ಸಬ್ ಇನ್ಸ್‌ಪೆಕ್ಟರ್ ವಿರುದ್ಧವೇ ಅತ್ಯಾಚಾರ ದೂರು ದಾಖಲಿಸಿದ ಕಾನ್‌ಸ್ಟೇಬಲ್

Update: 2018-11-18 06:15 GMT

 ಮುಂಬೈ, ನ.18: ನವಿ ಮುಂಬೈನ ಪೊಲೀಸ್ ಕ್ರೈಮ್ ಬ್ರಾಂಚ್‌ನ ಸಬ್ ಇನ್ಸ್‌ಪೆಕ್ಟರ್ ವಿರುದ್ದವೇ ಮಹಿಳಾ ಕಾನ್‌ಸ್ಟೇಬಲ್‌ವೊಬ್ಬರು ಅತ್ಯಾಚಾರ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಬ್ ಇನ್‌ಪೆಕ್ಟರ್ ಅಮಿತ್ ಶೇಲಾರ್ ಅವರು ಕಳೆದ ಮಾರ್ಚ್‌ನಲ್ಲಿ ತನಗೆ ತಂಪುಪಾನೀಯದಲ್ಲಿ ಮತ್ತು ಬೆರೆಸಿ ಅತ್ಯಾಚಾರ ಮಾಡಿದ್ದಾರೆ. ಆ ನಂತರ ಘಟನೆಯನ್ನು ವಿಡಿಯೋ ಮಾಡಿ, ಅದನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಆರೋಪಿ ಶೇಲಾರ್ ತನ್ನ ಮೇಲೆ ಸಿಬಿಡಿ ಬೇಲಾಪುರ, ಪನ್ವೇಲ್, ಕಾಮೋಠೆ ಹಾಗೂ ಖಾರ್ಗರ್‌ನಲ್ಲಿ ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು ಶನಿವಾರ ಸಿಬಿಡಿ ಪೊಲೀಸ್ ಠಾಣೆಗೆ ತೆರಳಿದ 31ರ ಹರೆಯದ ಸಂತ್ರಸ್ತೆ ಮಹಿಳೆ ದೂರು ದಾಖಲಿಸಿದ್ದಾರೆ.

ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಶೇಲಾರ್ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದು, ಅತ್ಯಾಚಾರ ಹಾಗೂ ದೌರ್ಜನ್ಯಕ್ಕಾಗಿ ಐಪಿಸಿಯ ವಿವಿಧ ಸೆಕ್ಷನ್‌ಗಳು ಹಾಗೂ ಎಸ್‌ಸಿ-ಎಸ್ಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿ ಪೊಲೀಸ್ ಇನ್ಸ್‌ಪೆಕ್ಟರ್‌ರನ್ನು ಇನ್ನೂ ಬಂಧಿಸಿಲ್ಲ. ಆರೋಪಿ ಹಾಗೂ ಸಂತ್ರಸ್ತೆ 2010ರಿಂದ ಪರಸ್ಪರ ಪರಿಚಿತರು. ಇಬ್ಬರೂ ಒಂದೇ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News