ಜಾಹೀರಾತು ನೀತಿಯನ್ನು ಶೀಘ್ರ ಅಂತಿಮಗೊಳಿಸಿ: ಬಿಬಿಎಂಪಿಗೆ ಹೈಕೋರ್ಟ್‌ ಸೂಚನೆ

Update: 2018-11-25 15:59 GMT

ಬೆಂಗಳೂರು, ನ.25: ಬಿಬಿಎಂಪಿ ರೂಪಿಸಿರುವ ಹೊಸ ಜಾಹೀರಾತು ನೀತಿಯನ್ನು ಆದಷ್ಟು ಶೀಘ್ರ ಅಂತಿಮಗೊಳಿಸಿ ಎಂದು ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ನೀಡಿದೆ.

ನಗರದಲ್ಲಿನ ಅನಧಿಕೃತ, ಅನಪೇಕ್ಷಿತ ಮತ್ತು ಕಾನೂನು ಬಾಹಿರ ಫ್ಲೆಕ್ಸ್, ಬ್ಯಾನರ್ ಮತ್ತು ಹೋರ್ಡಿಂಗ್ಸ್ ತೆರವು, ರಸ್ತೆ ಗುಂಡಿಗಳ ಭರ್ತಿ ಹಾಗೂ ರಾಜಕಾಲುವೆ ನಿರ್ವಹಣೆ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರಿದ್ದ ವಿಭಾಗೀಯ ನ್ಯಾಯಪೀಠ ನಡೆಸಿತು. ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ, ಜಾಹೀರಾತು ನೀತಿಗೆ ಈತನಕ 1,200 ಆಕ್ಷೇಪಣೆ ಸಲ್ಲಿಕೆಯಾಗಿವೆ. ಇವುಗಳಲ್ಲಿ 800ಕ್ಕೂ ಹೆಚ್ಚು ಜನ ತಮ್ಮ ಆಕ್ಷೇಪಣೆಗಳನ್ನು ಖುದ್ದಾಗಿ ಆಲಿಸುವಂತೆ ಮನವಿ ಮಾಡಿದ್ದಾರೆ ಎಂದರು. ಇದಕ್ಕಾಗಿ ನಾವು ಸಾರ್ವಜನಿಕ ಅಹವಾಲು ಆಲಿಸುವ ಬಗ್ಗೆ ಚಿಂತಿಸುತ್ತಿದ್ದೇವೆ. ಏನಾದರೂ ಬದಲಾವಣೆ ಮಾಡುವುದಿದ್ದರೆ ಒಂದು ವಾರದೊಳಗೆ ಮಾಡಿ ನಂತರ ಅದರ ಫಲಶ್ರುತಿಯನ್ನು ಸರಕಾರಕ್ಕೆ ಕಳುಹಿಸಿಕೊಡಲಿದ್ದೇವೆ ಎಂದು ಹೇಳಿದರು. ಇದಕ್ಕೆ ನ್ಯಾಯಪೀಠ, ಆದಷ್ಟು ಶೀಘ್ರ ಅಂತಿಮಗೊಳಿಸಿ ಎಂದು ಸೂಚಿಸಿತು.

ಸಬ್‌ಇನ್ಸ್‌ಪೆಕ್ಟರ್ ವರ್ಗಾವಣೆ ಬಗ್ಗೆ ಮಾಹಿತಿ ನೀಡಿ: ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲಿಸಿ ವರ್ಗಾವಣೆ ಗೊಂಡಿರುವ ಬ್ಯಾಟರಾಯಪುರ ಪೊಲೀಸ್ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ನಗರ ವ್ಯಾಪ್ತಿಯಲ್ಲಿ ಅನಧಿಕತ ಜಾಹೀರಾತು ಫಲಕಗಳ ತೆರವಿಗೆ ಸಂಬಂಧಿಸಿದಂತೆ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಸರಕಾರಿ ಪರ ವಕೀಲ ಉದಯ್ ಹೊಳ್ಳ ಅವರಿಗೆ ಈ ಸೂಚನೆ ನೀಡಿದ್ದಾರೆ. ನೋಟಿಸ್ ಜಾರಿಗೊಳಿಸಿದ್ದರೂ, ಅನಧಿಕೃತ ಜಾಹೀರಾತನ್ನು ತೆರವುಗೊಳಿಸದ ಹಿನ್ನಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಡಿಕೆಶಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ವಿಚಾರಣೆ ವೇಳೆ ಡಿಕೆಶಿ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ ಕಾರಣಕ್ಕೆ ಸಬ್ ಇನ್ಸ್‌ಪೆಕ್ಟರ್‌ನನ್ನು ವರ್ಗಾವಣೆ ಮಾಡಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡನೆ ಮಾಡಿದರು.

ಸಚಿವ ಹಾಗೂ ಇತರರ ವಿರುದ್ಧ ಚಾರ್ಜ್ ಶೀಟ್ ದಾಖಲು ಮಾಡುವ ಬದಲು ಬಿ ರಿಪೋರ್ಟ್ ಸಲ್ಲಿಸಲಾಗಿದೆ. ಈ ವೇಳೆ ಎಜಿಗೆ ಸೂಚನೆ ನೀಡಿದ ನ್ಯಾಯಾಲಯ, ಅಧಿಕಾರಿಯ ವರ್ಗಾವಣೆ ಕುರಿತ ಅಫಿಡವಿಟ್ ಕೆಲ ಸಾಲುಗಳನ್ನು ಓದುವಂತೆ ಸೂಚಿಸಿತು. ಅಧಿಕಾರಿಯ ವರ್ಗಾವಣೆ ಕುರಿತಂತೆ ನಮಗೆ ಸರಕಾರದಿಂದ ಪ್ರತಿಕ್ರಿಯೆ ನೀಡಬೇಕು. ಕಾನೂನು ಪ್ರಕಾರ ತಮ್ಮ ಕರ್ತವ್ಯವನ್ನು ನಿರ್ವಹಿಸಿದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡವರ ಮೇಲೆ ನ್ಯಾಯಾಲಯ ಕಣ್ಣಿಡುತ್ತದೆ ಎಂದು ಹೇಳಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಡಿ.1ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News