ಪೈಲ್ಸ್‌ನ ಕಾರಣಗಳು ಮತ್ತು ಈ ಲಕ್ಷಣಗಳನ್ನು ತಿಳಿದುಕೊಳ್ಳಿ

Update: 2018-11-20 10:16 GMT

ಪೈಲ್ಸ್ ಅಥವಾ ಮೂಲವ್ಯಾಧಿಯ ಕುರಿತು ಜನರಲ್ಲಿ ಅರಿವು ಮೂಡಿಸಲು ಪ್ರತಿ ವರ್ಷ ನ.20ನ್ನು ‘ವಿಶ್ವ ಮೂಲವ್ಯಾಧಿ ದಿನ’ವನ್ನಾಗಿ ಆಚರಿಸಲಾಗುತ್ತಿದೆ.

ವೈದ್ಯಕೀಯವಾಗಿ ‘ಹೆಮರೈಡ್ಸ್’ ಎಂದು ಕರೆಯಲಾಗುವ ಮೂಲವ್ಯಾಧಿಯು ಭಾರತದಲ್ಲಿ ವಯಸ್ಕರಲ್ಲಿ ಸಾಮಾನ್ಯವಾಗಿದೆ. ಈ ರೋಗವು ಗುದದ್ವಾರದಲ್ಲಿಯ ಮತ್ತು ಸುತ್ತಲಿನ ರಕ್ತನಾಳಗಳ ಉರಿಯೂತ ಹಾಗೂ ಊತಕ್ಕೆ ಕಾರಣವಾಗುತ್ತದೆ. ಈ ರೋಗವು ವಯಸ್ಕರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಹೆಚ್ಚಿನವರು ನಾಚಿಕೆಯಿಂದಲೋ ಮುಜುಗರದಿಂದಲೋ ವೈದ್ಯರನ್ನು ಭೇಟಿಯಾಗುವ ಗೋಜಿಗೆ ಹೋಗುವುದಿಲ್ಲ. ಸ್ಥಿತಿಯು ತೀವ್ರ ಹದಗೆಟ್ಟು ಇನ್ನು ನೋವು ಸಹಿಸಲು ಸಾಧ್ಯವೇ ಇಲ್ಲವೆಂದಾಗಲೇ ವೈದ್ಯರಿಗೆ ತೋರಿಸುವ ದೊಡ್ಡಮನಸ್ಸು ಮಾಡುತ್ತಾರೆ.

 ಕಳೆದ ವರ್ಷ ಇಂಡಿಯನ್ ಜರ್ನಲ್ ಆಫ್ ಸರ್ಜರಿಯಲ್ಲಿ ಪ್ರಕಟವಾದ ಸಂಶೋಧನಾ ವರದಿಯಂತೆ 50ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಲ್ಲಿ ಶೇ.50ಕ್ಕೂ ಅಧಿಕ ಜನರು ತಮ್ಮ ಜೀವಮಾನದಲ್ಲಿ ಮೂಲವ್ಯಾಧಿಗೆ ತುತ್ತಾಗುತ್ತಾರೆ. ಯಾವುದೇ ಸಮಯದಲ್ಲಿಯೂ ಸುಮಾರು ಶೇ.5ರಷ್ಟು ಜನರು ಮೂಲವ್ಯಾಧಿಯಿಂದ ಬಳಲುತ್ತಿರುತ್ತಾರೆ.

ಕಾರಣಗಳು ಮತ್ತು ಅಪಾಯದ ಅಂಶಗಳು

ಮೂಲವ್ಯಾಧಿಗೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ. ವ್ಯಕ್ತಿಗೆ ವಯಸ್ಸಾದಂತೆ ಈ ರೋಗದಿಂದ ಬಳಲುವ ಅಪಾಯವೂ ಹೆಚ್ಚುತ್ತ ಹೋಗುತ್ತದೆ. ಆದರೆ ಮಕ್ಕಳು ಮತ್ತು ಯುವಜನರಲ್ಲಿಯೂ ಈ ರೋಗವು ಕಾಣಿಸಿಕೊಳ್ಳುತ್ತದೆ. ಮಲಬದ್ಧತೆ, ಬದಲಾಗದ ಜೀವನಶೈಲಿ,ಆಹಾರದಲ್ಲಿ ನಾರಿನ ಕೊರತೆ,ಆಗಾಗ್ಗೆ ಮಲವಿಸರ್ಜನೆ ಯನ್ನು ಮುಂದೂಡುತ್ತಿರುವುದು, ನಿಯಮಿತವಾಗಿ ಅತಿಯಾದ ಭಾರವನ್ನು ಎತ್ತುತ್ತಿರುವುದು,ಮಲವಿಸರ್ಜನೆಯಾಗಲು ಒತ್ತಡವನ್ನು ಹೇರುವುದು, ದೀರ್ಘಕಾಲೀನ ಅತಿಸಾರ,ಧೂಮ್ರಪಾನ ಮತ್ತು ಮದ್ಯಪಾನ, ಔಷಧಿ ಯಂಗಡಿಗಳಲ್ಲಿ ಸುಲಭವಾಗಿ ದೊರೆಯುವ ಔಷಧಗಳ ಬಳಕೆ,ಕುಟುಂಬದಲ್ಲಿ ಮೂಲವ್ಯಾಧಿಯ ಇತಿಹಾಸ,ಬೊಜ್ಜು ಮತ್ತು ಒತ್ತಡದಲ್ಲಿರುವುದು ಇವೆಲ್ಲ ಈ ರೋಗಕ್ಕೆ ಸಾಮಾನ್ಯ ಕಾರಣಗಳಾಗಿವೆ.

ಮೂಲವ್ಯಾಧಿಯಲ್ಲಿ ವಿಧಗಳು

ಈ ರೋಗವನ್ನು ಮುಖ್ಯವಾಗಿ ಒಳ ಮತ್ತು ಹೊರ ಮೂಲವ್ಯಾಧಿ ಎಂದು ಗುರುತಿಸಲಾಗಿದೆ. ಗುದನಾಳದೊಳಗೆ ಸಣ್ಣ ಗಂಟುಗಳ ಅಥವಾ ಮೊಳೆಗಳಂತಹ ರಚನೆಗಳಿದ್ದು,ಹೊರಗೆ ಕಾಣಿಸದಿದ್ದಾಗ ಅದನ್ನು ಒಳ ಮೂಲವ್ಯಾಧಿ ಎಂದು ಕರೆಯಲಾಗುತ್ತದೆ. ಗುದನಾಳದ ನರಗಳಲ್ಲಿ ನೋವಿಗೆ ಕಡಿಮೆ ಸಂವೇದನೆ ಯಿರುವುದರಿಂದ ಈ ಸ್ಥಿತಿಯಲ್ಲಿ ಹೆಚ್ಚಿನ ನೋವು ಕಾಣಿಸಿಕೊಳ್ಳುವುದಿಲ್ಲ. ಗುದದ್ವಾರದ ಹೊರಗೆ ಕಣ್ಣಿಗೆ ಕಾಣುವಂತೆ ಗಂಟುಗಳಿದ್ದರೆ ಅದು ಹೊರ ಮೂಲವ್ಯಾಧಿಯೆಂಂದು ಅನಿಸಿಕೊಳ್ಳುತ್ತದೆ. ಮಲವಿರ್ಜನೆಯ ಸಂದರ್ಭದಲ್ಲಿ ಈ ಗಂಟುಗಳು ಹೊರಗೆ ಬರುತ್ತವೆ.

 ಗಂಟುಗಳು ಉಂಟಾಗುವ ರೀತಿಯನ್ನು ಅನುಸರಿಸಿ ಈ ರೋಗವನ್ನು ನಾಲ್ಕು ಗ್ರೇಡ್‌ಗಳಲ್ಲಿ ವಿಭಜಿಸಲಾಗಿದೆ. ಗ್ರೇಡ್ 1ರಲ್ಲಿ ಸಣ್ಣ ಪ್ರಮಾಣದಲ್ಲಿ ಉರಿಯೂತವನ್ನುಂಟು ಮಾಡುವ ಗಂಟುಗಳು ಗುದನಾಳದ ಭಿತ್ತಿಯೊಳಗೆ ಇರುತ್ತವೆ. ಗ್ರೇಡ್ 2ರಲ್ಲಿ ಮಲವಿಸರ್ಜನೆಯ ವೇಳೆ ಗಂಟುಗಳು ಅಥವಾ ಮೊಳೆಗಳು ಹೊರಗೆ ಬರುತ್ತವೆ ಮತ್ತು ಕೆಲ ಸಮಯದಲ್ಲಿ ತನ್ನಿಂತಾನೇ ಒಳಗೆ ಸೇರಿಕೊಳ್ಳುತ್ತವೆ. ಗ್ರೇಡ್ 3ರಲ್ಲಿ ಮೊಳೆಗಳು ಗುದದ್ವಾರದಿಂದ ಹೊರಗೆ ಜೋಲುತ್ತಿರುತ್ತವೆ ಮತ್ತು ಅವುಗಳನ್ನು ಸುಲಭವಾಗಿ ಒಳಗೆ ತಳ್ಳಬಹುದಾಗಿದೆ. ಗ್ರೇಡ್ 4ರಲ್ಲಿ ಗಂಟುಗಳು ಗುದದ್ವಾರದ ಹೊರಗೇ ಇರುತ್ತವೆ ಮತ್ತು ಅವುಗಳನ್ನು ಒಳಗೆ ಸೇರಿಸಲು ಸಾಧ್ಯವಾಗುವುದಿಲ್ಲ.

ಮೂಲವ್ಯಾಧಿಯ ಲಕ್ಷಣಗಳು

ಸಾಮಾನ್ಯವಾಗಿ ಈ ರೋಗದ ಲಕ್ಷಣಗಳು ಗಂಭೀರವಾಗಿರುವುದಿಲ್ಲ ಮತ್ತು ಕೆಲವು ದಿನಗಳ ಬಳಿಕ ತನ್ನಿಂತಾನೇ ಶಮನಗೊಳ್ಳುತ್ತವೆ. ಮಲವಿಸರ್ಜನೆಯಾದರೂ ಇನ್ನೂ ಮಲ ತುಂಬಿರುವಂತೆ ರೋಗಿಗಳಿಗೆ ಅನುಭವವಾಗಬಹುದು. ಗುದದ್ವಾರದ ಸುತ್ತಲಿನ ಜಾಗದಲ್ಲಿ ತುರಿಕೆಯಿದ್ದು ಅದು ಕೆಂಪಾಗಬಹುದು,ಮಲವಿಸರ್ಜನೆಯ ಸಂದರ್ಭದಲ್ಲಿ ನೋವು,ಗುದದ್ವಾರದ ಸುತ್ತ ಗಟ್ಟಿಯಾದ,ನೋವನ್ನುಂಟುಮಾಡುವ ಗಂಟು,ಮಲದಲ್ಲಿ ರಕ್ತ ಹೋಗುವಿಕೆ ಇವುಗಳೂ ರೋಗಿಯಲ್ಲಿ ಕಂಡುಬರಬಹುದು.

ಮೂಲವ್ಯಾಧಿಯನ್ನು ಸಾಮಾನ್ಯವಾಗಿ ಸ್ವಯಂ ನಿರ್ಧರಿಸಬಹುದು.ಲಕ್ಷಣಗಳನ್ನು ಆಧರಿಸಿ ವೈದ್ಯರು ಅಗತ್ಯ ಪರೀಕ್ಷೆಗಳನ್ನು ನಡೆಸುತ್ತಾರೆ ಮತ್ತು ಇದರಲ್ಲಿ ಕೊಲೊನೊಸ್ಕೋಪಿಯೂ ಸೇರಬಹುದು.

►ಚಿಕಿತ್ಸೆ

ಸಾಮಾನ್ಯವಾಗಿ ಶೇ.90ರಷ್ಟು ಪ್ರಕರಣಗಳಲ್ಲಿ ಮೂಲವ್ಯಾಧಿಯು ಸೂಕ್ತ ಆಹಾರ ಮತ್ತು ಔಷಧಿ ಸೇವನೆಯಿಂದ ಗುಣವಾಗುತ್ತದೆ. ಕೇವಲ ಶೇ.10ರಷ್ಟು ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು. ಲೇಸರ್ ಶಸ್ತ್ರಚಿಕಿತ್ಸೆ,ಡೋಪ್ಲರ್ ಗೈಡೆಡ್ ರೆಕ್ಟೋ-ಏನಲ್ ರಿಪೇರ್‌ನಂತಹ ಅತ್ಯಾಧುನಿಕ ಚಿಕಿತ್ಸೆಗಳೂ ಲಭ್ಯವಿವೆ.

ಮೂಲವ್ಯಾಧಿಯನ್ನು ನಿಭಾಯಿಸಲು ಕೆಲವು ಟಿಪ್ಸ್

ಹೆಚ್ಚಿನ ಪ್ರಕರಣಗಳಲ್ಲಿ ಈ ರೋಗವು ತನ್ನಿಂತಾನೇ ಶಮನವಾಗುತ್ತದೆ. ಮೂಲವ್ಯಾಧಿಯಿಂದ ನರಳುತ್ತಿರುವವರು ತಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಬಹುದು. ನಾರು ಅಧಿಕವಾಗಿರುವ ಆಹಾರ ಸೇವನೆ,ದೇಹತೂಕವನ್ನು ಕಡಿಮೆ ಮಾಡಿಕೊಳ್ಳುವುದು,ಸ್ವಯಂಔಷಧಿಯ ಗೋಜಿಗೆ ಹೋಗದಿರುವುದು,ಸಾಕಷ್ಟು ನೀರನ್ನು ಕುಡಿಯುತ್ತಿರುವುದು, ಮಲವಿಸರ್ಜನೆಯ ಅವಸರವುಂಟಾದಾಗ ಅದನ್ನು ತಡೆಯದಿರುವುದು ಇವೆಲ್ಲ ಇಂತಹ ಬದಲಾವಣೆಗಳಲ್ಲಿ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News