ನೌಕರಿಗಾಗಿ ಯುಎಇ, ಸೌದಿಗೆ ತೆರಳುವ ಭಾರತೀಯರು ಈ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಿ

Update: 2018-11-22 10:57 GMT

ಹೊಸದಿಲ್ಲಿ, ನ.22: ಸಂಯುಕ್ತ ಅರಬ್ ಸಂಸ್ಥಾನ ಹಾಗೂ ಇತರ ಎಮಿಗ್ರೇಶನ್ ಚೆಕ್ ರಿಕ್ವೈರ್ಡ್(ಇಸಿಆರ್)  ದೇಶಗಳಿಗೆ ಉದ್ಯೋಗಗಳಿಗೆ ತೆರಳಬಯಸುವ ಭಾರತೀಯರು ಮುಂದಿನ ವರ್ಷದ ಜನವರಿ 1ರಿಂದ ಕಡ್ಡಾಯವಾಗಿ ಸರಕಾರಿ ವೆಬ್ ತಾಣ ಇ-ಮೈಗ್ರೇಟ್‍ನಲ್ಲಿ ತಮ್ಮ ಹೆಸರು ನೋಂದಣಿಗೊಳಿಸಬೇಕಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೊಸ ಸುತ್ತೋಲೆ ತಿಳಿಸಿದೆ.

ಈ ಸೂಚನೆಯನ್ನು ಪಾಲಿಸದ ಭಾರತೀಯರನ್ನು ವಾಪಸ್ ಸ್ವದೇಶಕ್ಕೆ ಕಳುಹಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ. ಉದ್ಯೋಗ ವೀಸಾದ ಮೇಲೆ ವಿದೇಶಕ್ಕೆ ತೆರಳುವವರು ನಾನ್-ಇಸಿಆರ್ ಪಾಸ್‍ಪೋರ್ಟ್‍ಗಳನ್ನು ಹೊಂದಿದ್ದೇ ಆದಲ್ಲಿ ಅವರು ತಮ್ಮ ಪ್ರಯಾಣದ ಕನಿಷ್ಠ 24 ಗಂಟೆಗಳಿಗೆ ಮುಂಚಿತವಾಗಿ ನೋಂದಣಿ ಮಾಡಬೇಕಿದೆ.

ಇತರ ದೇಶಗಳಲ್ಲಿ ಉದ್ಯೋಗಕ್ಕೆಂದು ತೆರಳುವ ಭಾರತೀಯರ ಹಿತಾಸಕ್ತಿಗಳನ್ನು ರಕ್ಷಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ ತಿಳಿಸಿದೆಯಲ್ಲದೆ ನಾನ್-ಇಸಿಆರ್ ಪಾಸ್‍ಪೋರ್ಟ್‍ಗಳನ್ನು ಹೊಂದಿರುವವರು ಈ ವೆಬ್ ತಾಣದಲ್ಲಿ ತಮ್ಮ ಹೆಸರು ನೋಂದಾಯಿಸಿಲ್ಲವೆಂದು ತಿಳಿದರೆ ಅವರಿಗೆ ಹೋಗಲು ಅವಕಾಶ ನೀಡಲಾಗದು ಎಂದು ತಿಳಿಸಲಾಗಿದೆ. ಹೆಸರು ನೋಂದಾಯಿಸಿಕೊಂಡವರಿಗೆ ಸರಕಾರದಿಂದ ನೋಂದಣಿಗೊಳಿಸಿದ ಬಗ್ಗೆ ಎಸ್‍ಎಂಎಸ್/ಇಮೇಲ್ ದೊರೆಯುವುದು.

ಸಂಯುಕ್ತ ಅರಬ್ ಸಂಸ್ಥಾನ ಹೊರತುಪಡಿಸಿ ಅಫ್ಗಾನಿಸ್ತಾನ, ಇಂಡೊನೇಷ್ಯ, ಬಹರೈನ್, ಜೋರ್ಡಾನ್, ಇರಾಕ್, ಕುವೈತ್, ಲಿಬಿಯಾ, ಮಲೇಷ್ಯಾ, ಓಮನ್, ಖತಾರ್, ಸೌದಿ ಅರೇಬಿಯ, ಸುಡಾನ್, ದಕ್ಷಿಣ ಸುಡಾನ್, ಸಿರಿಯಾ ಮತ್ತು ಥೈಲ್ಯಾಂಡ್ ದೇಶಗಳಿಗೆ ಹೋಗುವವರು ಈ ನಿಯಮ ಕಡ್ಡಾಯವಾಗಿ ಪಾಲಿಸಬೇಕಿದೆ.

ಇಸಿಆರ್ ಪಾಸ್‍ಪೋರ್ಟ್‍ಗಳನ್ನು ಹೊಂದಿರುವವರು ಹಾಗೂ ಇಸಿಆರ್ ದೇಶಗಳಿಗೆ ಬೇರೆ ಉದ್ದೇಶಗಳಿಗೆ ತೆರಳುವವರಿಗೆ ಈ ನಿಯಮ ಅನ್ವಯಿಸುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News