ಕರಾಚಿಯಲ್ಲಿ ಚೀನಾದ ರಾಯಭಾರಿ ಕಚೇರಿ ಬಳಿ ಗುಂಡಿನ ದಾಳಿ; 2 ಪೊಲೀಸರು ಬಲಿ

Update: 2018-11-23 14:37 GMT

ಕರಾಚಿ, ನ.23: ಪಾಕಿಸ್ತಾನದ ಕರಾಚಿಯಲ್ಲಿರುವ ಚೀನಾದ ರಾಯಭಾರಿ ಕಚೇರಿ ಬಳಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಪರಿಣಾಮ ಇಬ್ಬರು ಪೊಲೀಸರು ಮೃತಪಟ್ಟು, ಓರ್ವ ಗಾಯಗೊಂಡ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಬೆಳಗ್ಗೆ 9:30ಕ್ಕೆ ಕರಾಚಿಯ  ಕ್ಲಿಫ್ಟನ್ ಬ್ಲಾಕ್ 4ರಲ್ಲಿರುವ  ಚೀನಾದ ರಾಯಭಾರಿ ಕಚೇರಿ ಗೆ  ನಾಲ್ವರು ದುಷ್ಕರ್ಮಿಗಳು ಒಳಪ್ರವೇಶಿಸುವ ಯತ್ನ ನಡೆಸಿದರು. ಆಗ ಅವರನ್ನು ಭದ್ರತಾ ತಂಡ ತಡೆಯಿತು. ಈ  ಹಂತದಲ್ಲಿ ಗುಂಡಿನ ಚಕಮಕಿ ಉಂಟಾಯಿತು. ಗುಂಡೇಟಿನಿಂದ ಗಂಭೀರ ಗಾಯಗೊಂಡ ಇಬ್ಬರು ಪೊಲೀಸರು ಮೃತಪಟ್ಟರು.

ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳ ಪೈಕಿ ಓರ್ವನನ್ನು  ಕೊಲ್ಲಲಾಗಿದೆ. ಉಳಿದವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಚೀನಾ ಆಕ್ರಮಣದ ವಿರುದ್ಧ ಹೋರಾಟ: ಬಲೂಚ್ ಲಿಬರೇಶನ್ ಆರ್ಮಿ

ಕರಾಚಿಯಲ್ಲಿರುವ ಚೀನಿ ಕೌನ್ಸುಲೇಟ್ ಕಚೇರಿಯ ಮೇಲೆ ನಡೆದ ದಾಳಿಯ ಹೊಣೆಯನ್ನು ಬಲೂಚ್ ಲಿಬರೇಶನ್ ಆರ್ಮಿ ಎಂಬ ಪತ್ಯೇಕತಾವಾದಿ ಗುಂಪೊಂದು ವಹಿಸಿಕೊಂಡಿದೆ.

ತಾನು ‘ಚೀನೀ ಆಕ್ರಮಣ’ದ ವಿರುದ್ಧ ಹೋರಾಡುತ್ತಿರುವುದಾಗಿ ಹೇಳಿಕೊಂಡಿರುವ ಅದು, ಮೂವರು ದಾಳಿಕೋರರ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಕರಾಚಿಯನ್ನು ರಾಜಧಾನಿಯಾಗಿ ಹೊಂದಿರುವ ಸಿಂಧ್ ಪ್ರಾಂತವು ಬಲೂಚಿಸ್ತಾನ ಪ್ರಾಂತಕ್ಕೆ ಹೊಂದಿಕೊಂಡಿದೆ.

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ವಿರುದ್ಧ ಸಮರ ಸಾರಿರುವ ಬಲೂಚ್ ಲಿಬರೇಶನ್ ಆರ್ಮಿ, ಇದಕ್ಕೂ ಮೊದಲು ಚೀನೀಯರ ಮೇಲೆ ಹಲವಾರು ದಾಳಿಗಳನ್ನು ನಡೆಸಿದೆ.

ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೆ ಸಂಬಂಧಿಸಿದ ಯೋಜನೆಗಳನ್ನು ಕಾಯುತ್ತಿರುವ ಭದ್ರತಾ ಸಿಬ್ಬಂದಿ ಮೇಲೆ ತಾನು ಈ ವರ್ಷ 12 ದಾಳಿಗಳನ್ನು ನಡೆಸಿರುವುದಾಗಿ ಅದು ಹೇಳಿಕೊಂಡಿದೆ.

ಈ ಕಾರಿಡಾರ್‌ನಲ್ಲಿ ಚೀನಾ ಭಾರೀ ಮೊತ್ತವನ್ನು ಹೂಡಿಕೆ ಮಾಡಿದೆ.

ತನಿಖೆಗೆ ಪಾಕ್ ಪ್ರಧಾನಿ ಆದೇಶ

ಕರಾಚಿಯಲ್ಲಿರುವ ಚೀನಾ ಕೌನ್ಸುಲೇಟ್ ಕಚೇರಿಯ ಮೇಲೆ ನಡೆದ ದಾಳಿ ಕುರಿತ ತನಿಖೆಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಆದೇಶ ನೀಡಿದ್ದಾರೆ.

‘‘ಘಟನೆಯ ಸಮಗ್ರ ತನಿಖೆಗೆ ಪ್ರಧಾನಿ ಆದೇಶ ನೀಡಿದ್ದಾರೆ ಹಾಗೂ ಈ ದಾಳಿಯ ಹಿಂದಿರುವ ಎಲ್ಲ ಶಕ್ತಿಗಳನ್ನು ಹೊರಗೆಳೆಯಬೇಕು ಎಂದು ಸೂಚಿಸಿದ್ದಾರೆ’’ ಎಂದು ಇಮ್ರಾನ್ ಖಾನ್‌ರ ಕಚೇರಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಚೀನಾ ಮತ್ತು ಪಾಕಿಸ್ತಾನಗಳ ನಡುವಿನ ಆರ್ಥಿಕ ಮತ್ತು ವ್ಯೊಹಾತ್ಮಕ ಸಹಕಾರವನ್ನು ಹಾಳುಗೆಡಹುವ ಉದ್ದೇಶದ ಪಿತೂರಿಯ ಭಾಗ ಇದಾಗಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News