ಬೆಂಬಲ ಬೆಲೆ ಯೋಜನೆಯಡಿ ಡಿ.16ರಿಂದ ಭತ್ತ ಖರೀದಿ: ಸಚಿವ ಬಂಡೆಪ್ಪ ಕಾಶೆಂಪೂರ್

Update: 2018-11-24 17:11 GMT

ಬೆಂಗಳೂರು, ನ. 24: ಬೆಂಬಲ ಬೆಲೆ ಯೋಜನೆಯಡಿ ಡಿ.16ರಿಂದ ಭತ್ತ ಖರೀದಿ ಆರಂಭಿಸಲಿದ್ದು, ಪ್ರತಿ ಕ್ವಿಂಟಾಲ್‌ಗೆ 1,750 ರೂ.ಗಳನ್ನು ನೀಡಲಿದ್ದು, ನೇರವಾಗಿ ಅಕ್ಕಿ ಗಿರಣಿಗಳ ಬಳಿಯೇ ಖರೀದಿಸಲಾಗುವುದು ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಉಪ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ 10ಲಕ್ಷ ಹೆಕ್ಟೆರ್‌ನಲ್ಲಿ ಭತ್ತ ಬಿತ್ತನೆ ಮಾಡಲಾಗಿದ್ದು, 45ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಗುರಿ ಇದೆ. ಕೇಂದ್ರದಿಂದ 2 ಲಕ್ಷ ಮೆಟ್ರಿಕ್ ಟನ್ ಖರೀದಿಗೆ ಅನುಮತಿ ಸಿಕ್ಕಿದೆ. ಹೀಗಾಗಿ ಖರೀದಿ ಕೇಂದ್ರ ಆರಂಭಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಕೇಂದ್ರದ ಮಾರ್ಗಸೂಚಿಯನ್ವಯ ಜನವರಿಯಿಂದ ಭತ್ತ ಖರೀದಿಸಬೇಕು. ಆದರೆ, ರಾಜ್ಯ ಸರಕಾರ ಡಿ.5ರಿಂದ 15ರ ವರೆಗೆ ಭತ್ತ ಬೆಳೆಯುವ ರೈತರಿಗೆ ನೋಂದಣಿಗೆ ಅವಕಾಶ ಕಲ್ಪಿಸಿದ್ದು, ಡಿ.16ರಿಂದ ಭತ್ತ ಖರೀದಿಸಲಾಗುವುದು. ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಕ್ವಿಂಟಾಲ್‌ಗೆ 1,300 ರೂ.ನಿಂದ 1,400 ರೂ.ಗಳಿದ್ದು, ಬೆಂಬಲ ಬೆಲೆ ಯೋಜನೆಯಡಿ 1,750 ರೂ. ಪ್ರತಿ ಕ್ವಿಂಟಾಲ್‌ಗೆ ನೀಡಲಾಗುವುದು ಎಂದರು.

ಭತ್ತ ಖರೀದಿಸಿ ದಾಸ್ತಾನು ಮಾಡಿ ಅದನ್ನು ವಿಲೇವಾರಿ ಮಾಡಲು ಈ ಹಿಂದೆ ಒಂದು ವರ್ಷ ಬೇಕಾಗುತ್ತಿತ್ತು. ಆದರೆ, ಈ ಬಾರಿ ಅಕ್ಕಿ ಗಿರಣಿಗಳ ಬಳಿಯೇ ಭತ್ತ ಖರೀದಿಸುವ ಯೋಜನೆ ರೂಪಿಸಿದ್ದು, ಅಕ್ಕಿ ಗಿರಣಿಗಳಿಲ್ಲದ ಕಡೆಗಳಲ್ಲಿ ಸರಕಾರ ಖರೀದಿಸಿ, ದಾಸ್ತಾನು ಮಾಡಿ ಅಕ್ಕಿ ಗಿರಣಿಗಳಿಗೆ ಕಳುಹಿಸಲಾಗುವುದು ಎಂದರು.

ಕೇಂದ್ರಕ್ಕೆ ಪ್ರಸ್ತಾವ: ಬೆಂಬಲ ಬೆಲೆ ಯೋಜನೆಯಡಿ ಈಗಾಗಲೇ 28 ಸಾವಿರ ಮೆಟ್ರಿಕ್ ಟನ್ ಹೆಸರುಕಾಳು ಖರೀದಿಸಲಾಗಿದೆ. ರೈತರ ಬಳಿ ಇನ್ನೂ ಹೆಸರುಕಾಳು ದಾಸ್ತಾನಿದ್ದು, ಅದನ್ನು ಖರೀದಿಸಲು ಕೋರಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.

ಜತೆಗೆ ತೊಗರಿ ಖರೀದಿಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, 15 ಲಕ್ಷ ಹೆಕ್ಟೆರ್‌ನಲ್ಲಿ ಬಿತ್ತನೆ ಮಾಡಿದ್ದು 11.34ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ತೊಗರಿಗೆ 4,300ರೂ.ಗಳಿದ್ದು, ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಾಲ್ ತೊಗರಿಗೆ 5,575 ರೂ.ಗಳನ್ನು ನೀಡಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

‘ಉಳ್ಳಾಗಡ್ಡಿ(ಈರುಳ್ಳಿ) ದರ ಕುಸಿತವಾಗಿರುವುದರಿಂದ ಅದನ್ನು ಬೆಂಬಲ ಯೋಜನೆಯಡಿ ಖರೀದಿ ಅಥವಾ ಈರುಳ್ಳಿ ಬೆಳೆಗಾರರಿಗೆ ಪರಿಹಾರ ನೀಡುವ ಬಗ್ಗೆ ಸರಕಾರ ಚಿಂತನೆ ನಡೆಸಿದ್ದು, ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ’

-ಬಂಡೆಪ್ಪ ಕಾಶೆಂಪೂರ್, ಸಹಕಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News