ನಾನು ಬೆಂಗಳೂರಿನಲ್ಲೆ ಮತದಾನದ ಹಕ್ಕು ಹೊಂದಿದ್ದೇನೆ: ಪರಿಷತ್ ಸದಸ್ಯ ರಘು ಆಚಾರ್
ಬೆಂಗಳೂರು, ನ. 22: ‘ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಲು ನಾನು ನನ್ನ ವಿಳಾಸ ಬದಲಾವಣೆ ಮಾಡಿಲ್ಲ. ನಾನು ಬೆಂಗಳೂರಿನಲ್ಲೆ ಮತದಾನದ ಹಕ್ಕು ಹೊಂದಿದ್ದು, ನನ್ನ ಬಳಿ ದಾಖಲೆಗಳಿವೆ’ ಎಂದು ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಇಲ್ಲಿನ ಶಾಸಕರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ನಕಲಿ ಬಿಲ್ ನೀಡಿ ಭತ್ತೆ ಪಡೆದಿದ್ದೇನೆಂಬುದು ಅಪ್ಪಟ ಸುಳ್ಳು. ನಾನು ಎಲ್ಲಿಯೂ ಹೋಗಿಲ್ಲ. ಪೊಲೀಸರು ನನಗೆ ನೋಟಿಸ್ ನೀಡಿಲ್ಲ. ಆದರೂ, ಠಾಣೆಗೆ ಹಾಜರಾಗಿದ್ದೇನೆ ಎಂದರು.
ನನ್ನ ಜನ್ಮ ಪ್ರಮಾಣಪತ್ರ ಮೈಸೂರಿನದು. ಅದನ್ನು ಹೊರತುಪಡಿಸಿದರೆ, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ ಸೇರಿದಂತೆ ನನ್ನ ಎಲ್ಲ ದಾಖಲೆಗಳು ಬೆಂಗಳೂರಿನ ವಿಳಾಸದಲ್ಲೆ ಇವೆ. ಬಿಬಿಎಂಪಿ ಬಿಟ್ಟರೆ ಬೇರೆ ಎಲ್ಲಿಯೂ ಮತದಾನ ಮಾಡಿಲ್ಲ. ಇದಕ್ಕೆ ನನ್ನ ಬಳಿ ದಾಖಲೆಗಳಿವೆ ಎಂದು ಅವರು ತಿಳಿಸಿದರು.
ಸುಳ್ಳು ವಿಳಾಸ ನೀಡಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಂಡ ಪರಿಷತ್ ಸದಸ್ಯ ಪಟ್ಟಿಯಲ್ಲಿ ನನ್ನ ಹೆಸರು ಸೇರಿದಂತೆ ಏಳು ಮಂದಿ ವಿರುದ್ಧ ಬಿಬಿಎಂಪಿ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ದೂರು ನೀಡಿದ್ದರು. ಸಭಾಪತಿ ವಿಚಾರಣೆ ನಡೆಸಿ ಎಜಿ ಸಲಹೆ ಪಡೆದು ನಾವು ನಿರ್ದೋಷಿಗಳೆಂದು ಪ್ರಕರಣ ಮುಕ್ತಾಯ ಮಾಡಲಾಗಿತ್ತು.
ಇದೀಗ ಭತ್ತೆ ಪಡೆದ ಆರೋಪ ಮಾಡಲಾಗಿದೆ. ಆದರೆ, ನಾನು ಇದುವರೆಗೂ ಯಾವುದೇ ರೀತಿಯ ಭತ್ತೆ(ಟಿಎ-ಡಿಎ) ಪಡೆದಿಲ್ಲ. ಪದ್ಮನಾಭರೆಡ್ಡಿ ಮೇಯರ್ ಆಗುವ ಉದ್ದೇಶದಿಂದ ಸಿ.ಆರ್.ಮನೋಹರ್ ಅವರ ಮನೆಗೆ ಖುದ್ದು ಹೋಗಿ ದಾಖಲೆ ಪಡೆದು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿದ್ದಾರೆಂದು ರಘು ಆಚಾರ್ ಟೀಕಿಸಿದರು.
ಅಪರಾಧ ಮಾಡಿಲ್ಲ: ಸುದ್ದಿಗೋಷ್ಠಿಯಲ್ಲಿದ್ದ ಪರಿಷತ್ ಮಾಜಿ ಸದಸ್ಯ ಎಂ.ಡಿ. ಲಕ್ಷ್ಮಿನಾರಾಯಣ, ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ನಾವು ಬೆಂಗಳೂರಿನ ಖಾಯಂ ವಿಳಾಸ ಮತ್ತು ಕ್ಷೇತ್ರದ ವಿಳಾಸವನ್ನು ನೀಡಿರುತ್ತೇವೆ. ಭತ್ತೆ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಹೀಗಿರುವಾಗ ನಕಲಿ ಬಿಲ್ ನೀಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಇಷ್ಟಕ್ಕೂ ನಾವೇನೂ ಅಪರಾಧ ಮಾಡಿಲ್ಲ ಎಂದರು.
ನಮ್ಮ ಮೇಲೆ ವಂಚನೆ ಪ್ರಕರಣ ದಾಖಲಿಸಿದ್ದು, ಅಂತಹ ಯಾವುದೇ ತಪ್ಪನ್ನು ನಾವು ಮಾಡಿಲ್ಲ. ಇದರ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ ಎಂದ ಲಕ್ಷ್ಮೀನಾರಾಯಣ, ನಾವು ಯಾವುದೇ ನಿಯಮವನ್ನು ಉಲ್ಲಂಘನೆ ಮಾಡಿಲ್ಲ ಎಂದರು.