ಬಿಬಿಎಂಪಿ ಉಪ ಮೇಯರ್, ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಡಿ.5ಕ್ಕೆ ಚುನಾವಣೆ
ಬೆಂಗಳೂರು, ನ.22: ಅಕಾಲಿಕ ಮರಣಕ್ಕೆ ತುತ್ತಾದ ರಮೀಳಾ ಅವರಿಂದ ತೆರವಾದ ಬಿಬಿಎಂಪಿ ಉಪ ಮೇಯರ್ ಸ್ಥಾನ ಹಾಗೂ ವಿವಿಧ 12 ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ಡಿ.5 ರಂದು ಚುನಾವಣೆ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಲಾಗಿದೆ.
ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಅಧಿಕಾರದ ಅವಧಿ ನವೆಂಬರ್‌ಗೆ ಕೊನೆಗೊಂಡಿತ್ತು. ಆದರೆ, ಹಲವು ಕಾರಣಗಳಿಂದ ದಿನಾಂಕ ಪ್ರಕಟವಾಗಿಲ್ಲ. ಇದೀಗ ಪ್ರಾದೇಶಿಕ ಆಯುಕ್ತರು ಚುನಾವಣಾ ದಿನಾಂಕ ಪ್ರಕಟಿಸಿದ್ದು, ಡಿ.5 ರಂದು ಬೆಳಗ್ಗೆ 11.30 ಸರಿಯಾಗಿ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ. ಮೊದಲಿಗೆ ಉಪಮೇಯರ್ ಆಯ್ಕೆ ಪ್ರಕ್ರಿಯೆ ನಡೆಸಲಿದ್ದು, ಆನಂತರ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ನಡೆಯಲಿದೆ.
132 ಸದಸ್ಯರ ಆಯ್ಕೆ: ಬಿಬಿಎಂಪಿಯಲ್ಲಿ 12 ಸ್ಥಾಯಿ ಸಮಿತಿಗಳಿದ್ದು, ಒಂದಕ್ಕೆ 11 ಜನ ಸದಸ್ಯರಂತೆ ಒಟ್ಟು 132 ಜನರನ್ನು ಆಯ್ಕೆ ಮಾಡಬೇಕಾಗಿದೆ. ಪಾಲಿಕೆಯ ಅಧಿಕಾರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರದ ಹಿಡಿತದಲ್ಲಿರುವ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿ ಆಯ್ಕೆ ವೇಳೆಯಲ್ಲಿ ತಟಸ್ಥ ನೀತಿ ಅನುಸರಿಸುವ ಸಾಧ್ಯತೆ ಇದೆ.
ಒಂದು ಸ್ಥಾಯಿ ಸಮಿತಿಗೆ ಮೈತ್ರಿಯಿಂದ ಆರು ಹಾಗೂ ವಿರೋಧ ಪಕ್ಷದಿಂದ ಐದು ಜನ ಸದಸ್ಯರು ಆಯ್ಕೆಯಾಗುವ ಸಾಧ್ಯತೆಯಿದ್ದು, ಎಲ್ಲ ಸ್ಥಾಯಿ ಸಮಿತಿಗಳಿಗೂ ಅವಿರೋಧ ಆಯ್ಕೆಯಾಗುವ ಸಾಧ್ಯತೆಗಳಿವೆ. ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ನಡೆಯುವ ಕೌನ್ಸಿಲ್ ಸಭೆಯಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು.
ಬಿಜೆಪಿ ಅಭ್ಯರ್ಥಿ ಅನುಮಾನ: ರಮೀಳಾರಿಂದ ತೆರವಾಗಿರುವ ಸ್ಥಾನಕ್ಕೆ ಮೈತ್ರಿ ಪಕ್ಷದವರೇ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಆದರೆ, ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಮುಖಭಂಗ ಅನುಭವಿಸಿತ್ತು. ಆದುದರಿಂದಾಗಿ ಈ ಚುನಾವಣೆಯಲ್ಲಿ ಉಪ ಮೇಯರ್ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಅನುಮಾನ ಎನ್ನಲಾಗಿದೆ. ಹೀಗಾಗಿ, ಉಪ ಮೇಯರ್ ಆಯ್ಕೆಯೂ ಅವಿರೋಧ ಆಯ್ಕೆಯಾಗುವ ಸಾಧ್ಯತೆಗಳಿವೆ.
ಮ್ಯಾಜಿಕ್ ನಂಬರ್ 131: ಈ ಹಿಂದೆ ನಡೆದ ಚುನಾವಣೆಯ ವೇಳೆ 256 ಮತದಾರರಿದ್ದರು. ಆಗ ಮ್ಯಾಜಿಕ್ ನಂಬರ್ 130 ಇತ್ತು. ಇದೀಗ ಮತದಾರರ ಸಂಖ್ಯೆ 260 ಕ್ಕೆ ಹೆಚ್ಚಾಗಿದ್ದು, ಮ್ಯಾಜಿಕ್ ಸಂಖ್ಯೆ 131 ಕ್ಕೆ ಏರಿದೆ.
ಇತ್ತೀಚಿಗೆ ಕೇಂದ್ರ ಸಚಿವ ಅನಂತಕುಮಾರ್, ಉಪಮೇಯರ್ ರಮೀಳಾ ಉಮಾಶಂಕರ್ ನಿಧನರಾಗಿದ್ದು, ವಿಧಾನಪರಿಷತ್ ಸದಸ್ಯ ಉಗ್ರಪ್ಪ ಬಳ್ಳಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ, ಅವರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ವಿಧಾನಪರಿಷತ್‌ಗೆ ಹೊಸದಾಗಿ ಆಯ್ಕೆಯಾದ ಯು.ಬಿ.ವೆಂಕಟೇಶ್, ವೇಣುಗೋಪಾಲ್, ರಮೇಶ್‌ಗೌಡ ಹಾಗೂ ರಾಜ್ಯಸಭಾ ಸದಸ್ಯರಾದ ನಝೀರ್ ಅಹಮದ್‌ಖಾನ್ ಅವರನ್ನು ಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ ಮತದಾರರ ಸಂಖ್ಯೆ 260ಕ್ಕೆ ಹೆಚ್ಚುವಂತಾಗಿದೆ.
ಸ್ಥಾಯಿ ಸಮಿತಿಗಳಿಗೆ ಲಾಬಿ: ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ ದಿನಾಂಕ ಪ್ರಕಟವಾದ ಹಿನ್ನೆಲೆಯಲ್ಲಿ ಪ್ರಮುಖ ಸ್ಥಾಯಿ ಸಮಿತಿ ಪಡೆಯಲು ಕಾಂಗ್ರೆಸ್-ಜೆಡಿಎಸ್ ಸದಸ್ಯರ ನಡುವೆ ಪೈಪೋಟಿ ಏರ್ಪಟ್ಟಿದೆ. ಮೇಯರ್ ಹುದ್ದೆ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್‌ನ ಸೌಮ್ಯ ಶಿವಕುಮಾರ್, ಲಾವಣ್ಯ ಗಣೇಶರೆಡ್ಡಿ, ಲತಾಕುಮಾರ್ ಸೇರಿದಂತೆ ಹಲವರು ಪ್ರಮುಖ ಸ್ಥಾಯಿ ಸಮಿತಿಗೆ ಪಕ್ಷದ ಮುಖಂಡರಲ್ಲಿ ಬೇಡಿಕೆ ಇಟ್ಟಿದ್ದಾರೆ. ಹಗದೂರು ವಾರ್ಡ್‌ನ ಉದಯಕುಮಾರ್, ಲಕ್ಷ್ಮೀದೇವಿನಗರದ ವೇಲುನಾಯ್ಕರ್, ಮಹಾಲಕ್ಷ್ಮೀ ಲೇಔಟ್‌ನ ಕೇಶವಮೂರ್ತಿ ಸೇರಿ ಇನ್ನಿತರರು ಕೂಡ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ.
ಜೆಡಿಎಸ್‌ನಲ್ಲಿಯೂ ಉಪಮೇಯರ್ ಸ್ಥಾನದ ಬದಲಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡುವಂತೆ ದುಂಬಾಲು ಬಿದ್ದಿದ್ದಾರೆ. ಇನ್ನುಳಿದಂತೆ ಏಳು ಪಕ್ಷೇತರ ಸದಸ್ಯರಲ್ಲಿ ನಾಲ್ಕು ಜನರಿಗೆ ಅಧ್ಯಕ್ಷ ಸ್ಥಾನ ಸಿಗಲಿದ್ದು, ಹಲವು ಸದಸ್ಯರು ಕಾಂಗ್ರೆಸ್‌ನೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ತಲಾ 4 ಸಮಿತಿಗಳ ಹಂಚಿಕೆ
ಪಾಲಿಕೆಯ 12 ಸ್ಥಾಯಿ ಸಮಿತಿಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರು ತಲಾ 4 ಸ್ಥಾಯಿ ಸಮಿತಿ ಪಡೆಯಲಿದ್ದಾರೆ. ಕಳೆದ ಬಾರಿ ಜೆಡಿಎಸ್ ಪಾಲಾಗಿದ್ದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಈ ಬಾರಿ ಕಾಂಗ್ರೆಸ್ ಪಡೆದುಕೊಳ್ಳುವ ಸಾಧ್ಯತೆಗಳಿವೆ.
ಉಪಮೇಯರ್ ಲಾಬಿ ಆರಂಭ
ಉಪಮೇಯರ್ ಹುದ್ದೆಗೆ ಜೆಡಿಎಸ್‌ನಲ್ಲಿ ಲಾಬಿ ಶುರುವಾಗಿದೆ. ಜೆಡಿಎಸ್ ಸದಸ್ಯರಾದ ನೇತ್ರಾ ನಾರಾಯಣ್, ರಾಜಶೇಖರ್, ಭದ್ರೇಗೌಡ ಉಪಮೇಯರ್ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದು, ಪಕ್ಷದ ಮುಖಂಡರು ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು ನಿಗೂಢವಾಗಿದೆ.