ಪಿಎಸ್ಸೈ ಹೊನ್ನೇಗೌಡ ವಿರುದ್ಧ ನಿಂದನೆ ಆರೋಪ: ಸೇವೆಯಿಂದ ವಜಾಕ್ಕೆ ಆಗ್ರಹಿಸಿ ಡಿಎಸ್ಸೆಸ್ ಪ್ರತಿಭಟನೆ

Update: 2018-11-20 16:52 GMT

ಬೆಂಗಳೂರು, ನ.20: ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ಸೇರಿದ ಆರೋಪಿಗೆ ಬೂಟು ಕಾಲಿನಿಂದ ಒದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಕೆಜಿಎಫ್ ತಾಲೂಕಿನ ಬೇತಮಂಗಲ ಪೊಲೀಸ್ ಠಾಣೆಯ ಪಿಎಸ್ಸೈ ಹೊನ್ನೇಗೌಡರನ್ನು ಸೇವೆಯಿಂದ ವಜಾಗೊಳಿಸಿ, ಜಾತಿನಿಂದನೆ ದೂರು ದಾಖಲಿಸುವಂತೆ ಡಿಎಸ್ಸೆಸ್ ಪ್ರತಿಭಟನೆ ನಡೆಸಿ ಆಗ್ರಹಿಸಿದೆ.

ನಗರದ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸಿದ ಡಿಎಸ್ಸೆಸ್ ಕಾರ್ಯಕರ್ತರು, ಶೋಷಿತರನ್ನು ಸಂರಕ್ಷಿಸಿ ಸತ್ಯ ಹಾಗೂ ಮಾನವೀಯತೆಯ ಪರವಾಗಿ ನಿಲ್ಲಬೇಕಾದ ಪೊಲೀಸ್ ಠಾಣೆಗಳಲ್ಲಿಯೆ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹೀಗಾಗಿ ದಲಿತರಿಗೆ ನ್ಯಾಯವೆಂಬುದು ಮರೀಚಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿಎಸ್ಸೆಸ್ ಅಧ್ಯಕ್ಷ ಡಾ.ರಘು ಮಾತನಾಡಿ, ಪಿಎಸ್ಸೈ ಹೊನ್ನೇಗೌಡ ತನ್ನ ಅಧಿಕಾರ ಬಳಸಿಕೊಂಡು ಆರೋಪಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜಾತಿಗೆ ಸಂಬಂಧಿಸಿದಂತೆ ಅಸಹ್ಯ ಮಾತುಗಳನ್ನು ಆಡಿದ್ದಾರೆ. ಅಲ್ಲದೆ, ತಮ್ಮ ಬೂಟು ಕಾಲಿನಿಂದ ಹಲ್ಲೆಯನ್ನು ನಡೆಸಿದ್ದಾರೆ. ಇಂತಹ ಅಧಿಕಾರಿ ಸರಕಾರಿ ಸೇವೆಯಲ್ಲಿ ಇರುವುದಕ್ಕೆ ಯೋಗ್ಯರಲ್ಲ. ಹೀಗಾಗಿ ಅವರನ್ನು ಸೇವೆಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News