×
Ad

ಅಂಬರೀಷ್ ಒಡನಾಟ ನೆನೆದ ಗಣ್ಯಾತಿ ಗಣ್ಯರು

Update: 2018-11-25 18:20 IST

ಬೆಂಗಳೂರು, ನ.25: ಕೇಂದ್ರದ ಮಾಜಿ ಸಚಿವ, ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ಅಂಬರೀಷ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಚಿತ್ರರಂಗದ ಗಣ್ಯರು, ರಾಜಕಾರಣಿಗಳು, ಅಭಿಮಾನಿಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ಬೆಳಗ್ಗೆ 7ರಿಂದ ಮಧ್ಯಾಹ್ನ 3.45ರ ವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ, ನಟರಾದ ರಜನಿಕಾಂತ್, ಚಿರಂಜೀವಿ, ಶಿವರಾಜ್‌ಕುಮಾರ್, ಸುದೀಪ್, ಪುನೀತ್‌ ರಾಜ್‌ಕುಮಾರ್ ಇನ್ನಿತರ ಗಣ್ಯ ವ್ಯಕ್ತಿಗಳು ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿದ್ದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಅಂಬರೀಷ್ ಅವರ ನಿಧನ ಇಡೀ ಕನ್ನಡ ಚಲನಚಿತ್ರ ರಂಗ, ರಾಜಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಅಭಿಮಾನಿಗಳು ಅಂಬರೀಷ್ ಅವರ ನಿಧನದ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಉದ್ವೇಗಗೊಂಡು ಅನಾಹುತಗಳನ್ನು ಮಾಡಿಕೊಳ್ಳಬಾರದು. ಅವರ ಸ್ಮಾರಕವನ್ನು ಕಂಠೀರವ ಸ್ಟುಡಿಯೋದಲ್ಲಿಯೇ ನಿರ್ಮಿಸಲು ಚಿಂತನೆ ನಡೆಯುತ್ತಿದೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಅಂಬರೀಷ್ ಅವರು ಒಳ್ಳೆಯ ಸ್ನೇಹ ಜೀವಿಯಾಗಿದ್ದರು. ನಾನು ಸಿಎಂ ಆಗಿದ್ದಾಗ ಅವರು ತಮ್ಮ ಸಂಪುಟದಲ್ಲಿ ಸಚಿವರಾಗಿ ಉತ್ತಮ ಕೆಲಸವನ್ನು ಮಾಡಿದ್ದರು. ಡಾ.ರಾಜ್‌ ಕುಮಾರ್, ವಿಷ್ಣುವರ್ಧನ ಅವರ ಸಾಲಿನಲ್ಲಿ ಅಂಬರೀಷ್ ಅವರೂ ನಿಲ್ಲುತ್ತಾರೆ ಎಂದು ಹೇಳಿದರು.

ನಟ ಸುದೀಪ್ ಮಾತನಾಡಿ, ಅಂಬರೀಷ್ ಅವರು ಒಬ್ಬರು ಸೂಪರ್ ಸ್ಟಾರ್ ಎನ್ನುವುದಕ್ಕಿಂತ ಒಳ್ಳೆಯ ವ್ಯಕ್ತಿ. ಮನೆಗೆ ಯಾರೇ ಹೋದರೂ ನಗುನಗುತ್ತಾ ಮಾತನಾಡುತ್ತಿದ್ದರು. ಎಲ್ಲರನ್ನೂ ಸರಿ ಸಮಾನರಾಗಿ ಕಾಣುತ್ತಿದ್ದರು. ಅವರು ಇಲ್ಲ ಎಂದು ನೆನಪಿಸಿಕೊಂಡರೆ ನಮಗೆ ಬಹಳ ನೋವಾಗುತ್ತಿದೆ. ಅವರಿಲ್ಲ ಎಂದು ನಂಬಲು ಆಗುತ್ತಲೇ ಇಲ್ಲ. ನಾನು ಪ್ರತಿಯೊಬ್ಬ ಅಭಿಮಾನಿಗೂ ಕೇಳಿಕೊಳ್ಳುವುದಿಷ್ಟೇ ಅಂಬರೀಷ್ ಎಲ್ಲೂ ಹೋಗಿಲ್ಲ. ಅವರು ಇಲ್ಲೇ ಇದ್ದಾರೆ ಎಂದು ನೆನಪಿಸಿಕೊಂಡು ಜೀವಿಸಬೇಕು ಎಂದು ಮನವಿ ಮಾಡಿದರು.

ಹಿರಿಯ ನಟಿ ಜಯಂತಿ ಮಾತನಾಡಿ, ಅಂಬರೀಷ್ ಅವರು ಉತ್ತಮ ವ್ಯಕ್ತಿಯಾಗಿದ್ದರು. ಎಲ್ಲರಿಗೂ ಗೌರವವನ್ನು ನೀಡುತ್ತಿದ್ದರು. ಅವರ ಸಾವು ಇಡೀ ಚಿತ್ರರಂಗಕ್ಕೆ ನಷ್ಟವುಂಟಾಗಿದೆ ಎಂದು ಹೇಳಿದರು. ಶಿವರಾಜ್‌ಕುಮಾರ್ ಮಾತನಾಡಿ, ಅಪ್ಪಾಜಿ, ವಿಷ್ಣುವರ್ಧನ್ ಅವರು ನಮಗೆಲ್ಲಾ ಹೇಗೋ ಅಂಬಿ ಮಾಮ ಕೂಡಾ ನಮ್ಮ ಜೊತೆ ಹಾಗೇ ಇದ್ದರು. ಅವರು ನಮ್ಮನ್ನು ಬಿಟ್ಟು ಹೋಗಿರಬಹುದು. ಆದರೆ ಅವರ ಆತ್ಮ ನಮ್ಮಾಂದಿಗೆ ಸದಾ ಇರುತ್ತೆ. ನಾವು ಅವರ ಕುಟುಂಬದೊಂದಿಗೆ ಯಾವಾಗಲೂ ಇರುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನೋವಿನಿಂದ ಹೇಳಿದ್ದಾರೆ.

ಪುನೀತ್‌ರಾಜ್‌ ಕುಮಾರ್ ಮಾತನಾಡಿ, ಅಂಬರೀಷ್ ಅವರಿಗೆ ಅವರೇ ಸಾಟಿ. ಅವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಅವರೊಂದಿಗೆ ದೊಡ್ಮನೆ ಹುಡುಗ ಸಿನಿಮಾದಲ್ಲಿ ನಟಿಸಿದ್ದೇ ನನ್ನ ಪುಣ್ಯ. ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ನಟಿಸಿದ ಮೇಲೆ ಇದೇ ನನ್ನ ಕೊನೆಯ ಸಿನಿಮಾ ಎಂದು ಅವರು ಹೇಳಿದ್ದರು. ಆಗ ನೀವು ಇನ್ನೂ ಹೆಚ್ಚು ಹೆಚ್ಚು ಸಿನಿಮಾದಲ್ಲಿ ನಟಿಸಬೇಕು ಎಂದು ನಾನು ಕೇಳಿಕೊಂಡಿದ್ದೆ ಎಂದು ಅಂಬರೀಸ್ ಅವರನ್ನು ನೆನಪಿಸಿಕೊಂಡು ಪುನೀತ್ ಭಾವುಕರಾದರು.

ಅಂಬಿ ಬಗ್ಗೆ ಮಾತನಾಡಿರುವ ಹಿರಿಯ ನಟ ಶ್ರೀನಾಥ್, ಶುಭಮಂಗಳ ಸಿನಿಮಾದಲ್ಲಿ ಅಂಬರೀಷ್ ಅವರೊಂದಿಗಿನ ನಟನೆಯನ್ನು ನೆನಪಿಸಿಕೊಂಡರು. ಚಿತ್ರದಲ್ಲಿ ಮೂಕನ ಪಾತ್ರ ಮಾಡಿ ಅದ್ಭುತ ನಟನೆ ಮಾಡಿದ್ದರು. ಅವರು ಉತ್ತಮ ನಟ ಎಂಬುದಕ್ಕಿಂತ ಉತ್ತಮ ಮನುಷ್ಯ. ಅವರು ಮಾನವೀಯತೆಯನ್ನು ಮೈಗೂಡಿಸಿದ್ದರು ಎಂದು ಹೇಳಿದ್ದಾರೆ.

ಪ್ರಿಯಾಂಕ್ ಉಪೇಂದ್ರ ಮಾತನಾಡಿ, ಅಂಬರೀಷ್ ಸರ್ ಎಲ್ಲರಿಗೂ ಸ್ಫೂರ್ತಿ. ಇಂದು ಅವರು ನಮ್ಮೊಂದಿಗೆ ಇರದಿದ್ದರೂ ಅವರ ನೆನಪು ಸದಾ ನಮ್ಮೊಂದಿಗೆ ಇರುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದ್ದಾರೆ.

ನಟರಾದ ದೇವರಾಜ್, ಪ್ರಕಾಶ್ ರೈ, ನಿಖಿಲ್‌ ಗೌಡ, ಗಣೇಶ್, ಅರ್ಜುನ್ ಸರ್ಜಾ, ದ್ರುವ ಸರ್ಜಾ, ಮಾಲಾಶ್ರೀ, ಮೇಘನಾರಾಜ್, ಭಾವನ, ರಚಿತಾರಾಮ್, ಮುಖ್ಯಮಂತ್ರಿ ಚಂದ್ರು, ಅಮೂಲ್ಯ, ರಾಜಕೀಯ ಮುಖಂಡರಾದ ವಿಧಾನಸಭೆ ಸಭಾಪತಿ ರಮೇಶ್‌ ಕುಮಾರ್, ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಎಂ. ಆರ್.ಸೀತಾರಾಮ್, ಎಂ.ಬಿ.ಪಾಟೀಲ್, ಜನಾರ್ಧನರೆಡ್ಡಿ, ಎಚ್.ಕೆ. ಪಾಟೀಲ್, ಶಾಸಕ ಮುನಿರತ್ನ, ಶಾಸಕಿ ಅನಿತಾ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಶರವಣ, ವೀರಣ್ಣ ಮತ್ತಿಕಟ್ಟಿ, ಎಂ.ವಿ.ರಾಜಶೇಖರನ್, ತೆಲುಗು ನಟ ಮೋಹನ್‌ ಬಾಬು ಇನ್ನಿತರ ಗಣ್ಯ ಗಣ್ಯವ್ಯಕ್ತಿಗಳು ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ಅಂಬರೀಷ್ ಅವರ ಅಂತಿಮ ದರ್ಶನ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News