ಬಂಡವಾಳಶಾಹಿಗಳು ಉನ್ನತ ಶಿಕ್ಷಣದ ನೀತಿ ನಿರ್ಧರಿಸುತ್ತಿದ್ದಾರೆ: ಬಿ.ಶ್ರೀಪಾದ

Update: 2018-11-20 16:47 GMT

ಬೆಂಗಳೂರು, ನ.20: ಬಿರ್ಲಾ, ಅಂಬಾನಿಯಂತಹ ಬಂಡವಾಳಶಾಹಿಗಳು ಉನ್ನತ ಶಿಕ್ಷಣದ ನೀತಿಗಳನ್ನು ನಿರ್ಧರಿಸುತ್ತಿದ್ದು, ಕೇಂದ್ರ ಸರಕಾರ ವಿಶ್ವವಿದ್ಯಾಲಯವನ್ನು ಖಾಸಗೀಕರಣಕ್ಕೆ ದೂಡುತ್ತಿರುವುದು ವಿದ್ಯಾರ್ಥಿ ವಿರೋಧಿ ನೀತಿಯೆಂದು ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ ರಾಜ್ಯ ಸಂಚಾಲಕ ಬಿ.ಶ್ರೀಪಾದ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಗಳ ಖಾಸಗೀಕರಣದಿಂದಾಗಿ ದಲಿತರು, ಬುಡಕಟ್ಟು ಮಹಿಳೆಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಗುಣಮಟ್ಟದ ಉನ್ನತ ಶಿಕ್ಷಣಕ್ಕೆ ಒತ್ತಾಯಿಸಿ ಹಾಗೂ ವಿವಿಗಳ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನಾ ಸಭೆ ಮತ್ತು ಮೆರವಣಿಗೆಯನ್ನು ನ.24ರಂದು ಪುರಭವನದ ಎದುರು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಗುಣಮಟ್ಟದ ಉನ್ನತ ಶಿಕ್ಷಣವನ್ನು ಉಚಿತವಾಗಿ ಎಲ್ಲರಿಗೂ ಒದಗಿಸಬೇಕಾದ ಸರಕಾರ, ತನ್ನ ಜವಾಬ್ದಾರಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಉನ್ನತ ಶಿಕ್ಷಣವನ್ನು ನೀಡಬೇಕಾದ ಬಜೆಟ್‌ನಲ್ಲಿ ಹಣ ಕಡಿತ, ವಿವಿಗಲಿಗೆ ನೀಡಬೇಕಾದ ಅನುದಾನವನ್ನು ನಿಲ್ಲಿಸುವುದು, ವಿದ್ಯಾರ್ಥಿ ಸಂಘಗಳನ್ನು ನಿಷೇಧಿಸಿ, ಅಧ್ಯಾಪಕರನ್ನು ಕಡೆಗಣಿಸಿ ಕೇಂದ್ರೀಕೃತ ಸರ್ವಾಧಿಕಾರದ ಆಡಳಿತವನ್ನು ನಡೆಸುತ್ತಿದೆ ಎಂದು ಆರೋಪಿಸಿದರು.

ಯುಜಿಸಿಯನ್ನು ಕಿತ್ತುಹಾಕಿ ಭಾರತೀಯ ಉನ್ನತ ಶಿಕ್ಷಣ ಆಯೋಗವನ್ನು ಆ ಸ್ಥಾನದಲ್ಲಿಡುವ ಪ್ರಯತ್ನ, ಉನ್ನತ ಶಿಕ್ಷಣದ ಮೇಲಿನ ಬಹುದೊಡ್ಡ ಪ್ರಹಾರ. ಇದರ ವಿರುದ್ಧ ರಾಜ್ಯ ಸರಕಾರ ನಿರ್ಧಾರ ಕೈಗೊಳ್ಳಬೇಕು. ತಮಿಳುನಾಡು ಸರಕಾರ ಈ ಬಗ್ಗೆ ನಿರ್ಣಯ ಕೈಗೊಂಡ ಮಾದರಿಯಲ್ಲೇ, ಯುಜಿಸಿಯನ್ನು ರದ್ದುಗೊಳಿಸುವ ಕೇಂದ್ರದ ಪ್ರಯತ್ನವನ್ನು ರಾಜ್ಯ ಸರಕಾರ ಒಪ್ಪಿಲ್ಲ ಎಂಬ ಅಧಿಕೃತ ನಿರ್ಣಯವನ್ನು ಕೇಂದ್ರಕ್ಕೆ ಕಳಿಸಬೇಕೆಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News