ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬಳಸುವ ಸಂಚಿತ ನಿಧಿ ಕಾಲಕಾಲಕ್ಕೆ ಬಳಸುವ ಅಗತ್ಯವಿದೆ: ಹೈಕೋರ್ಟ್

Update: 2018-11-21 17:17 GMT

ಬೆಂಗಳೂರು, ನ.21: ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬಳಸಬೇಕಾದ ಸಂಚಿತ ನಿಧಿ(ಕನ್ಸಾಲಿಡೇಟ್ ಫಂಡ್)ಯನ್ನು ಕಾಲಕಾಲಕ್ಕೆ ಸಮರ್ಪಕವಾಗಿ ಬಳಸುವ ಅಗತ್ಯವಿದೆ ಎಂದು ಹೈಕೋರ್ಟ್ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.

ವೇದಾಂತ ಲಿಮಿಟೆಡ್ ಕಂಪೆನಿಗೆ ಸಂಬಂಧಿಸಿದ ಗಣಿ ಪ್ರಕರಣವೊಂದನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರನ್ನು ಪ್ರಶ್ನಿಸಿ, ಈ ಹಣ ಎಷ್ಟಿದೆ, ಹೇಗೆ ಉಪಯೋಗವಾಗುತ್ತಿದೆ, ಇದು ಯಾರ ಉಸ್ತುವಾರಿಯಲ್ಲಿ ನಡೆಯುತ್ತಿದೆ ಎಂದರು.

ಇದಕ್ಕೆ ಉತ್ತರಿಸಿದ ಫಣೀಂದ್ರ ಅವರು, ಅರಣ್ಯೀಕರ ಪರಿಹಾರ ನಿಧಿ ನಿರ್ವಹಣೆ ಮತ್ತು ಯೋಜನೆ ಹಾಗೂ ಸುಧಾರಣಾ ನಿಧಿಯ ಅಡಿಯಲ್ಲಿ 2010ರಿಂದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ 13 ಸಾವಿರ ಕೋಟಿಯಷ್ಟಿದೆ. ಇಷ್ಟು ಹಣ ಕಬ್ಬಿಣದ ಅದಿರು ಗಣಿಗಾರಿಕೆಯಿಂದಲೇ ಸಂಗ್ರಹವಾಗಿದೆ ಎಂದು ತಿಳಿಸಿದರು.

ಈ ಹಣವನ್ನು ಗಣಿಬಾಧಿತ ಪ್ರದೇಶಗಳ ರಸ್ತೆ, ರೈಲ್ವೆ, ಕಾಲೇಜು, ಆರೋಗ್ಯ ಕೇಂದ್ರ ಸೇರಿದಂತೆ ಹಲವು ಸುಧಾರಣ ವಲಯಗಳಿಗೆ ಉಪಯೋಗಿಸಲಾಗುತ್ತದೆ. ಆದರೆ, ಇನ್ನೂ ಬಳಸಿಲ್ಲ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಇಂತಹ ಹಣದ ಬಳಕೆ ಕಾಲಕಾಲಕ್ಕೆ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News