ಪಾನ್‌ಕಾರ್ಡ್ ಇಲ್ಲದಿದ್ದರೂ ಮುಖ್ಯ ವಹಿವಾಟುಗಳಿಗೆ ಇದೆ ಫಾರ್ಮ್ 60

Update: 2018-11-24 15:18 GMT

ಆದಾಯ ತೆರಿಗೆ ಕಾಯ್ದೆಯಂತೆ ವಿವಿಧ ದಾಖಲೆಗಳಲ್ಲಿ ಅಥವಾ ವಹಿವಾಟುಗಳಲ್ಲಿ ಪಾನ್ ಸಂಖ್ಯೆಯನ್ನು ಉಲ್ಲೇಖಿಸುವುದು ಅಗತ್ಯವಾಗಿದೆ. ಆದರೆ ವ್ಯಕ್ತಿಯೋರ್ವ ಪಾನ್ ಕಾರ್ಡ್ ಹೊಂದಿಲ್ಲದಿರಬಹುದು ಅಥವಾ ಅದಕ್ಕಾಗಿ ಅರ್ಜಿ ಸಲ್ಲಿಸಿರಬಹುದು ಮತ್ತು ಅದು ಇನ್ನೂ ಕೈ ಸೇರಿಲ್ಲದಿರಬಹುದು. ಇಂತಹ ಪ್ರಕರಣಗಳಲ್ಲಿ ಏನು ಮಾಡಬೇಕು?, ಇದಕ್ಕೆಂದೇ ಇದೆ ಫಾರ್ಮ್ 60 ಎಂಬ ಆಪತ್ಬಾಂಧವ. ಪಾನ್ ಇಲ್ಲದಿದ್ದರೆ ವಹಿವಾಟುಗಳನ್ನು ನಡೆಸಲು ಸಂಬಂಧಿತ ಪೂರಕ ದಾಖಲೆಗಳೊಂದಿಗೆ ಫಾರ್ಮ್ 60ನ್ನು ಸಲ್ಲಿಸಿದರೆ ಸಾಕು.

► ಏನಿದು ಫಾರ್ಮ್ 60?

ಆದಾಯ ತೆರಿಗೆ ನಿಯಮಾವಳಿಗಳು-1962ರ ನಿಯಮ 114ಬಿಯಡಿ ನಿರ್ದಿಷ್ಟ ಪಡಿಸಿರುವ ವಹಿವಾಟನ್ನು ವ್ಯಕ್ತಿ ನಡೆಸುತ್ತಿದ್ದರೆ ಮತ್ತು ಪಾನ್ ಸಂಖ್ಯೆ ಹೊಂದಿಲ್ಲದಿದ್ದರೆ ಆತ/ಆಕೆ ಫಾರ್ಮ್ 60ನ್ನು ಸಲ್ಲಿಸಬೇಕಾಗುತ್ತದೆ.

► ಯಾವ ವಹಿವಾಟುಗಳಿಗೆ ಫಾರ್ಮ್ 60 ಸಲ್ಲಿಸಬೇಕು?

ನಿಯಮ 114 ಬಿ ಅಡಿ ನಿರ್ದಿಷ್ಟ ಪಡಿಸಲಾಗಿರುವ ಕೆಲವು ವಹಿವಾಟುಗಳು ಹೀಗಿವೆ:

ಬ್ಯಾಂಕ್ ಅಥವಾ ಡಿಮ್ಯಾಟ್ ಖಾತೆಯನ್ನು ತೆರೆಯುವುದು,ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳುವುದು,ವಾಹನಗಳ ಮಾರಾಟ ಅಥವಾ ಖರೀದಿ(ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ),ಬ್ಯಾಂಕ್ ಅಥವಾ ಅಂಚೆಕಚೇರಿಯಲ್ಲಿ ಒಂದೇ ದಿನದಲ್ಲಿ 50,000 ರೂ.ಗಳನ್ನು ಜಮೆ ಮಾಡುವುದು ಮತ್ತು 10 ಲ.ರೂ.ಗಿಂತ ಹೆಚ್ಚಿನ ಮೌಲ್ಯದ ಯಾವುದೇ ಸ್ಥಿರಾಸ್ತಿಯ ಮಾರಾಟ ಅಥವಾ ಖರೀದಿ ಇಂತಹ ವಹಿವಾಟುಗಳಲ್ಲಿ ಸೇರಿವೆ.

► ಫಾರ್ಮ್ 60ನ್ನು ಸಲ್ಲಿಸುವುದು ಹೇಗೆ?

ಫಾರ್ಮ್ 60ನ್ನು ಆಫ್‌ಲೈನ್ ಮತ್ತು ಆನ್‌ಲೈನ್ ಹೀಗೆ ಎರಡೂ ವಿಧಾನಗಳಲ್ಲಿ ಸಲ್ಲಿಸಬಹುದು. ಆಫ್‌ಲೈನ್ ವಿಧಾನದಲ್ಲಿ ಹಾಲಿ ಇರುವ ಪದ್ಧತಿಯಂತೆ ಮುದ್ರಿತ ಫಾ.60ನ್ನು ಪಡೆದುಕೊಂಡು ಅಗತ್ಯ ವಿವರಗಳನ್ನು ತುಂಬಿ ಅದನ್ನು ಖುದ್ದಾಗಿ ಸಲ್ಲಿಸಬಹುದು. ಆನ್‌ಲೈನ್ ವಿಧಾನದಲ್ಲಿ ಇತ್ತೀಚಿಗೆ ಅಧಿಸೂಚಿಲಾಗಿರುವ ಪದ್ಧತಿಯಂತೆ ವಿದ್ಯುನ್ಮಾನ ದೃಢೀಕರಣವನ್ನು ಬಳಸಿಕೊಂಡು ಇಲೆಕ್ಟ್ರಾನಿಕ್ ರೂಪದಲ್ಲಿ ಸಲ್ಲಿಸಬಹುದಾಗಿದೆ.

► ಏನಿದು ಇಲೆಕ್ಟ್ರಾನಿಕ್ ಪದ್ಧತಿ?

ಆದಾಯ ತೆರಿಗೆ ನಿಯಮಾವಳಿಗಳ ನಿಯಮ 114ಡಿಯಂತೆ ನಿಯಮ 114ಸಿಯಲ್ಲಿ ನಿರ್ದಿಷ್ಟ ಪಡಿಸಲಾಗಿರುವ ವ್ಯಕ್ತಿಗಳು ಫಾರ್ಮ್ 60ರಲ್ಲಿ ಘೋಷಣೆಗಳನ್ನು ಸ್ವೀಕರಿಸಲಾಗಿರುವ ವ್ಯಕ್ತಿಗಳ ವಿವರಗಳನ್ನು ಫಾರ್ಮ 61ರಲ್ಲಿ ಇಲೆಕ್ಟ್ರಾನಿಕ್ ಪದ್ಧತಿಯಲ್ಲಿ ಒದಗಿಸಿ ಹಿಂಬರಹ ಸಂಖ್ಯೆಯನ್ನು ಪಡೆದುಕೊಳ್ಳಬೇಕಾಗುತ್ತದೆ.

https://report.insight.gov.in/reporting-webapp/portal/homePage ನ್ನು ಬಳಸಿ ಇಲೆಕ್ಟ್ರಾನಿಕ್ ದೃಢೀಕರಣವನ್ನು ಸಾದ್ಯವಾಗಿಸಬಹುದಾಗಿದೆ. ನಿರ್ದಿಷ್ಟ ಆಧಾರ್ ದೃಢೀಕರಣ ಪದ್ಧತಿಗಳನ್ನು ಬಳಸುವ ಮೂಲಕವೂ ಇದನ್ನು ಸಾಧ್ಯವಾಗಿಸಬಹುದಾಗಿದೆ.

ಒಬ್ಬನೇ ವ್ಯಕ್ತಿಗೆ ಸಂಬಂಧಿಸಿದಂತೆ ವರ್ಷವೊಂದರಲ್ಲಿ ಹಲವಾರು ವಹಿವಾಟುಗಳಲ್ಲಿ ಫಾರ್ಮ್ 60ನ್ನು ಸಲ್ಲಿಸುವುದಿದ್ದರೆ ಅಂತಹ ವ್ಯಕ್ತಿ ಆರಂಭದಲ್ಲಿ ಮಾತ್ರ ಅದನ್ನು ಸಲ್ಲಿಸಿ ನಂತರದ ವಹಿವಾಟುಗಳಿಗೆ ಅದನ್ನು ಕಡ್ಡಾಯವಾಗಿ ಜೋಡಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News