ಬಂಡವಾಳಶಾಹಿಗಳು, ಕೋಮುವಾದವೇ ಬಿಜೆಪಿಯ ಶಕ್ತಿ: ಸಿಪಿಐ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ

Update: 2018-11-20 16:43 GMT

ಬೆಂಗಳೂರು, ನ.20: ಬಂಡವಾಳಶಾಹಿಗಳು ಹಾಗೂ ಕೋಮುವಾದವೇ ಬಿಜೆಪಿಯ ಶಕ್ತಿಯಾಗಿದ್ದು, 2019ರ ಲೋಕಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದ್ದಂತೆ, ವಿವಾದಗಳನ್ನೇ ಬಿಜೆಪಿಯ ಮಂತ್ರ-ತಂತ್ರಗಳನ್ನಾಗಿಸಿಕೊಂಡಿದೆ ಎಂದು ಸಿಪಿಐನ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು ಹೊಸ ತಂತ್ರಗಳು, ವಿವಾದಗಳು ಹಾಗೂ ಹುಸಿ ಕರೆಗಳ ಮೂಲಕ ಮುಗ್ಧ ಜನರನ್ನು ದಾರಿ ತಪ್ಪಿಸುತ್ತಿದೆ. ಅಲ್ಲದೆ, ಬಿಜೆಪಿಯನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನತೆ ಸೋಲಿಸುವುದರೊಂದಿಗೆ ಬಂಡವಾಳಶಾಹಿ, ಕೋಮುವಾದ, ಸಂವಿಧಾನ ವಿರೋಧಿಯ ಪರ ದನಿಯನ್ನು ಅಡಗಿಸಬೇಕು ಎಂದು ತಿಳಿಸಿದರು.

ಬಿಜೆಪಿಯಲ್ಲಿ ಪರ್ಯಾಯ ರಾಜಕೀಯ ಪಕ್ಷದ ಚಿಂತನೆ ನಡೆಯುತ್ತಿದೆ. ಇದು, ಮೋಸದ ಪರ್ಯಾಯವಾಗಿದೆ. ಉದ್ಯೋಗ ಹಾಗೂ ಭೂಮಿಗಾಗಿ, ಸರ್ವರಿಗೂ ಉಚಿತ ಉನ್ನತ ಶಿಕ್ಷಣ, ಗುಣಮಟ್ಟದ ಆರೋಗ್ಯ ಸುರಕ್ಷೆಗಾಗಿ, ದೇಶದ ಬಹುಸಂಸ್ಕೃತಿ ಮಾನ್ಯತೆಗಾಗಿ ಹಾಗೂ ರಾಜಕೀಯ-ಆರ್ಥಿಕ ವ್ಯವಸ್ಥೆಯ ಬದಲಾವಣೆಗಾಗಿ ಹೋರಾಡುವ, ನವ-ಉದಾರವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಶ್ರಮಿಸುವ ಜನತಾ ಪರ್ಯಾಯವನ್ನು ಕಟ್ಟಬೇಕೆಂದು ಕರೆ ನೀಡಿದರು.

ಬಂಡವಾಳಶಾಹಿ ವ್ಯವಸ್ಥೆಯ ಬಿಕ್ಕಟ್ಟಿನ ನಿವಾರಣೆಗೆ ಪ್ರತಿಯೊಂದು ದೇಶದಲ್ಲೂ ಫ್ಯಾಸಿಸ್ಟ್ ಶಕ್ತಿಗಳನ್ನು ಬೆಳೆಸಲಾಗುತ್ತಿದೆ. ಬಿಜೆಪಿಯ ಅಧಿಕಾರದಿಂದಾಗಿ, ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗುತ್ತಿದೆ. ಏಕಸ್ವಾಮ್ಯ ಬಂಡವಾಳ ಹಾವಳಿ ಹಾಗೂ ಕೋಮುವಾದಿ ಫ್ಯಾಸಿಸ್ಟ್ ಶಕ್ತಿಗಳ ಉಪಟಳ ದೇಶದ ರೈತ ಕಾರ್ಮಿಕರನ್ನೊಳಗೊಂಡ ಎಲ್ಲ ಜನ ಸಮುದಾಯಗಳ ಜೀವನವನ್ನು ಅಭದ್ರಗೊಳಿಸಿದೆ. ಅಲ್ಲದೆ, ಅಲ್ಪಸಂಖ್ಯಾತರು, ದಲಿತರು, ಮಹಿಳೆಯರು ಹಾಗೂ ವಿಚಾರವಾದಿಗಳು, ಕೋಮುವಾದಿ ಹಿಂದುತ್ವವಾದಿಗಳ ದಾಳಿಗೆ ಗುರಿಯಾಗುತ್ತಿದ್ದಾರೆ ಎಂದರು.

ನ. 26ರಂದು ಮೆರವಣಿಗೆ

ಸಿಪಿಐ(ಎಂಎಲ್)ನ 11ನೆ ಮಹಾ ಅಧಿವೇಶನದ ಪ್ರಯುಕ್ತ ನವ-ಉದಾರವಾದಿ ನೀತಿ ಹಾಗೂ ಕೋಮುವಾದಿ ಫ್ಯಾಸಿಸ್ಟೀಕರಣ ವಿರೋಧಿಸಿ ನ.26ರಂದು ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ ಉದ್ಯಾನವನದವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಅಂದಿನಿಂದ ಐದು ದಿನಗಳವರೆಗೂ ನಗರದ ಸ್ಫೂರ್ತಿಧಾಮದಲ್ಲಿ ಇಂದಿನ ಸಾಮ್ರಾಜ್ಯಶಾಹಿ ಹಾಗೂ ಎಡ ಶಕ್ತಿಗಳ ಐಕ್ಯತೆ ಸವಾಲುಗಳ ಕುರಿತ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News