ಸರಕಾರದ ಹೇಳಿಕೆಗಳ ಹೊರತಾಗಿಯೂ ಗೋರಖ್‌ಪುರದಲ್ಲಿ ನಿಲ್ಲದ ಮಕ್ಕಳ ಸರಣಿ ಸಾವುಗಳು!

Update: 2018-11-24 05:45 GMT

ಕಳೆದ ವರ್ಷದ ಆಗಸ್ಟ್‌ನಲ್ಲಿ ಉತ್ತರ ಪ್ರದೇಶದ ಗೋರಖ್‌ಪುರದ ಬಾಬಾ ರಾಘವ ದಾಸ್ (ಬಿಆರ್‌ಡಿ) ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೇವಲ 10 ದಿನಗಳಲ್ಲಿ 71 ಮಕ್ಕಳು ಸಾವನ್ನಪ್ಪಿದ್ದ ಸುದ್ದಿ ಇಡೀ ದೇಶವನ್ನೇ ಆಘಾತಕ್ಕೆ ತಳ್ಳಿತ್ತು. ಇದು ಐದು ತಿಂಗಳ ಹಿಂದಷ್ಟೇ ಅಧಿಕಾರಕ್ಕೇರಿದ್ದ,ಐದು ಬಾರಿಯ ಗೋರಖ್‌ಪುರ ಸಂಸದ ಯೋಗಿ ಆದಿತ್ಯನಾಥ್ ಸರಕಾರಕ್ಕೆ ಹಿನ್ನಡೆಯನ್ನುಂಟು ಮಾಡಿತ್ತು. ಸುದೀರ್ಘ ತನಿಖೆ,ಬಂಧನಗಳು ಇತ್ಯಾದಿ ಅನಿವಾರ್ಯ ಕರ್ಮಗಳ ಬಳಿಕ ಈ ವರ್ಷದ ಜನವರಿಯಲ್ಲಿ ಯೋಗಿ ಆದಿತ್ಯನಾಥ್ ಅವರು 1978ರಿಂದ 25,000 ಮಕ್ಕಳ ಸಾವಿಗೆ ಕಾರಣವಾದ ‘ಎಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್(ಎಇಎಸ್) ಮತ್ತು ‘ಜಪಾನೀಸ್ ಎನ್ಸೆಫಾಲಿಟಿಸ್(ಜೆಇ)’ ರೋಗಗಳನ್ನು ನಿರ್ಮೂಲನ ಮಾಡುವುದಾಗಿ ಘೋಷಿಸಿದ್ದರು.

ಕ್ರಿಯಾ ಯೋಜನೆ 2018ನ್ನು ಜಾರಿಗೊಳಿಸಿದ್ದ ಸರಕಾರವು ಸಾವುಗಳ ಸಂಖ್ಯೆ ತಗ್ಗಿದೆ ಎಂದು ಕಳೆದ ಆಗಸ್ಟ್‌ನಲ್ಲಿ ಹೇಳಿಕೊಂಡಿತ್ತು. ಆದರೆ ಪರಿಸ್ಥಿತಿ ಎಳ್ಳಷ್ಟೂ ಬದಲಾಗಿಲ್ಲ ಮತ್ತು ಗೋರಖ್‌ಪುರ ಆಸ್ಪತ್ರೆಯಲ್ಲಿ ಮಕ್ಕಳ ಸರಣಿಸಾವುಗಳು ಈಗಲೂ ಮುಂದುವರಿದಿವೆ! ಆಂಗ್ಲ ಸುದ್ದಿವಾಹಿನಿಯ ವರದಿಗಾರರ ತಂಡವೊಂದು ಇತ್ತೀಚಿಗೆ ಗೋರಖ್‌ಪುರ ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿಯ ವೈದ್ಯರು,ರೋಗಿಗಳು.ತಜ್ಞರು ಮತ್ತು ದುಃಖತಪ್ತ ಕುಟುಂಬಗಳು ಸರಕಾರದ ಹೇಳಿಕೆಗಿಂತ ಭಿನ್ನವಾದ ಚಿತ್ರಣವನ್ನು ಮುಂದಿಟ್ಟಿದ್ದಾರೆ.ಕಳೆದ ವರ್ಷದ ಅಕ್ಟೋಬರ್‌ನಿಂದ ಈ ಆಸ್ಪತ್ರೆಯು ಎಲ್ಲ ರಹಸ್ಯಗಳನ್ನೂ ತನ್ನಲ್ಲಿಯೇ ಇಟ್ಟುಕೊಂಡಿದೆ. ದಿಲ್ಲಿ ಮತ್ತು ಕೇರಳದಲ್ಲಿ ಅಲ್ಲಿಯ ಆಸ್ಪತ್ರೆಗಳು ವೈರಾಣು ರೋಗಗಳ ಪ್ರಕರಣಗಳ ಕುರಿತು ಪ್ರತಿದಿನ ಬುಲೆಟಿನ್‌ಗಳನ್ನು ಹೊರಡಿಸುತ್ತಿವೆ. ಆದರೆ ಗೋರಖ್‌ಪುರ ಆಸ್ಪತ್ರೆಯಲ್ಲಿ ಈ ಪದ್ಧತಿಯನ್ನು ನಿಲ್ಲಿಸಲಾಗಿದೆ. ಪ್ರಕರಣಗಳು ಅಥವಾ ಸಾವುಗಳ ಬಗ್ಗೆ ತುಟಿ ಬಿಚ್ಚದಂತೆ ಇಲ್ಲಿಯ ಆಡಳಿತಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶ ನೀಡಲಾಗಿದೆ. ಪ್ರಕರಣಗಳು ಮತ್ತು ಸಾವಿನ ಕುರಿತು ಅಂಕಿಅಂಶಗಳನ್ನು ತಿರುಚಲಾಗುತ್ತಿದೆ ಎಂದು ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರ ಒಂದು ವರ್ಗ ಆರೋಪಿಸಿದರೆ,ಇತ್ತೀಚಿಗಷ್ಟೇ ಮಾರಕ ಮಿದುಳು ಜ್ವರದಿಂದಾಗಿ ತನ್ನ ಆರರ ಹರೆಯದ ಪುತ್ರನ್ನು ಕಳೆದುಕೊಂಡಿರುವ ಶಾಯರಾ ಬೇಗಮ್‌ನಂತಹ ತಾಯಂದಿರಿಗೆ ತಮ್ಮ ಮಕ್ಕಳನ್ನು ಉಳಿಸಿಕೊಳ್ಳುವ ಬಗ್ಗೆ ದಿಕ್ಕು ತೋಚದಂತಾಗಿದೆ.

ಸುಮಾರು 40 ವರ್ಷಗಳ ಹಿಂದೆ ಗೋರಖ್‌ಪುರದಲ್ಲಿ ಮಿದುಳು ಜ್ವರದ ಮೊದಲ ಲಕ್ಷಣಗಳು ಕಾಣಿಸಿಕೊಂಡಿದ್ದವು. ರೋಗಿಗಳು ಅತಿಯಾದ ಜ್ವರ, ಸೆಳವುಗಳು, ಗೊಂದಲ,ಕೈಕಾಲುಗಳು ಸೆಟೆದುಕೊಳ್ಳುವುದರೊಡನೆ ಅಂತಿಮವಾಗಿ ಸಾವನ್ನಪ್ಪುತ್ತಿದ್ದರು.ೆ 1969ರಲ್ಲಿ ಆರಂಭಗೊಂಡಿದ್ದ ಗೋರಖ್‌ಪುರ ಆಸ್ಪತ್ರೆಗೆ ಈ ರೋಗದ ಲಕ್ಷಣಗಳೊಂದಿಗೆ ತರಲಾಗಿದ್ದ ಮೊದಲ ರೋಗಿ ಎಂಟರ ಹರೆಯದ ಬಾಲಕನಾಗಿದ್ದ. ಒಳರೋಗಿಯಾಗಿ ದಾಖಲಿಸಿಕೊಂಡ ಬೆನ್ನಿಗೇ ಕೋಮಾಕ್ಕೆ ಜಾರಿದ್ದ ಆತ ಮರುದಿನ ಕೊನೆಯುಸಿರೆಳೆದಿದ್ದ. ಆಗ 28 ವರ್ಷದವರಾಗಿದ್ದ,ಈ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಆರ್.ಎನ್.ಸಿಂಗ್ ಅವರು, ಆ ಬಾಲಕ ಹೇಗೆ ಸತ್ತ ಎನ್ನುವುದೇ ನಮಗೆ ಗೊತ್ತಾಗಿರಲಿಲ್ಲ. ಅಂತಹ ಪ್ರಕರಣವನ್ನು ನಾವೆಂದೂ ಮೊದಲು ಕಂಡಿರಲಿಲ್ಲ ಎಂದು ವರದಿಗಾರರ ತಂಡಕ್ಕೆ ತಿಳಿಸಿದರು. ಅಧಿಕೃತ ದಾಖಲೆಗಳಂತೆ ಆ ವರ್ಷ ಆಸ್ಪತ್ರೆಯಲ್ಲಿ 3,500ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು,ಈ ಪೈಕಿ 1,100 ರೋಗಿಗಳು ಸಾವನ್ನಪ್ಪಿದ್ದರು.

2008ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲುಎಚ್‌ಒ)ಯು ಎಇಎಸ್‌ನ್ನು ಮಾನಸಿಕ ಗೊಂದಲದಿಂದ ಹಿಡಿದು ವಾಕ್‌ಶಕ್ತಿಗೆ ಹಾನಿ ಮತ್ತು ಸೆಳವುಗಳವರೆಗೆ ವಿವಿಧ ಲಕ್ಷಣಗಳಿಗೆ ಕಾರಣವಾಗುವ ‘ತೀವ್ರ ಜ್ವರದೊಂದಿಗೆ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ’ ಎಂದು ವ್ಯಾಖ್ಯಾನಿಸುವವರೆಗೂ ಈ ಮಾರಕ ಕಾಯಿಲೆಯ ಕುರಿತು ಎಲ್ಲವೂ ಅಯೋಮಯವಾಗಿತ್ತು. ಅದು ನಾವು ಈಗೇನು ಮಿದುಳು ಜ್ವರ ಎಂದು ಎರಡೇ ಶಬ್ದಗಳಲ್ಲಿ ಹೇಳುತ್ತಿರುವ ರೋಗವಾಗಿತ್ತು. ಗೋರಖ್‌ಪುರದಲ್ಲಿ ಎಇಎಸ್ ಮತ್ತು ಜೆಇ ಎರಡೂ ಮೇಳೈಸಿದ್ದವು. 2007-2016ರ ನಡುವೆ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಇಂತಹ ಸುಮಾರು 75,000 ಪ್ರಕರಣಗಳು ವರದಿಯಾಗಿದ್ದು ಸಾವುಗಳ ಪ್ರಮಾಣ ಶೇ.15ರಿಂದ ಉತ್ತರ ಪ್ರದೇಶದಲ್ಲಿ ಶೇ.44ರವರೆಗೆ ಇತ್ತು. ಉ.ಪ್ರದೇಶದಲ್ಲಿ ಹೆಚ್ಚಿನ ಸಾವುಗಳು ಗೋರಖ್‌ಪುರ ದಲ್ಲಿಯೇ ಸಂಭವಿಸಿದ್ದವು.

ಸಾವುಗಳು ಇಂದಿಗೂ ಮುಂದುವರಿದಿವೆ,ಖಾಸಗಿ ಆಸ್ಪತ್ರೆಗಳ ಅಂಕಿಅಂಶಗಳು ಲಭ್ಯವಿಲ್ಲ. 2016 ಮತ್ತು 2017ರ ನಡುವೆ ಪ್ರತಿದಿನ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಲಸಿಕೆ ಕಾರ್ಯಕ್ರಮ,ರೋಗದ ಬಗ್ಗೆ ಜಾಗ್ರತಿ ಮತ್ತು ನೈರ್ಮಲ್ಯ ಅಭಿಯಾನಗಳು ಹಾಗೂ ಗೋರಖ್‌ಪುರ ಆಸ್ಪತ್ರೆಯಲ್ಲಿ ಮೂಲಸೌಕರ್ಯಗಳ ಉನ್ನತೀಕರಣ ಸೇರಿದಂತೆ ತನ್ನ ಪ್ರಯತ್ನಗಳು ಯಶಸ್ವಿಯಾಗಿದ್ದು,ಸಾವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಉ.ಪ್ರದೇಶ ಸರಕಾರವು ಕಳೆದ ವರ್ಷ ಹೇಳಿಕೊಂಡಿತ್ತು. ಆಗಸ್ಟ್‌ನಲಗಲಿ ವಿಧಾನ ಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ನೀಡಿದ್ದ ಅಂಕಿಂಶಗಳು ಈ ಹೇಳಿಕೆಗೆ ಆಧಾರವಾಗಿದ್ದವು. ಉ.ಪ್ರ.ಸರಕಾರದ ಮತ್ತು ರಾಷ್ಟ್ರೀಯ ವೈರಾಣು ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಂಕಿಅಂಶಗಳಲ್ಲಿ ವ್ಯತ್ಯಾಸಗಳಿವೆ. ಈ ಅಂಕಿಅಂಶಗಳನ್ನು ತಿದ್ದಲಾಗಿದೆ ಎಂಬ ಆರೋಪಗಳಿವೆ. ನವಂಬರ್‌ನಲ್ಲಿ ಸಹ ಭಾರತದಲ್ಲಿಯ ಎಲ್ಲ ಎಇಎಸ್ ಪ್ರಕರಣಗಳ ಪೈಕಿ ಶೇ.32ರಷ್ಟು ಉತ್ತರ ಪ್ರದೇಶದಿಂದಲೇ ವರದಿಯಾಗಿವೆ. 2017ರ ಇದೇ ಅವಧಿಯಲ್ಲಿ ಈ ಪ್ರಮಾಣ ಶೇ.34ರಷ್ಟಿತ್ತು. ಸರಕಾರವು ಸಾವಿನ ಸಂಖ್ಯೆಯನ್ನು ಕಡಿಮೆಯಾಗಿ ತೋರಿಸುತ್ತಿದೆ ಎಂದು ದಶಕಗಳಿಂದಲೂ ಗೋರಖ್‌ಪುರದಲ್ಲಿ ಎಇಎಸ್ ತಡೆಗೆ ಪ್ರಯತ್ನಿಸುತ್ತಿರುವ ಎನ್‌ಜಿಒ ಮಾನವ ಸೇವಾ ಸಂಸ್ಥಾನದ ರಾಜೇಶ ಮಣಿ ಹೇಳಿದರು. ಈ ಅಂಕಿಅಂಶಗಳನ್ನು ನಂಬುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದರು.

ರಾಜ್ಯವು ಈಗಲೂ ಪ್ರತಿ ವ್ಯಕ್ತಿಯ ಆರೋಗ್ಯ ರಕ್ಷಣೆಗಾಗಿ 655 ರೂ.ಗಳನ್ನು ವ್ಯಯಿಸುತ್ತಿದೆಯಾದರೂ,ಗೋರಖ್‌ಪುರ ಆಸ್ಪತ್ರೆಯಲ್ಲಿ ದಿನನಿತ್ಯ ಕಂಡುಬರುತ್ತಿರುವ ದೃಶ್ಯಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಮೈಲುದ್ದದ ಸರದಿಸಾಲುಗಳಲ್ಲಿ ನಿಂತಿರುವುದು ಇಲ್ಲಿಯ ರೋಗಿಗಳಿಗೆ ಅನಿವಾರ್ಯವಾಗಿದೆ, ತಮ್ಮ ಪ್ರೀತಿಪಾತ್ರರು ಚೇತರಿಸಿಕೊಳ್ಳುವುದನ್ನೇ ಕುಟುಂಬ ಸದಸ್ಯರು ಕಾಯುತ್ತಿರುತ್ತಾರೆ ಮತ್ತು ಅವಧಿಗೂ ಮೀರಿ ದುಡಿಯುತ್ತಿರುವ ವೈದ್ಯರು ತಮ್ಮ ಕೈಲಾದಷ್ಟನ್ನು ಮಾಡುತ್ತಿದ್ದಾರೆ.

ಐದು ವರ್ಷಕ್ಕೂ ಕಡಿಮೆ ಪ್ರಾಯದ ಸಾವುಗಳ ಶೇ.24ರಷ್ಟು ಪ್ರಕರಣಗಳು ಉ.ಪ್ರದೇಶದಲ್ಲಿಯೇ ಸಂಭವಿಸುತ್ತಿವೆ.

ವರದಿಗಾರರು ಸಂಸ್ಥೆಯ ಪ್ರಾಂಶುಪಾಲ ಮತ್ತು ಡೀನ್ ಡಾ.ಗಣೇಶ ಕುಮಾರ್ ಅವರನ್ನು ಭೇಟಿಯಾದಾಗ,ಎಇಎಸ್ ಮತ್ತು ಜೆಇ ಪ್ರಕರಣಗಳ ಕುರಿತು ಮಾತನಾಡಲು ತನಗೆ ಅಧಿಕಾರವಿಲ್ಲ ಎಂದು ಹೇಳಿದರು. ಅಂಕಿಅಂಶಗಳನ್ನು ತಿರುಚಲಾಗುತ್ತಿದೆ ಎನ್ನುವುದನ್ನು ಅವರು ನಿರಾಕರಿಸಿದರು.

ಈ ವರ್ಷದ ಜ.1ರಿಂದ ಅ.1ರವರೆಗೆ ಆಸ್ಪತ್ರೆಯಲ್ಲಿ ಎಇಎಸ್ ಮತ್ತು ಜೆಇಯಿಂದಾಗಿ ಒಟ್ಟು 218 ಸಾವುಗಳು ಸಂಭವಿಸಿವೆ ಮತ್ತು 766 ರೋಗಿಗಳು ದಾಖಲಾಗಿದ್ದಾರೆ ಎಂದು ವಾರ್ಡ್‌ನಲ್ಲಿಯ ಮೂಲಗಳು ಪ್ರತಿಪಾದಿಸಿವೆ.

ಮರಣದ ಪ್ರಮಾಣ ಶೇ.28ಕ್ಕೂ ಅಧಿಕ ಮಟ್ಟದಲ್ಲಿರುವುದು ಕಳವಳಕಾರಿಯಾಗಿದೆ. ಕಳೆದ ವರ್ಷ ಹೆಚ್ಚಿನ ಸಾವುಗಳು ಸಂಭವಿಸಿದ್ದಾಗಲೂ ಈ ಸಂಖ್ಯೆ ಸುಮಾರು ಶೇ.21ರಷ್ಟೇ ಇತ್ತು ಎಂದು ಹೆಸರು ಹೇಳಿಕೊಳ್ಳಲು ಬಯಸದ ವೈದ್ಯರೋರ್ವರು ತಿಳಿಸಿದರು.

ಭಾಗಶಃ ರೋಗ ನಿರ್ಧಾರ ಇದಕ್ಕೆ ಕಾರಣವೆಂದ ಅವರು,ಈ ವರ್ಷ ಹೆಚ್ಚಿನ ರೋಗಿಗಳನ್ನು ಸರಕಾರಿ ದಾಖಲೆಗಳಲ್ಲಿ ‘ಎಕ್ಯೂಟ್ ಫೆಬ್ರೈಲ್ ಇಲ್‌ನೆಸ್ (ಎಎಫ್‌ಐ)’ನಿಂದ ನರಳುತ್ತಿರುವವರು ಎಂದು ಕಾಣಿಸಲಾಗಿದೆ. ಸರಳವಾಗಿ ಹೇಳಬೇಕೆಂದರೆ ಈ ಎಎಫ್‌ಐ ತೀವ್ರ ಜ್ವರದಿಂದ ಬಳಲುವ ಸ್ಥಿತಿಯಾಗಿದೆ. ಹೀಗಾಗಿ ರೋಗಿಯು ಬಳಿಕ ಎಇಎಸ್‌ನಿಂದ ಮೃತಪಟ್ಟರೂ ದಾಖಲೆಗಳು ಅದು ಎಇಎಸ್ ಎಂದು ತೋರಿಸುವುದಿಲ್ಲ. ಸಂಖ್ಯೆ ಕಡಿಮೆಯಾಗಲು ಇದು ಕಾರಣವಾಗಿದೆ ಎಂದರು.

ಇಂದು ಜಗತ್ತಿನಲ್ಲಿ ಪ್ರತಿ ಐದು ಮಕ್ಕಳ ಸಾವುಗಳಲ್ಲಿ ಒಂದು ಭಾರತದಲ್ಲಿ ಸಂಭವಿಸುತ್ತಿದೆ ಮತ್ತು ಭಾರತದಲ್ಲಿ ಸಂಭವಿಸುವ ಈ ಸಾವುಗಳ ಪೈಕಿ ಅರ್ಧಕ್ಕೂ ಹೆಚ್ಚು ಉತ್ತರ ಭಾರತದಲ್ಲಿ ಸಂಭವಿಸುತ್ತಿವೆ ಎನ್ನುವುದನ್ನು ಮಣಿಪಾಲ್ ವಿವಿಯು ನವಜಾತ ಶಿಶುಗಳ ಆರೋಗ್ಯ ಕುರಿತು ಕೈಗೊಂಡಿದ್ದ ಸಮೀಕ್ಷೆಯು ಬೆಟ್ಟುಮಾಡಿದೆ. ಅತ್ಯಂತ ಹದಗೆಟ್ಟ ಜಿಲ್ಲೆಗಳಲ್ಲಿ ಗೋರಖ್‌ಪುರ ಒಂದಾಗಿದೆ.

ಬಿಆರ್‌ಡಿ ಮೆಡಿಕಲ್ ಕಾಲೇಜಿನ ಅಂಕಿಅಂಶಗಳು ದಯನೀಯವಾಗಿವೆ. ಸೆ.1ಕ್ಕೆ ಇದ್ದಂತೆ ಇಲ್ಲಿ ನವಜಾತ ಶಿಶುಗಳ ತೀವ್ರ ನಿಗಾ ವಿಭಾಗ ಮತ್ತು ಮಕ್ಕಳ ತೀವ್ರ ನಿಗಾ ವಿಭಾಗಗಳಲ್ಲಿ ಒಟ್ಟು 1,637 ಸಾವುಗಳು ಸಂಭವಿಸಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1,812 ಸಾವುಗಳು ಸಂಭವಿಸಿದ್ದವು ಎಂದು ಮೂಲಗಳು ತಿಳಿಸಿವೆ. ಅಂದರೆ ಪರಿಸ್ಥಿತಿಯಲ್ಲಿ ಅಲ್ಪ ಸುಧಾರಣೆಯಾಗಿದೆ. ಕಳೆದ ವರ್ಷ ಪ್ರತಿ ಮೂರು ದಿನಗಳಿಗೆ 22 ಮಕ್ಕಳು ಸಾವನ್ನಪ್ಪಿದ್ದರೆ ಈ ವರ್ಷ ಅದು 20ಕ್ಕಿಳಿದಿದೆ.

ಇದು ದುರದೃಷ್ಟಕರ ಕಟುವಾಸ್ತವವಾಗಿದೆ. ಅಪೌಷ್ಟಿಕತೆಯಿಂದ ಹಿಡಿದು ಉಸಿರಾಟದ ತೊಂದರೆಗಳವರೆಗೆ ಹಲವಾರು ಕಾರಣಗಳಿಂದ ಈ ಮಕ್ಕಳು ಸಾಯುತ್ತಿವೆ. ಆದರೆ ಕಳೆದ ವರ್ಷದ ಆಗಸ್ಟ್‌ನಲ್ಲಿ ಭಾರೀ ಸುದ್ದಿಯಾಗಿದ್ದ ಮಕ್ಕಳ ಸಾವುಗಳ ಬಳಿಕ ಗೋರಖ್‌ಪುರದಲ್ಲಿ ಮಕ್ಕಳು ಸಾಯುತ್ತಿಲ್ಲವೆಂದು ಸರಕಾರವು ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಲೇ ಬಂದಿದೆ. ಈ ಹೇಳಿಕೆಗಳಿಂದ ಯಾವುದೇ ಉದ್ದೇಶ ಸಾಧನೆಯಾಗುವುದಿಲ್ಲ. ಅವು ಕೇವಲ ಭೀತಿ ಮತ್ತು ಗೊಂದಲದ ವಾತಾವರಣವನ್ನು ಸೃಷ್ಟಿಸುತ್ತವೆಯಷ್ಟೇ ಎಂದು ಅನಾಮಧೇಯರಾಗಿರಲು ಬಯಸಿದ ಕಿರಿಯ ವೈದ್ಯರೋರ್ವರು ವರದಿಗಾರರಿಗೆ ತಿಳಿಸಿದರು.

ತನ್ನ ದಸ್ತಕ್ ಕಾರ್ಯಕ್ರಮದಡಿ ಪ್ರತಿಯೊಂದು ಮಗುವಿಗೂ ಜೆಇ ಲಸಿಕೆಯನ್ನು ನೀಡಲಾಗುತ್ತಿದೆ ಎಂಬ ಸರಕಾರದ ಹೇಳಿಕೆಗಳನ್ನು ಢಾಳಾಗಿ ಪ್ರದರ್ಶಿಸುವ ಪೋಸ್ಟರ್‌ಗಳು ಎಇಎಸ್ ವಾರ್ಡ್ ಮತ್ತು ಗೋರಖ್‌ಪುರದ ಉಳಿದ ಕಡೆ ರಾರಾಜಿಸುತ್ತಿವೆ. ಆದರೆ ಪೀಡಿಯಾಟ್ರಿಕ್ ಮತ್ತು ಪೆಥಾಲಜಿ ವಿಭಾಗಗಳಲ್ಲಿಯ ಮೂಲಗಳು ಕಳವಳಕಾರಿ ಪ್ರವೃತ್ತಿಯೊಂದನ್ನು ಬೆಟ್ಟುಮಾಡಿವೆ. ಸೆಪ್ಟೆಂಬರ್‌ವರೆಗೆ 110ಜೆಇ ಪ್ರಕರಣಗಳಿದ್ದು,ಈ ಪೈಕಿ 23 ಬಿಹಾರದ ರೋಗಿಗಳಾಗಿದ್ದಾರೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಪ್ರಕರಣಗಳ ಸಂಖ್ಯೆ 83 ಆಗಿತ್ತು ಎಂದು ಅವು ತಿಳಿಸಿವೆೆ. ಆಸ್ಪತ್ರೆಯು ಇದನ್ನು ಅಧಿಕೃತವಾಗಿ ನಿರಾಕರಿಸಿದೆಯಾದರೂ ಪ್ರಕರಣಗಳಲ್ಲಿ ಶೇ.24ರಷ್ಟು ಹೆಚ್ಚಳವಾಗಿರುವುದನ್ನ್ನು ಇದು ತೋರಿಸುತ್ತಿದೆ ಎಂದು ಮೂಲಗಳು ಹೇಳಿದವು.ಈಗಿನ ಪರಿಸ್ಥಿತಿಯನ್ನು ನೋಡಿದರೆ ಜೆಇ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಸರಕಾರವು ಹೇಳಿಕೊಳ್ಳುತ್ತಿರುವಂತೆ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದರೆ ಇದು ಹೇಗೆ ಸಾಧ್ಯ? ಈಗ ಆಗಿರುವ ಬದಲಾವಣೆಯೆಂದರೆ ಅಧಿಕಾರಿಗಳು ಈಗ ಆದ್ಯತೆಯಿಂದ ಅದನ್ನು ಕೈಗೆತ್ತಿಕೊಳ್ಳ್ಳುತ್ತಿದ್ದಾರೆ. ಈ ಕೆಲಸ ದಶಕಗಳ ಹಿಂದೆಯೇ ಆಗಬೇಕಾಗಿತ್ತು. ಈಗಲೂ ಇನ್ನೂ ಬಹಳಷ್ಟನ್ನು ಮಾಡುವ ಅಗತ್ಯವಿದೆ ಎಂದು ಮಣಿ ಹೇಳಿದರು. ಇದಕ್ಕೆ ಸಹಮತಿ ಸೂಚಿಸಿದ ಕಿರಿಯ ವೈದ್ಯರು, ಆದರೆ ಈಗ ಪರಿಸ್ಥಿತಿ ಹೇಗಿದೆಯೆಂದರೆ ನಾವು ಧೈರ್ಯದಿಂದ ಮಾತನಾಡುವಂತಿಲ್ಲ. ಹಾಗೇನಾದರೂ ಮಾಡಿದರೆ ಕೆಲಸ ಕಳೆದುಕೊಳ್ಳಬೇಕಾಗಬಹುದು ಎಂದರು.

Writer - ಅನಿರುದ್ಧ ಘೋಷಾಲ್

contributor

Editor - ಅನಿರುದ್ಧ ಘೋಷಾಲ್

contributor

Similar News