ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಅಂತ್ಯಕ್ರಿಯೆ
ಬೆಂಗಳೂರು, ನ.25: ಮಾಜಿ ಸಚಿವ, ಹಿರಿಯ ಚಲನಚಿತ್ರ ನಟ ಅಂಬರೀಷ್‌ರವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಸೋಮವಾರ(ನ.26) ಕಂಠೀರವ ಸ್ಟುಡಿಯೋದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಜರುಗಲಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನಡೆಯುವ ಸ್ಥಳದ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿರುವ ಪಾರ್ಥಿವ ಶರೀರವನ್ನು ಹೆಲಿಕಾಪ್ಟರ್ ಮುಖಾಂತರ ಬೆಳಗ್ಗೆ 7.30ಕ್ಕೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತರಲಾಗುವುದು. ಅಲ್ಲಿಂದ ಮೆರವಣಿಗೆಯ ಮೂಲಕ ಕಂಠೀರವ ಸ್ಟುಡಿಯೋಗೆ ಸಾಗಿಸಿ, ಮಧ್ಯಾಹ್ನ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದರು.
ಪೊಲೀಸ್ ಬಂದೋಬಸ್ತ್: ಅಂಬರೀಷ್ ಪಾರ್ಥಿವ ಶರೀರದ ಅಂತ್ಯ ಕ್ರಿಯೆಯ ವೇಳೆ ಯಾವುದೆ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪೊಲೀಸ್ ಇಲಾಖೆಯ ಮುಖ್ಯಸ್ಥರಿಗೆ ತಿಳಿಸಲಾಗಿದೆ. ಈ ಸಂಬಂಧ ಈಗಾಗಲೆ ನಗರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು
ಸರಕಾರದಿಂದ ಸ್ಮಾರಕ: ನಟ ಅಂಬರೀಷ್ ನಾಡಿನ ಜನತೆಯ ಮನಸಿನಲ್ಲಿ ಸದಾ ನೆಲೆಸಿರುತ್ತಾರೆ. ಹಾಗೂ ಸಾರ್ವಜನಿಕರು ಅವರನ್ನು ಸದಾ ನೆನಪು ಮಾಡಿಕೊಳ್ಳುವ ನಿಟ್ಟಿನಲ್ಲಿ ಅವರ ಅಂತ್ಯಕ್ರಿಯೆ ನಡೆಯುವ ಸ್ಥಳದಲ್ಲಿ ಸರಕಾರದ ವತಿಯಿಂದ ಸ್ಮಾರಕ ನಿರ್ಮಿಸಿ ಗೌರವಿಸಲಾಗುವುದು ಎಂದು ಅವರು ಹೇಳಿದರು.
ಅಂತ್ಯಕ್ರಿಯೆಯಲ್ಲಿ ಗಣ್ಯರು:
ಮಾಜಿ ಸಚಿವ ಅಂಬರೀಷ್‌ರವರ ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಮಂದಿ ಜನಪ್ರತಿನಿಧಿಗಳು ಭಾಗವಿಸಲಿದ್ದಾರೆ. ಇನ್ನು ಸಿನೆಮಾ ರಂಗದಿಂದ ಬಹುಭಾಷಾ ನಟ ರಜನಿಕಾಂತ್, ತೆಲುಗಿನ ಟನ ಚಿರಂಜೀವಿ, ಸ್ಯಾಂಡಲ್ ವುಡ್‌ನ ಶಿವರಾಜ್ ಕುಮಾರ್, ಜೈಜಗದೀಶ್, ದ್ವಾರಕೀಶ್, ಶಿವರಾಜ್ ಕುಮಾರ್, ಸುದೀಪ್, ದರ್ಶನ್ ಸೇರಿದಂತೆ ನಿರ್ದೇಶಕರು, ನಿರ್ಮಾಪಕರು ಭಾಗವಹಿಸಲಿದ್ದಾರೆ.
‘ನಟ ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೂರು ದಿನ ಶೋಕಾಚರಣೆಗೆ ಆದೇಶಿಸಲಾಗಿದೆ. ಮೃತರ ಗೌರವಾರ್ಥ ನಿಯಮಿತವಾಗಿ ರಾಷ್ಟ್ರಧ್ವಜ ಹಾರಿಸಲ್ಪಡುವ ಸರಕಾರ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲಾಗುತ್ತದೆ’