ಗೆಲುವಿಗಾಗಿ ಇಂಗ್ಲೆಂಡ್-ಶ್ರೀಲಂಕಾ ಹೋರಾಟ

Update: 2018-11-17 18:37 GMT

ಕ್ಯಾಂಡಿ, ನ.17: ಆತಿಥೇಯ ಶ್ರೀಲಂಕಾ ಹಾಗೂ ಇಂಗ್ಲೆಂಡ್ ನಡುವೆ ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ.

ನಾಲ್ಕನೇ ದಿನವಾದ ಶನಿವಾರ ಗೆಲ್ಲಲು 301 ರನ್ ಗುರಿ ಪಡೆದಿರುವ ಶ್ರೀಲಂಕಾ ಮಳೆಯಿಂದಾಗಿ ಪಂದ್ಯ ಬೇಗನೆ ಕೊನೆಗೊಂಡಾಗ 65.2 ಓವರ್‌ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 226 ರನ್ ಗಳಿಸಿದೆ. ಕೊನೆಯ ದಿನವಾದ ರವಿವಾರ ಶ್ರೀಲಂಕಾ ತಂಡ ಪಂದ್ಯದಲ್ಲಿ ಮೂರು ವಿಕೆಟ್ ನೆರವಿನಿಂದ ಇನ್ನೂ 75 ರನ್ ಗಳಿಬೇಕಾಗಿದೆ. ಇಂಗ್ಲೆಂಡ್‌ಗೆ ಪಂದ್ಯ ಗೆಲ್ಲಲು ಕೇವಲ 3 ವಿಕೆಟ್‌ಗಳ ಅಗತ್ಯವಿದೆ. ಔಟಾಗದೆ 27 ರನ್(30 ಎಸೆತ, 3 ಬೌಂಡರಿ)ಗಳಿಸಿರುವ ವಿಕೆಟ್‌ಕೀಪರ್ ನಿರೊಶನ್ ಡಿಕ್ವೆಲ್ಲಾ ಶ್ರೀಲಂಕಾಕ್ಕೆ ಗೆಲುವಿನ ಆಸೆ ಮೂಡಿಸಿದ್ದಾರೆ. ಎರಡನೇ ಇನಿಂಗ್ಸ್‌ನಲ್ಲಿ ಶ್ರೀಲಂಕಾ 26 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ ಅರ್ಧಶತಕಗಳನ್ನು ಸಿಡಿಸಿದ ಆರಂಭಿಕ ಆಟಗಾರ ಕರುಣರತ್ನೆ(57,96 ಎಸೆತ,4 ಬೌಂಡರಿ) ಹಾಗೂ ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್(88,137 ಎಸೆತ, 6 ಬೌಂಡರಿ)4ನೇ ವಿಕೆಟ್‌ಗೆ 77 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

ಕರುಣರತ್ನೆ ಔಟಾದ ಬಳಿಕ ರೋಶನ್ ಸಿಲ್ವಾ(37)ಅವರೊಂದಿಗೆ ಕೈಜೋಡಿಸಿದ ಮ್ಯಾಥ್ಯೂಸ್ 5ನೇ ವಿಕೆಟ್‌ಗೆ 73 ರನ್ ಜೊತೆಯಾಟ ನಡೆಸಿದರು. ಮ್ಯಾಥ್ಯೂಸ್ ಹಾಗೂ ಪೆರೇರ ಬೆನ್ನುಬೆನ್ನಿಗೆ ಔಟಾದಾಗ ಶ್ರೀಲಂಕಾ ಹಿನ್ನಡೆ ಅನುಭವಿಸಿತು. ಇಂಗ್ಲೆಂಡ್‌ನ ಪರ ಲೀಚ್(4-73)ಯಶಸ್ವಿ ಬೌಲರ್ ಎನಿಸಿಕೊಂಡರು. ಆಲ್‌ರೌಂಡರ್ ಮೊಯಿನ್ ಅಲಿ(2-65)ಎರಡು ವಿಕೆಟ್ ಪಡೆದರು.

ಇದಕ್ಕೂ ಮೊದಲು 9 ವಿಕೆಟ್‌ಗಳ ನಷ್ಟಕ್ಕೆ 324 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ 346 ರನ್‌ಗೆ ಆಲೌಟಾಯಿತು. ಫೋಕ್ಸ್ ಔಟಾಗದೆ 65 ರನ್(119 ಎಸೆತ, 4 ಬೌಂಡರಿ, 2 ಸಿಕ್ಸರ್)ಗಳಿಸಿದರು. ಪೆರೇರ 96 ರನ್‌ಗೆ 3 ವಿಕೆಟ್ ಪಡೆದರು. ಧನಂಜಯ ಸಿಲ್ವಾ 115 ರನ್‌ಗೆ 6 ವಿಕೆಟ್ ಗೊಂಚಲು ಪಡೆದರು.

ಸಂಕ್ಷಿಪ್ತ ಸ್ಕೋರ್

►ಇಂಗ್ಲೆಂಡ್ ಮೊದಲ ಇನಿಂಗ್ಸ್: 290

►ಶ್ರೀಲಂಕಾ ಮೊದಲ ಇನಿಂಗ್ಸ್: 336

►ಇಂಗ್ಲೆಂಡ್ ಎರಡನೇ ಇನಿಂಗ್ಸ್: 346/10

(ರೂಟ್ 124, ಫೋಕ್ಸ್ ಔಟಾಗದೆ 65, ಬರ್ನ್ಸ್ 59, ಧನಂಜಯ 6-115, ಪೆರೇರ 3-96)

►ಶ್ರೀಲಂಕಾ ಎರಡನೇ ಇನಿಂಗ್ಸ್: 226/7

(ಮ್ಯಾಥ್ಯೂಸ್ 88, ಕರುಣರತ್ನೆ 57,ರೋಶನ್ ಸಿಲ್ವಾ 37, ಲೀಚ್ 4-73, ಅಲಿ 2-65)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News