ಎನ್‌ಎಸ್‌ಎಸ್ ಶಿಬಿರಾರ್ಥಿಗಳಿಗೆ ಮೊಬೈಲ್ ಬಳಕೆ ನಿಷೇಧ

Update: 2018-11-20 16:38 GMT

ಬೆಂಗಳೂರು, ನ.20: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್)ಯ ಶಿಬಿರಗಳಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಮಾಡುವುದಕ್ಕೆ ನಿಷೇಧ ಹೇರಿದೆ.

ವಿಟಿಯು ವ್ಯಾಪ್ತಿಯ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳಿಗೆ ಸೂಚನೆ ನೀಡಿದ್ದು, ಶಿಬಿರಗಳನ್ನು ಕರೆ, ನದಿ, ಸಮುದ್ರ ಅಣೆಕಟ್ಟುಗಳ ಅಕ್ಕ-ಪಕ್ಕದಲ್ಲಿ ಆಯೋಜನೆ ಮಾಡುವಂತಿಲ್ಲ ಎಂದು ಹೇಳಿದೆ. ಶಿಬಿರಗಳಿಗೆ ತೆರಳಿದ ಸಂದರ್ಭದಲ್ಲಿ ಅಪಘಾತಗಳುಂಟಾಗಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತುಮಕೂರಿನಲ್ಲಿ ಖಾಸಗಿ ಕಾಲೇಜು ಒಂದು ಆಯೋಜನೆ ಮಾಡಿದ್ದ ಎನ್‌ಎಸ್‌ಎಸ್ ಶಿಬಿರದಲ್ಲಿ ಮೂರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕೆರೆ ನೀರಿನಲ್ಲಿ ಬಿದ್ದು ಮರಣ ಹೊಂದಿದ್ದರು. ಮಂಡ್ಯದಲ್ಲಿ ಅಂತಿಮ ವರ್ಷದ ಐದು ವೈದ್ಯಕೀಯ ವಿದ್ಯಾರ್ಥಿಗಳು ಸೆಲ್ಪಿ ತೆಗೆಯಲು ಹೋಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಅಲ್ಲದೆ, ಹಿಂದಿನ ವರ್ಷ ಎಂಜಿನಿಯರಿಂಗ್ ಕಾಲೇಜುಗಳ 9 ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಹೀಗಾಗಿ, ವಿಟಿಯು ಈ ತೀರ್ಮಾನ ಕೈಗೊಂಡಿದೆ.

ಮುಚ್ಚಳಿಕೆ ಪತ್ರ: ಶಿಬಿರಕ್ಕೆ ತೆರಳುವ ವಿದ್ಯಾರ್ಥಿಗಳಿಂದ ಮುಚ್ಚಳಿಕೆ ಪತ್ರಕ್ಕೆ ಸಹಿ ಮಾಡಿಸಿಕೊಳ್ಳಬೇಕೆಂಬ ಷರತ್ತು ವಿಧಿಸಿದೆ.

ಪಿಯು ಮತ್ತು ಪದವಿ ಕಾಲೇಜಿಗೂ ಅನ್ವಯ: ಎನ್‌ಎಸ್‌ಎಸ್ ಶಿಬಿರ ಆಯೋಜನೆ ಮಾಡಲು ವಿಟಿಯು ಮಾರ್ಗಸೂಚಿ ರಚಿಸಿರುವ ಮಾದರಿಯಲ್ಲಿಯೇ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಕಾಲೇಜು ಶಿಕ್ಷಣ ಇಲಾಖೆ ಪ್ರತ್ಯೆಕ ಮಾರ್ಗಸೂಚಿ ರಚಿಸಿ ಕಾಲೇಜುಗಳಿಗೆ ಸಲ್ಲಿಸಲು ನಿರ್ಧರಿಸಿವೆ. ವರ್ಷದಲ್ಲಿ ಒಮ್ಮೆ ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಶ್ರಮದಾನ ಶೀರ್ಷಿಕೆಯಡಿ ಹಳ್ಳಿಗಳಿಗೆ ತೆರಳಿ ಸ್ವಚ್ಛತಾ ಕಾರ್ಯ ಕೈಗೊಳ್ಳುತ್ತಾರೆ. ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಇರುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ಗೆ ಸೇರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News