ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಸೋನಿಯಾ ಕ್ವಾರ್ಟರ್ ಫೈನಲ್‌ಗೆ

Update: 2018-11-19 17:54 GMT

ಹೊಸದಿಲ್ಲಿ, ನ.19: ಚಾಂಪಿಯನ್‌ಶಿಪ್‌ನ ಐದನೇ ದಿನವಾದ ಸೋಮವಾರ 57 ಕೆಜಿ ವಿಭಾಗದಲ್ಲಿ ಮಾಜಿ ವಿಶ್ವ ಚಾಂಪಿಯನ್ ಸ್ಟಾನಿಮಿರಾ ಪೆಟ್ರೊವಾರನ್ನು ಮಣಿಸಿದ ಭಾರತದ ಬಾಕ್ಸರ್ ಸೋನಿಯಾ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ಆದರೆ, ಈ ಪಂದ್ಯ ವಿವಾದಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.

ಬಲ್ಗೇರಿಯದ ಒಲಿಂಪಿಕ್ಸ್ ಚಾಂಪಿಯನ್ ಪೆಟ್ರೋವಾ ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಸೋನಿಯಾವಿರುದ್ಧ 2-3 ಅಂತರದಿಂದ ಸೋತರು. ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪೆಟ್ರೋವಾ ಅಧಿಕಾರಿಗಳತ್ತ ಬೆರಳು ತೋರಿಸಿದರು. ಪೆಟ್ರೋವಾ ಅವರ ಬಾಕ್ಸಿಂಗ್ ಕೋಚ್ ಪೀಟರ್ ಲೆಸೊವ್ ಫಲಿತಾಂಶವನ್ನು ಪ್ರತಿಭಟಿಸಿ ಬಾಕ್ಸಿಂಗ್ ರಿಂಗ್‌ನೊಳಗೆ ನೀರಿನ ಬಾಟಲಿಯನ್ನು ಎಸೆದರು.

27ರ ಹರೆಯದ ಬಲ್ಗೇರಿಯ ಬಾಕ್ಸರ್ ಪೆಟ್ರೋವಾ 2014ರ ಆವೃತ್ತಿಯ ಟೂರ್ನಿಯಲ್ಲಿ 54 ಕೆಜಿ ಬಾಟಮ್‌ವೇಟ್ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು.

‘‘ಫಲಿತಾಂಶದಲ್ಲಿ ತೀರ್ಪುಗಾರರು ಭ್ರಷ್ಟತೆ ತೋರಿದ್ದಾರೆ. ಇದು ನ್ಯಾಯೋಚಿತ ತೀರ್ಪಲ್ಲ’’ ಎಂದು ಪಂದ್ಯದ ಬಳಿಕ ಸುದ್ದಿಗಾರರಿಗೆ ಪೆಟ್ರೋವಾ ತಿಳಿಸಿದ್ದಾರೆ.

ಅಂತರ್‌ರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ(ಎಐಬಿಎ)ತನ್ನ ತಾಂತ್ರಿಕ ನಿಯೋಗದ ಮೂಲಕ ಘಟನೆಯನ್ನು ಪರಾಮರ್ಶಿಸಿದ ಬಳಿಕ ಪೆಟ್ರೋವಾರ ಕೋಚ್ ಲೆಸೊವ್‌ರನ್ನು ಟೂರ್ನಿಯು ನ.24ರಂದು ಕೊನೆಗೊಳ್ಳುವ ತನಕ ರಿಂಗ್ ಸನಿಹ ಬರದಂತೆ ನಿರ್ಬಂಧ ಹೇರಿದೆ.

ಅಸಭ್ಯ ವರ್ತನೆ ತೋರಿದ್ದ ಬಲ್ಗೇರಿಯದ ಕೋಚ್ ಪೀಟರ್ ಲೆಸೊವ್ ಅವರ ಮಾನ್ಯತೆ ಪತ್ರವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ ಎಂದು ಎಐಬಿಎ ತಿಳಿಸಿದೆ.

ಲೆಸೊವ್ 1980ರ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ್ದು ಕಳೆದ ಮೂವತ್ತು ವರ್ಷಗಳಿಂದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸವೀಟಿಗೆ ಸೋಲು

75 ಕೆಜಿ ವಿಭಾಗದಲ್ಲಿ ಸೋತಿರುವ ಸವೀಟಿ ಬೂರಾ ಕೂಟದಿಂದ ನಿರ್ಗಮಿಸಿದ್ದಾರೆ. 23ರ ಹರೆಯದ 2014ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 81 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತೆ ಸವೀಟಿ ಪೊಲೆಂಡ್‌ನ ಎಲಿಝಬೆತ್ ವೋಜ್‌ಸಿಕ್ ವಿರುದ್ಧ ಸೋತಿದ್ದಾರೆ. ಸವೀಟಿ ಟೂರ್ನಿಯಿಂದ ಹೊರ ನಡೆದಿರುವ ಭಾರತದ ಎರಡನೇ ಬಾಕ್ಸರ್. ಮಾಜಿ ಚಾಂಪಿಯನ್ ಸರಿತಾದೇವಿ(60ಕೆಜಿ)ಟೂರ್ನಿಯಿಂದ ಸೋತು ಹೊರ ನಡೆದ ಮೊದಲ ಬಾಕ್ಸರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News