿನಲ್ಲಿ ಕೆಲವು ಸಂದರ್ಭದಲ್ಲಿ ನಾನು ಯಶಸ್ಸು ಸಾಧಿಸಿದ್ದೆ. ಮೂರನೇ ಸುತ್ತಿನಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದೆ’’ ಎಂದು ಸೋನಿಯಾ ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News