ಬೆಂಗಳೂರು: ಉನ್ನತ ಶಿಕ್ಷಣದ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಧರಣಿ

Update: 2018-11-24 17:08 GMT

ಬೆಂಗಳೂರು, ನ.24: ಯುಜಿಸಿ ರದ್ದುಗೊಳಿಸುವ ಪ್ರಸ್ತಾಪದಿಂದ ಕೇಂದ್ರ ಸರಕಾರ ಹಿಂದಕ್ಕೆ ಸರಿಯಬೇಕು, ವಿವಿಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಶೀಘ್ರ ನೇಮಕಾತಿ ಮಾಡಬೇಕು ಹಾಗೂ ಉನ್ನತ ಶಿಕ್ಷಣದ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆ ವತಿಯಿಂದ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.

ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳಲ್ಲಿ ಖಾಲಿಯಿರುವ ಉಪನ್ಯಾಸಕರು ಸೇರಿದಂತೆ ಮತ್ತಿತರೆ ಹುದ್ದೆಗಳಿಗೆ ನೇಮಕಾತಿ ನಡೆಸಬೇಕು. ವಿವಿಗಳಲ್ಲಿ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಘೋಷಣೆಗಳನ್ನು ಕೂಗಿ ಸರಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಮುಖಂಡ ಸರೋವರ ಬೆಂಕಿಕೆರೆ, ಭಾರತದಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಶೇ.25.8 ರಷ್ಟು ದಾಖಲಾತಿ ಆಗುತ್ತಿದೆ. ಆದರೆ, ಗುಣಮಟ್ಟದ ಕೊರತೆಯಿಂದಾಗಿ, ಹಣಕಾಸಿನ ಹೊರೆ, ತಾರತಮ್ಯ/ಸ್ವಜನಪಕ್ಷಪಾತ, ಓದಿಗೆ ತಕ್ಕ ಉದ್ಯೋಗ ಸಿಗದಿರುವುದು ಸೇರಿದಂತೆ ಹಲವು ಕಾರಣಗಳಿಂದ ಅರ್ಧದಷ್ಟು ವಿದ್ಯಾರ್ಥಿಗಳು ಮಧ್ಯದಲ್ಲಿಯೇ ವಿದ್ಯಾಭ್ಯಾಸವನ್ನು ತ್ಯಜಿಸುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.

ಉಚಿತವಾಗಿ ಗುಣಮಟ್ಟದ ಉನ್ನತ ಶಿಕ್ಷಣವನ್ನು ಎಲ್ಲರಿಗೂ ಒದಗಿಸಬೇಕಾದ್ದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಕರ್ತವ್ಯವಾಗಿದೆ. ಆದರೆ, ಸರಕಾರಗಳು ತಮ್ಮ ಜವಾಬ್ದಾರಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಯುಜಿಸಿಯಂತಹ ಸ್ವಾಯತ್ತ ಸಂಸ್ಥೆಗಳನ್ನು ಕಿತ್ತುಹಾಕುವುದು, ಉನ್ನತ ಶಿಕ್ಷಣಕ್ಕೆ ನೀಡಬೇಕಾದ ಬಜೆಟ್‌ನಲ್ಲಿ ಹಣ ಕಡಿತ ಮಾಡುವುದು, ವಿವಿಗಳಿಗೆ ಸಿಗಬೇಕಾದ ಅನುದಾನ ನಿಲ್ಲಿಸುವುದು, ವಿದ್ಯಾರ್ಥಿ ಸಂಘಗಳನ್ನು ನಿಷೇಧಿಸುವುದು, ಅಧ್ಯಾಪಕರನ್ನು ಕಡೆಗಣಿಸುವುದನ್ನು ಮಾಡಲಾಗುತ್ತಿದೆ. ದೇಶದಲ್ಲಿ ಸರ್ವಾಧಿಕಾರದ ಆಡಳಿತ ನಡೆಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ದುರ್ಬಲಗೊಳಿಸುವುದನ್ನು ಮಾಡಲಾಗುತ್ತಿದೆ. ಇದೇ ವೇಳೆ ಖಾಸಗಿ ಅಥವಾ ವಿದೇಶಿಗಳಿಗೆ ಅಪಾರವಾದ ಅವಕಾಶ ಮತ್ತು ಅನುದಾನವನ್ನು ಒದಗಿಸುವ ಮೂಲಕ ಉನ್ನತ ಶಿಕ್ಷಣವನ್ನು ವ್ಯಾಪಾರ ಮಾಡುವುದಕ್ಕೆ ದಲ್ಲಾಳಿಯಾಗಿ ಕೆಲಸ ಮಾಡುತ್ತಿದೆ. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣದ ಪುನರ್‌ನಿರ್ಮಾಣವಾಗಬೇಕು. ಅದಕ್ಕಾಗಿ ಸರಕಾರಗಳು ಸೂಕ್ತ ನೀತಿಗಳನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News