ಅಸಮ್ಮತಿ ಸೂಚಿಸುವವರನ್ನು ದ್ವೇಷಿಸುವ ಆಧಾರದಲ್ಲಿ ದೇಶಭಕ್ತಿಯನ್ನು ಅಳೆಯಲಾಗುತ್ತಿದೆ: ಜಾವೇದ್ ಅಖ್ತರ್

Update: 2018-11-20 08:43 GMT

ಹೊಸದಿಲ್ಲಿ, ನ.20: ನಿಮ್ಮ ಅಭಿಪ್ರಾಯಗಳನ್ನು ಒಪ್ಪದೆ ಅವುಗಳಿಗೆ ಅಸಮ್ಮತಿ ಸೂಚಿಸುವವರನ್ನು ನೀವೆಷ್ಟು  ದ್ವೇಷಿಸುತ್ತೀರಿ ಎಂಬುದು ಇಂದು ನಿಮ್ಮ ದೇಶಪ್ರೇಮದ ಮಾಪಕವಾಗಿದೆ, ಇದು ಸರಿಯಲ್ಲ ಎಂದು ಖ್ಯಾತ ಚಿತ್ರ ಸಾಹಿತಿ, ಲೇಖಕ ಹಾಗೂ ಮಾಜಿ ಸಂಸದ ಜಾವೇದ್ ಅಖ್ತರ್ ಹೇಳಿದ್ದಾರೆ.

ರಾಜಧಾನಿಯಲ್ಲಿ ಆಯೋಜಿಸಲಾದ ಮೂರು ದಿನಗಳ ಸಾಹಿತ್ಯ ಉತ್ಸವ `ಸಾಹಿತ್ಯ ಆಜ್ ತಕ್' ನಲ್ಲಿ ಮಾತನಾಡಿದ ಅವರು ``ದೇಶವನ್ನು ಪ್ರೀತಿಸುವುದು ಹೆತ್ತವರನ್ನು ಪ್ರೀತಿಸಿದಷ್ಟೇ ಸಹಜ,'' ಎಂದಿದ್ದಾರೆ.

``ದೇಶವನ್ನು ಪ್ರೀತಿಸುವುದು ಸಹಜ. ಮೇರಿ ಕೋಮ್ ಅವರು ಗೆದ್ದಾಗ ನಾನು ಈಶಾನ್ಯ ಭಾರತಕ್ಕೆ ಭೇಟಿ ನೀಡಿರದೇ ಇದ್ದರೂ ನನಗೆ ಹೆಮ್ಮೆಯಾಗುತ್ತದೆ. ನಾನು  ನನ್ನ ಕುಟುಂಬ ಮತ್ತು ಸ್ನೇಹಿತರನ್ನು  ಪ್ರೀತಿಸುತ್ತೇನೆ, ಆದರೆ ನಾನು ಇತರರನ್ನು ದ್ವೇಷಿಸುತ್ತೇನೆ ಎಂದು ಅದರರ್ಥವಲ್ಲ,'' ಎಂದರು.

``ರಾಷ್ಟ್ರವಾದ ಮೂಲತಃ ಅಪಾಯಕಾರಿ ಎಂದು ನನಗನಿಸುವುದಿಲ್ಲ. ಆದರೆ ಅದು ನೀವು ಇತರರನ್ನು ದ್ವೇಷಿಸುವಂತೆ ಮಾಡಿದರೆ ಮಾತ್ರ ಅಪಾಯಕಾರಿ'' ಎಂದರು.

``ಭಾರತವೆಂಬ  ದೋಣಿ ಕೆಲವೊಮ್ಮೆ ತೂಗುಯ್ಯಾಲೆಯಾಡಿದರೂ ಅದು ಯಾವತ್ತೂ ಮುಳುಗದು, ದೇಶ ಯಾವತ್ತೂ ಅಸಮತೋಲನ ಸಾಧಿಸದು, ಇದನ್ನು ನಾನು ನನ್ನ ರಕ್ತದಲ್ಲಿ ಬರೆಯಬಲ್ಲೆ,'' ಎಂದರು.

``ನನಗೆ ನನ್ನ ದೇಶಭಕ್ತಿಯ ಮೇಲೆ ಅದೆಷ್ಟು ನಂಬಿಕೆಯಿದೆಯೆಂದರೆ ಯಾರು ಏನು ಹೇಳಿದರೂ ಚಿಂತೆಯಿಲ್ಲ,'' ಎಂದು ತಮ್ಮನ್ನು ಕೆಲವರು ದೇಶದ್ರೋಹಿ ಎಂದು ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸುತ್ತಾ ಅವರು ಹೇಳಿದರು. ಕೋಮುವಾದ ಎಂಬುದು ಮುಸ್ಲಿಮರಲ್ಲೂ, ಹಿಂದೂಗಳಲ್ಲೂ ಇದೆ ಎಂದ ಅವರು ಕೆಲ ಕೋಮುವಾದಿ ಮುಸ್ಲಿಮರಿಗೆ ಜಾತ್ಯತೀತ ಹಿಂದುಗಳು ಇಷ್ಟವಾಗುವುದಿಲ್ಲ, ಅಂತೆಯೇ ಕೆಲ ಕೋಮುವಾದಿ ಹಿಂದುಗಳಿಗೆ ಜಾತ್ಯತೀತ ಮುಸ್ಲಿಮರು ಇಷ್ಟವಾಗುವುದಿಲ್ಲ ಎಂದು  ಅಖ್ತರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News