2011ರ ವಿಶ್ವಕಪ್ ಫೈನಲ್ ನಲ್ಲಿ ಯುವರಾಜ್ ಬದಲು ಧೋನಿ ಬ್ಯಾಟಿಂಗ್ ಮಾಡಲು ಕಾರಣ ಮುರಳೀಧರನ್!

Update: 2018-11-24 10:57 GMT

ರಾಂಚಿ, ನ.24: ಐಸಿಸಿ 2011ರ ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ಯುವರಾಜ್ ಸಿಂಗ್ ಅವರ ಬ್ಯಾಟಿಂಗ್ ಸರದಿ ಬಂದಾಗ ಅವರ ಬದಲು ಕಪ್ತಾನ ಎಂ.ಎಸ್. ಧೋನಿ ಅವರೇ ಕ್ರೀಸಿಗೆ ಬಂದು ಎಲ್ಲರನ್ನೂ ಚಕಿತಗೊಳಿಸಿದ್ದರು. ಈ ಪಂದ್ಯವನ್ನು ಭಾರತ ಗೆದ್ದಿತ್ತು ಎಂದು ಬೇರೆ ಹೇಳಬೇಕಾಗಿಲ್ಲ. ಆಗ ಯುವರಾಜ್ ಸಿಂಗ್ ಉತ್ತಮ ಫಾರ್ಮ್ ‍ನಲ್ಲಿದ್ದ ಹೊರತಾಗಿಯೂ ಅವರ ಬದಲು ತಾವೇಕೆ ಆಗ ಬ್ಯಾಟಿಂಗ್ ನಡೆಸಲು ಹೋಗಿದ್ದು ಎಂದು ಹಲವರನ್ನು ಹಲವು ಸಮಯದಿಂದ ಕಾಡುತ್ತಿರುವ ಪ್ರಶ್ನೆಗೆ ಧೋನಿ ದೊಂಗರಗಾಂವ್ ಪಟ್ಟಣದಲ್ಲಿ ಎಂ.ಎಸ್. ಧೋನಿ ರೆಸಿಡೆನ್ಶಿಯಲ್ ಕ್ರಿಕೆಟ್ ಅಕಾಡಮಿ ಉದ್ಘಾಟನಾ ಸಮಾರಂಭದಲ್ಲಿ  ಉತ್ತರಿಸಿದರು.

“ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಹೆಚ್ಚಿನ ಶ್ರೀಲಂಕಾ  ಬೌಲರುಗಳ ಬೌಲಿಂಗ್ ಶೈಲಿ ನನಗೆ ಚೆನ್ನಾಗಿ ತಿಳಿದಿತ್ತು. ಆಗ ಮುರಳೀಧರನ್ ಅವರು ಬೌಲಿಂಗ್ ಮಾಡುತ್ತಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ಭಾಗವಾಗಿ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆ ಅವರು ನನಗೆ ಹಲವಾರು ಬಾರಿ ಬೌಲಿಂಗ್ ಮಾಡಿದ್ದರು. ಅವರೆದುರು ಬೇಕಾದಷ್ಟು ರನ್ ನಾನು ಪೇರಿಸಬಲ್ಲೆನೆಂಬ ವಿಶ್ವಾಸವಿತ್ತು. ಇದೇ ಕಾರಣದಿಂದ ನಾನು  ನನ್ನ ಸರತಿಗಿಂತ ಮುಂಚಿತವಾಗಿಯೇ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಬಂದೆ,'' ಎಂದು ಧೋನಿ ಹೇಳಿಕೊಂಡರು.

ಶ್ರೀಲಂಕಾ ಮಹೇಲ ಜಯವರ್ಧನೆ ಅವರ 103 ರನ್ನುಗಳ ಸಹಾಯದೊಂದಿಗೆ 274 ರನ್ ಗಳಿಸಿತ್ತು. ಆ ಪಂದ್ಯದಲ್ಲಿ 22ನೇ ಓವರಿನಲ್ಲಿ ಕೊಹ್ಲಿ ಔಟಾದ ನಂತರ ಆಗಮಿಸಿದ ಧೋನಿ 79 ಬಾಲುಗಳಲ್ಲಿ 91 ರನ್ ಗಳಿಸಿ  ನಾಲ್ಕನೇ ವಿಕೆಟ್ ಪಾಲದಾರಿಕೆಯಲ್ಲಿ 109 ರನ್ ಪೇರಿಸಿ ಭಾರತದ ಜಯದ ರೂವಾರಿಯಾಗಿದ್ದರು.

``ವಿಕೆಟ್ ಕೀಪರ್ ಆಗಿರುವ ಹೊರತಾಗಿಯೂ ನಾಯಕನಾಗಿಯೂ ನಾನು ಕಂಡ ಯಶಸ್ಸಿನಿಂದ ವಿಕೆಟ್ ಕೀಪರ್ ಕೂಡ ಉತ್ತಮ ಕಪ್ತಾನನಾಗಬಲ್ಲನೆಂದು ಆಯ್ಕೆಗಾರರು ಅರಿತರು. ನನಗಿಂತ ಮುಂಚೆ ವಿಕೆಟ್ ಕೀಪರ್‍ನನ್ನು ಕಪ್ತಾನನನ್ನಾಗಿಸಲು ಅವರು ಹಿಂದೆ ಮುಂದೆ ನೋಡುತ್ತಿದ್ದರು. ಆತ ಅತಿಯಾದ ಹೊರೆ ಅನುಭವಿಸುತ್ತಾನೆಂದು ಅಂದುಕೊಂಡಿದ್ದರು'' ಎಂದು ಧೋನಿ ಹೇಳಿದರು.

ಕಪಿಲ್ ದೇವ್ ನಂತರ ಭಾರತಕ್ಕೆ ವಿಶ್ವ ಕಪ್ ಜಯಿಸಿ ಕೊಟ್ಟ ಎರಡನೇ ಕಪ್ತಾನ ಎಂಬ ಹೆಗ್ಗಳಿಕೆ ಧೋನಿಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News