ಆಸ್ಪತ್ರೆಗಳ ನಿರ್ಮಾಣಕ್ಕೆ ಕಾರ್ಪೋರೇಟ್ ಕಂಪೆನಿಗಳು ಕೈಜೋಡಿಸಲಿ: ಉಪಮುಖ್ಯಮಂತ್ರಿ ಪರಮೇಶ್ವರ್

Update: 2018-11-24 17:17 GMT

ಬೆಂಗಳೂರು, ನ. 24: ರಾಜ್ಯದಲ್ಲಿ ಆರೋಗ್ಯ ಸೇವೆ ನೀಡಲು ಹೆಚ್ಚು ಆಸ್ಪತ್ರೆಗಳ ನಿರ್ಮಾಣಕ್ಕೆ ಕಾರ್ಪೋರೇಟ್ ಕಂಪೆನಿಗಳು ಕೈಜೋಡಿಸಿದರೆ, ಕರ್ನಾಟಕ ಆರೋಗ್ಯ ಪ್ರವಾಸೋದ್ಯಮ ಕೇಂದ್ರ ಆಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಶನಿವಾರ ಇಲ್ಲಿನ ಎಚ್‌ಕೆಪಿ ರಸ್ತೆಯಲ್ಲಿರುವ ಚರ್ಚ್ ಆಫ್ ಸೌತ್ ಇಂಡಿಯಾ ಆಸ್ಪತ್ರೆಯ 125ನೆ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕ್ರೈಸ್ತ ಮಿಷನರಿಗಳು ವಿಶ್ವಾದ್ಯಂತ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿವೆ. ವಿಶ್ವದ ಯಾವುದೇ ಮೂಲೆಗೆ ತೆರಳಿದರೂ ಮಿಷನರಿಗಳ ಶಿಕ್ಷಣ ಸಂಸ್ಥೆ ನೋಡಬಹುದು ಎಂದು ಶ್ಲಾಘಿಸಿದರು.

ಹಲವು ವರ್ಷಗಳ ಹಿಂದಿನಿಂದಲೂ ಬಡವರ ಸೇವೆ ಮಾಡುತ್ತಿರುವ ಕ್ರೈಸ್ತ ಮಿಷನರಿಗಳು, ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಿವೆ. ಕರ್ನಾಟಕ ರಾಜ್ಯದಲ್ಲಿಯೂ ಸಾಕಷ್ಟು ಶಿಕ್ಷಣ ಸಂಸ್ಥೆ, ಆಸ್ಪತ್ರೆಗಳನ್ನು ತೆರೆದು ಸೇವೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಉತ್ತಮ ಆರೋಗ್ಯ ಸೇವೆ ನೀಡಲಾಗುತ್ತಿದೆ. ದೇಶದಲ್ಲಿಯೇ ಕರ್ನಾಟಕ ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಕಾರ್ಪೋರೇಟ್ ಕಂಪೆನಿಗಳು ಸಿಎಸ್‌ಆರ್ ನಿಧಿಯಲ್ಲಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡುತ್ತಿವೆ. ಈ ಪ್ರಮಾಣ ಹೆಚ್ಚಾದರೆ ಕರ್ನಾಟಕ ಹೆಲ್ತ್‌ಹಬ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪರಮೇಶ್ವರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News