ಯುಎಇಗೆ ಇಮ್ರಾನ್ ಭೇಟಿ: 6 ಶತಕೋಟಿ ಡಾಲರ್ ನೆರವು ಕೋರುವ ಸಾಧ್ಯತೆ

Update: 2018-11-18 16:59 GMT

ದುಬೈ, ನ.18: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗಲ್ಫ್ ರಾಷ್ಟ್ರವಾದ ಯುಎಇಗೆ ರವಿವಾರ ಭೇಟಿ ನೀಡಿದ್ದಾರೆ. ತೀವ್ರ ಹಣಕಾಸು ಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ಪಾಕಿಸ್ತಾನವು ಅಂತರ್ ರಾಷ್ಟ್ರೀಯ ಹಣಕಾಸು ನಿಧಿಯ ಪಾರುಗಾಣಿಕೆ (ಬೇಲ್‌ಔಟ್) ಪ್ಯಾಕೇಜ್ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವುದಕ್ಕಾಗಿ ಅವರು ಯುಎಇನಿಂದ ಅರ್ಥಿಕ ನೆರವನ್ನು ಕೋರುವ ನಿರೀಕ್ಷೆಯಿದೆ.

ಕಳೆದ ಎರಡು ತಿಂಗಳುಗಳಲ್ಲಿ ಇಮ್ರಾನ್ ಯುಎಇಗೆ ಭೇಟಿ ನೀಡುತ್ತಿರುವುದು ಇದು ಎರಡನೇ ಸಲವಾಗಿದೆ. ಇಂದು ಅವರು ಅಬುಧಾಬಿಯ ಯುವರಾಜ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅವರನ್ನು ಅಧ್ಯಕ್ಷೀಯ ಅರಮನೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಇಮ್ರಾನ್ ಜೊತೆ ಪಾಕ್ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಶಿ ಹಾಗೂ ವಿತ್ತ ಸಚಿವ ಅಸಾದ್ ಉಮರ್ ಭಾಗವಹಿಸಿದ್ದರು ಎಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ನಗದು ಹಾಗೂ ತೈಲ ರೂಪದಲ್ಲಿ ಪಾಕಿಸ್ತಾನವು ಯುಎಇನಿಂದ 6 ಶತಕೋಟಿ ಡಾಲರ್ ಮೊತ್ತದ ಅರ್ಥಿಕ ನೆರವನ್ನು ಬಯಸಿದೆಯೆಂದು ವರದಿ ಹೇಳಿದೆ. ಪಾಕ್‌ಗೆ ಯುಎಇನಿಂದ ಹಣಕಾಸು ನೆರವಿನ ಪ್ಯಾಕೇಜ್‌ಗೆ ಸಂಬಂಧಿಸಿ ಉಭಯ ದೇಶಗಳು ತಿಳುವಳಿಕಾ ಒಪ್ಪಂದಕ್ಕೆ ಸಹಿಹಾಕುವ ಸಾಧ್ಯತೆಯಿದೆಯೆಂದು ಪಾಕ್ ಸಂಪುಟದ ಸಚಿವರೊಬ್ಬರು ಮಾತುಕತೆಗೆ ಮುನ್ನ ಸುದ್ದಿಗಾರರಿಗೆ ತಿಳಿಸಿದ್ದರೆಂದು ಪತ್ರಿಕೆ ಹೇಳಿದೆ.

ಆದಾಗ್ಯೂ ತನ್ನ ಬೇಲ್‌ಔಟ್ ಪ್ಯಾಕೇಜ್‌ಗೆ ಸಂಬಂಧಿಸಿ ಐಎಂಎಫ್ ಒಡ್ಡಿರುವ ಶರತ್ತಿಗೂ, ಇಮ್ರಾನ್ ಖಾನ್ ಅವರು ಯುಎಇ ಭೇಟಿಗೂ ಯಾವುದೇ ಸಂಬಂಧವಿಲ್ಲವೆಂದು ಪಾಕ್ ವಿತ್ತ ಸಚಿವ ಉಮರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News