ಅಲೆಮಾರಿ ರಾವೋಳ್ಳು ನಾಗಪ್ಪನ ಆತ್ಮಕಥನ

Update: 2018-11-25 05:21 GMT

  ಡಾ.ಆರ್.ಬಿ. ಕುಮಾರ್

ಕರ್ನಾಟಕದಲ್ಲಿ ಲಕ್ಷಗಳ ಸಂಖ್ಯೆಯಲ್ಲಿರುವ ಹತ್ತಾರು ಅಲೆಮಾರಿ ಸಮುದಾಯಗಳ ಬದುಕಿನ ಸ್ಥಿತಿಗತಿಗಳ ಕುರಿತಂತೆ ಬೇರೆಯವರಿಗೆ ಅತ್ಯಲ್ಪ ತಿಳಿದಿದೆ.

ದೈವಸ್ತುತಿ, ನಾಟಿಔಷಧ, ಶಿಕಾರಿ, ಸಣ್ಣಪುಟ್ಟ ವ್ಯಾಪಾರ, ಕರಕುಶಲ ಕಲೆ, ಹಾಡು-ನೃತ್ಯ ಇವರ ಬದುಕಿನ ಕ್ರಮದಲ್ಲಿದೆ. ಈ ಭರತ ಖಂಡದ ಉದ್ದಗಲಕ್ಕೂ ಓಡಾಡುತ್ತಾ ಗಳಿಸಿರುವ ಜೀವನಾನುಭವ, ಅದರಿಂದಲೇ ಬೆಳೆಸಿಕೊಳ್ಳಬಹುದಾದ ಲೋಕಜ್ಞಾನ ಹಾಗೂ ಸ್ಥಿರವಾದ ಒಂದು ನೆಲೆ ಇರದ, ಹೆಚ್ಚಿ ನವರಿಗೆ ಆಸ್ತಿಪಾಸ್ತಿಗಳಿರದ ಅತಂತ್ರ ಮುಗ್ಧಸ್ಥಿತಿಯ ಒಟ್ಟಾರೆ ಫಲಿತಾಂಶವೇ ಈ ಅಲೆಮಾರಿ ಸಮುದಾಯ.

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಅಲೆಮಾರಿ ಸಮುದಾಯಗಳ ಬಗ್ಗೆ ಹಲವು ಅಧ್ಯಯನಗಳಾಗಿವೆ. ಸಾಮಾಜಿಕ ಜಾಗೃತಿ ಮೂಡುತ್ತಿದೆ. ಕೆಲ ಸಂಘಟನೆಗಳು ರೂಪುತಳೆಯುತ್ತಿವೆ.

ಅಲೆಮಾರಿ ಸಮುದಾಯಗಳ ಬಗ್ಗೆ ವ್ಯವಸ್ಥಿತವಾದ ಒಂದು ಶಿಸ್ತುಬದ್ಧ ಅಧ್ಯಯನಗಳಾಗುವುದು ಅಕಡಮಿಕ್ ಚೌಕಟ್ಟಿನ ವಿಚಾರ. ಆದರೆ ಸ್ವತಃ ಅಲೆಮಾರಿ ಅತಂತ್ರ ಬದುಕನ್ನು ಬದುಕಿದವರೇ ತಮ್ಮ ಕತೆ ಹೇಳಿಕೊಳ್ಳುವುದು ಮಹತ್ವದ ಸಂಗತಿಯಾಗುತ್ತದೆ.

ವೌನದೊಳಗಿನ ಮಾತು ಕೃತಿಯು ಅಲೆಮಾರಿ ರಾವೋಳ್ಳು ನಾಗಪ್ಪನ ಆತ್ಮಕಥನವಾಗಿದೆ. ಇಲ್ಲಿ ಕಾಣಿಸುವ ರಾವೋಳ್ಳು ಎಂಬುದು ನಾಗಪ್ಪನವರ ಬೆಡಗಿನ ಹೆಸರಾಗಿದೆ. ಬಳ್ಳಾರಿ ಸೀಮೆಯ ಕಂಪ್ಲಿ ಸುತ್ತಮುತ್ತಲಿನ ಸಾಮಾಜಿಕ ಜೀವನವನ್ನು ತಮ್ಮ ಅತಂತ್ರ ಬದುಕಿನೊಂದಿಗೇ ನಿರೂಪಿಸುವ ನಾಗಪ್ಪ ತಮ್ಮ ಸಮುದಾಯದ ಬಡತನ, ಕೌಟುಂಬಿಕ ಕ್ಷೋಭೆಗಳು, ಗಂಡು-ಹೆಣ್ಣಿನ ಸಂಬಂಧಗಳು, ನಾಟಿ ಔಷಧದ ಪರಿಣಿತಿ ಮುಂತಾದ ವಿಚಾರಗಳನ್ನೆಲ್ಲಾ ಹೃದಯಂಗಮವಾಗಿ ಹೇಳುತ್ತಾ ಹೋಗುತ್ತಾರೆ. ದಮನಿತರಲ್ಲೇ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿ ಹಲವಾರು ಶತಮಾನಗಳಿಂದಲೂ ಜೀವನ ಸಾಗಿಸುತ್ತಾ ಬಂದಿರುವ ಅಲೆಮಾರಿಗಳು ಕರ್ನಾಟಕದ ಜಾತಿವ್ಯವಸ್ಥೆ, ಪಾಳೇಗಾರಿಕೆ, ಬ್ರಿಟಿಷರ ಆಳ್ವಿಕೆಯಲ್ಲಿ ನಲುಗಿ ಹೋಗಿದ್ದಲ್ಲದೆ ಈಗಿನ ಸ್ವತಂತ್ರ ಭಾರತದಲ್ಲೂ ಬದಲಾಗದ ಪರಿಸ್ಥಿತಿಗಳಲ್ಲೇ ಸಾಗುತ್ತಿರುವುದು ವೌನದೊಳಗಿನ ಮಾತು ಕೃತಿಯಲ್ಲಿದೆ.

ಹಲವು ಶತಮಾನಗಳ ಸಂಚಯಿತ ಜೀವನಾನುಭವಗಳ ಮೊತ್ತವಾಗಿರುವ ಅಲೆಮಾರಿಗಳ ಬದುಕಿನ ವಿವರಗಳು ಸಮಾಜ ವಿಜ್ಞಾನಿಗಳಿಗೊಂದು ನಿಕ್ಷೇಪದಂತಿವೆ. ಯಾವುದೇ ಅಲೆಮಾರಿ ಸಮುದಾಯದವರ ಭಾಷಾಕೋಶವು ಹಲವು ನೆರೆಹೊರೆ ಭಾಷೆಗಳ ಸಂಯೋಜನೆಯ ಪರಿಮಳ ಬೀರುತ್ತಿರುತ್ತವೆ. ಜೊತೆಗೆ ಭಾಷೆಗಳ ವಿಕಾಸದ ವಿವಿಧ ಹಂತಗಳನ್ನು ಮತ್ತದರ ಅದೀಮತೆಯನ್ನು ಪ್ರತಿಫಲಿಸುತ್ತಿರುತ್ತವೆ. ಈ ಕೃತಿಯಲ್ಲೂ ಅಂತದ್ದರ ಛಾಯೆಗಳಿವೆ. ಬನ್ನಿದೊಡ್ಡಿ (ರಾಸುಗಳನ್ನು ಪೌಂಡ್‌ಗೆಹೊಡೆದು ಕೂಡುವುದು), ನೀಚು (ಮಾಂಸ), ಮಟ್ಟು (ಏಡಿ ಅಥವಾ ಜಲಚರ), ಬಾನ (ಊಟ) ಮುಂತಾದ ಕುತೂಹಲ ಕೆರಳಿಸುವ ಪದ ಪ್ರಯೋಗಗಳು ನಾಗಪ್ಪನವರ ನಿರೂಪಣೆಯಲ್ಲಿವೆ.

ಇದೆಲ್ಲವನ್ನು ದಾಟಿ ಹೇಳಬೇಕೆಂದರೆ ಕರ್ನಾಟಕದಲ್ಲಿ ಅಲೆಮಾರಿ ಸಮುದಾಯಗಳ ಅಸಂಖ್ಯ ಜನ ಈಗಲೂ ಮುಖ್ಯವಾಹಿನಿಯೊಳಗೆ ಪ್ರವೇಶಿಸಿ ಘನತೆ ಮತ್ತು ಆತ್ಮಗೌರವದ, ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಅಸಾಧ್ಯವಾದ ಪರಿಸ್ಥಿತಿ ಮುಂದುವರಿದಿರುವುದನ್ನು ನಾಗಪ್ಪನವರ ಕತೆಯು ಹೇಳುತ್ತಿದೆ. ನಾಗಪ್ಪ ತನ್ನ ಸಮುದಾಯದವರ ಬದುಕಿನ ದಾರುಣ ಚಿತ್ರಣವನ್ನು ವಿಷಾದ, ತಮಾಷೆ, ಕುತೂಹಲ ಹಾಗೂ ಆಶಾವಾದದೊಂದಿಗೆ ನಿರುದ್ವೇಗದಿಂದ ನಿರೂಪಿಸುವುದು ಮನಕದಡುವಂತಿದೆ. ನಾಗಪ್ಪನವರ ಬದುಕಿನ ಕತೆಯನ್ನು ದಾಖಲಿಸಿರುವ ಡಾ. ಆರ್.ಬಿ. ಕುಮಾರ್‌ರವರ ಪ್ರಯತ್ನ ಶ್ಲಾಘನೀಯವಾಗಿದೆ.

ಇಂತಹ ಬರಹಗಳು ಇನ್ನಷ್ಟು ಬರಲಿ, ಆ ಮೂಲಕ ನಮ್ಮ ಪ್ರಜಾಪ್ರಭುತ್ವದ ನಾಗರಿಕ ಸಮಾಜದ ಸಾಕ್ಷಿಪ್ರಜ್ಞೆಯನ್ನು ಎಚ್ಚರಿಸಲಿ. ಸರಕಾರದ ಹೊಣೆಗಾರಿಕೆಯನ್ನು ನೆನಪಿಸುವುದಕ್ಕೆ ದಾರಿ ಮಾಡಿಕೊಡಲಿ ಎಂದು ಆಶಿಸಬೇಕಿದೆ.

ಮೌನದೊಳಗಿನ ಮಾತು ಅಂತಹದ್ದೊಂದು ವಿಶಿಷ್ಟ ಅನುಭವ ನೀಡುವ, ಓದುಗರ ಭಾವಕೋಶದಲ್ಲಿ ಉಳಿಯುವ ಪುಸ್ತಕವಾಗಿದೆ.

ಪ್ರಕಾಶಕರು: ಗಂಗೋತ್ರಿ ಪ್ರಕಾಶನ

ರಾಮಸಾಗರ, ಬಳ್ಳಾರಿ ಜಿಲ್ಲೆ, ಬೆಲೆ ರೂ. 100/-

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News