ಟೋಲ್‌ಗಳಲ್ಲಿ ವಕೀಲರ ವಾಹನಗಳಿಗೆ ವಿನಾಯಿತಿ ಕೋರಿ ಅರ್ಜಿ: ಕೇಂದ್ರ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2018-11-20 16:11 GMT

ಬೆಂಗಳೂರು, ನ.20: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ಥಾಪಿಸಿರುವ ಟೋಲ್ ಕೇಂದ್ರಗಳಲ್ಲಿ ಶುಲ್ಕ ಪಾವತಿಸುವುದರಿಂದ ವಕೀಲರಿಗೆ ವಿನಾಯಿತಿ ನೀಡುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಸರಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಟೋಲ್ ಕೇಂದ್ರಗಳಲ್ಲಿ ಶುಲ್ಕ ಪಾವತಿಯಿಂದ ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಕೀಲರಿಗೆ ವಿನಾಯಿತಿ ನೀಡಲು ಕೇಂದ್ರ ಸರಕಾರ ಹಾಗೂ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾ. ಎಸ್.ಸುಜಾತ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಣಿಜ್ಯೇತರ ವಾಹನಗಳಿಗೆ ಟೋಲ್ ಪಡೆಯುವುದನ್ನು ರದ್ದುಪಡಿಸಲು ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ. ಈ ಸಂಬಂಧ ಕರಡು ಮಸೂದೆಯನ್ನು ಸಿದ್ಧಪಡಿಸಲಾಗಿದ್ದು ಸಂಸತ್ತಿನಲ್ಲಿ ಚರ್ಚೆಗೆ ಬಾಕಿ ಇದೆ ಎಂದು ವಿವರಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೀಠ, ವಾಣಿಜ್ಯೇತರ ವಾಹನಗಳಿಗೆ ಟೋಲ್ ಶುಲ್ಕ ಪಾವತಿಯಿಂದ ವಿನಾಯಿತಿ ನೀಡುವ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಲುವನ್ನು ಸ್ಪಷ್ಟವಾಗಿ ತಿಳಿಸಲು ಸೂಚಿಸಿ, ವಿಚಾರಣೆಯನ್ನು ಡಿ.19ಕ್ಕೆ ಮುಂದೂಡಿತು.

ರಾಜ್ಯ ವಕೀಲರ ಪರಿಷತ್ತಿನಲ್ಲಿ 72 ಸಾವಿರಕ್ಕೂ ಹೆಚ್ಚು ವಕೀಲರು ನೋಂದಾಯಿಸಿಕೊಂಡಿದ್ದಾರೆ. ಈ ವಕೀಲರು ಕೂಡ ನ್ಯಾಯಾಲಯಗಳ ಅಧಿಕಾರಿಗಳಾಗಿದ್ದು ನ್ಯಾಯದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಪ್ರತಿನಿತ್ಯವೂ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಯ ನ್ಯಾಯಾಲಯಗಳಿಗೆ ಹೋಗಬೇಕಾಗಿದೆ. ಅದೇ ರೀತಿ ಬೆಂಗಳೂರು ಪ್ರಧಾನ ಪೀಠ ಮತ್ತು ಕಲಬುರಗಿ, ಧಾರವಾಡ ಸಂಚಾರಿ ಪೀಠಗಳಿಗೂ ಪ್ರತಿದಿನ ಸಂಚರಿಸಬೇಕಾಗಿದೆ. ಈಗಾಗಲೇ ನ್ಯಾಯಮೂರ್ತಿಗಳಿಗೆ ಟೋಲ್ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ವಕೀಲರಿಗೂ ವಿನಾಯಿತಿ ನೀಡಬೇಕು ಎಂದು ಕೋರಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಕರ್ನಾಟಕ ರಾಜ್ಯ ವಕೀಲರ ಸಂಯುಕ್ತ ಸಂಘದ ಪರವಾಗಿ ಪಿಐಎಲ್ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News