ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಕಂಚಿಗೆ ತೃಪ್ತಿಪಟ್ಟ ಸೇನ್

Update: 2018-11-18 18:01 GMT

ಮರ್ಖಮ್(ಕೆನಡಾ), ನ.18: ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಸೆಮಿ ಫೈನಲ್‌ನಲ್ಲಿ ವೀರೋಚಿತ ಸೋಲನುಭವಿಸಿದ ಭಾರತದ ಲಕ್ಷ ಸೇನ್ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ಇಲ್ಲಿ ಶನಿವಾರ ಒಂದು ಗಂಟೆ, 11 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ನ ಸೆಮಿ ಫೈನಲ್ ಪಂದ್ಯದಲ್ಲಿ 17ರ ಹರೆಯದ ದಿಲ್ಲಿ ಆಟಗಾರ ಸೇನ್ ಥಾಯ್ಲೆಂಡ್‌ನ ಕುನ್ಲಾವುಟ್ ವಿಟಿಡ್‌ಸರ್ನ್ ವಿರುದ್ಧ 22-20, 16-21, 13-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ.

‘‘ಮೊದಲ ಗೇಮ್‌ನ್ನು ಜಯಿಸಿದರೂ ನನಗೆ ನನ್ನ ಸಾಮಾನ್ಯ ಲಯ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಕುನ್ಲಾವುಟ್ ಎರಡನೇ ಗೇಮ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ನಾನು ಅಂಕ ಗಳಿಸುವಷ್ಟು ಪ್ರದರ್ಶನ ನೀಡಲಿಲ್ಲ. ನನ್ನ ಸ್ಟೋಕ್ಸ್‌ಗೆ ಎದುರಾಳಿ ಉತ್ತರ ನೀಡಿದ್ದಾರೆ’’ ಎಂದು ವಿಶ್ವದ ನಂ.3ನೇ ಜೂನಿಯರ್ ಶಟ್ಲರ್ ಸೇನ್ ಹೇಳಿದ್ದಾರೆ.

ಈ ವರ್ಷ ಏಶ್ಯನ್ ಜೂನಿಯರ್ ಪ್ರಶಸ್ತಿಯನ್ನು ಜಯಿಸಿದ್ದ ಸೇನ್ ಟೂರ್ನಿಯಲ್ಲಿ ಪದಕದ ಸ್ಪರ್ಧೆಯಲ್ಲಿದ್ದ ಭಾರತದ ಏಕೈಕ ಸ್ಪರ್ಧಿಯಾಗಿದ್ದರು.

ಸೈನಾ ನೆಹ್ವಾಲ್ 2008ರಲ್ಲಿ ಪುಣೆಯಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಸೈನಾ ಈ ಸಾಧನೆ ಮಾಡಿರುವ ಭಾರತದ ಏಕೈಕ ಶಟ್ಲರ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News