ಎ.ಆರ್.ರಹ್ಮಾನ್ ಇಸ್ಲಾಂ ಸ್ವೀಕರಿಸಿದ್ದು ಏಕೆ ?

Update: 2018-11-19 07:43 GMT

ಮುಂಬೈ, ನ.19: ಆಸ್ಕರ್ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕ, ಸಂಯೋಜಕ ಎ.ಆರ್.ರಹ್ಮಾನ್ ಮೂಲತಃ ಹಿಂದು ಧರ್ಮದವರಾಗಿದ್ದರು ಎಂದು ಎಲ್ಲರಿಗೂ ತಿಳಿದ ವಿಚಾರ. ಅವರ ಮೂಲ ಹೆಸರು ದಿಲೀಪ್ ಕುಮಾರ್ ಎಂಬುದಾಗಿತ್ತು. ಅವರ ಜೀವನ ಚರಿತ್ರೆ ‘ನೋಟ್ಸ್ ಆಫ್ ಎ ಡ್ರೀಮ್’ನಲ್ಲಿ ಅವರ ಮೂಲ ಹೆಸರು ಕೇವಲ ಒಂದು ಬಾರಿ ಅವರ ಮನವಿಯಂತೆ ಉಲ್ಲೇಖಗೊಂಡಿದೆ. 'ಹಿಂದುಸ್ತಾನ್ ಟೈಮ್ಸ್'ಗೆ ನೀಡಿದ ಸಂದರ್ಶನವೊಂದರಲ್ಲಿ ತಾವು ಇಸ್ಲಾಂ ಧರ್ಮ ಸ್ವೀಕರಿಸಿದ ಕಾರಣವನ್ನು ಅವರು ವಿವರಿಸಿದ್ದಾರೆ.

ರಹ್ಮಾನ್ ಅವರ ಕುಟುಂಬ 80ರ ದಶಕದ ಮಧ್ಯಭಾಗದಲ್ಲಿ, ಅವರ ತಂದೆಯ ನಿಧನಾನಂತರ, ರೋಜಾ (1992) ಚಿತ್ರದ ಬಿಡುಗಡೆಗೆ ಮುನ್ನ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿತ್ತು. ಅವರ ತಂದೆ ಆರ್.ಕೆ.ಶೇಖರ್ ಸಂಗೀತ ಸಂಯೋಜಕರಾಗಿದ್ದರು. ಸಣ್ಣ ಪ್ರಾಯದಲ್ಲಿಯೇ ಅವರು ಅಸೌಖ್ಯದಿಂದ ಮೃತಪಟ್ಟಿದ್ದರು. ಅವರ ಕಾಯಿಲೆ ಯಾವುದೆಂದು ವೈದ್ಯರಿಗೆ ಕೂಡ ಆಗ ಕಂಡು ಹಿಡಿಯಲಾಗಿರಲಿಲ್ಲ.

ಅವರ ತಾಯಿ, ಈಗ ಕರೀನಾ ಬೇಗಂ, ಆಧ್ಯಾತ್ಮಿಕತೆಯಲ್ಲಿ ಒಲವು ಹೊಂದಿದವರಾಗಿದ್ದಾರೆ. ಪತಿಗೆ ಅಸೌಖ್ಯವುಂಟಾದಾಗ ಅವರು ಹಲವಾರು ಮಂದಿರ ಹಾಗೂ ಚರ್ಚ್ಗಳಿಗೆ ಭೇಟಿ ನೀಡಿದ್ದರು, ಸಾಧು-ಸಂತರನ್ನು ಭೇಟಿಯಾಗಿದ್ದರು. ವಿವಿಧ ಧರ್ಮಗಳು ಸೂಚಿಸಿದ ಪರಿಹಾರಗಳನ್ನೆಲ್ಲಾ ಕೈಗೊಂಡರೂ ಪ್ರಯೋಜನವಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಅವರೊಬ್ಬ ಸೂಫಿ ಸಂತರನ್ನು ಭೇಟಿಯಾಗಿದ್ದರು. ಈ ಸೂಫಿ ಸಂತರು ಅವರ ಮನಸ್ಸಿನ ಮೇಲೆ ಅಚ್ಚಳಿಯದ ಪರಿಣಾಮ ಬೀರಿದ್ದರು. ಪತಿ ತೀರಿದ ಕೆಲ ವರ್ಷಗಳ ನಂತರ ರಹ್ಮಾನ್ ಅವರ ಇಡೀ ಕುಟುಂಬ ಇಸ್ಲಾಂ ಧರ್ಮವನ್ನು ಆಲಂಗಿಸಿತ್ತು.

ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಿದ ಬಗ್ಗೆ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ರಹ್ಮಾನ್, ‘‘ಇದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಗ್ಗೆಯಲ್ಲ, ನಿಮಗೆ ಯಾವುದು ಸರಿ, ನಿಮ್ಮ ಮನಸ್ಸಿಗೆ ಯಾವುದು ತಟ್ಟುವುದೆಂಬುದು ಮುಖ್ಯ. ಬಹಳಷ್ಟು ವಿಶೇಷವೆಂದು ಹೇಳಬಹುದಾದ ವಿಚಾರಗಳ ಬಗ್ಗೆ ಸೂಫಿ ಸಂತರು ಹಾಗೂ ಆಧ್ಯಾತ್ಮಿಕ ಶಿಕಕ್ಷರು ನನಗೆ ಕಲಿಸಿದ್ದಾರೆ. ಪ್ರತಿಯೊಂದು ಧರ್ಮದಲ್ಲೂ ವಿಶೇಷ ವಿಚಾರಗಳಿವೆ. ಆದರೆ ನಾವು ಇದನ್ನು ಆಯ್ದುಕೊಂಡೆವು ಹಾಗೂ ಅದಕ್ಕೆ ಬದ್ಧರಾಗಿರುತ್ತೇವೆ’’ ಎಂದರು ರಹ್ಮಾನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News