ಬೆಂಗಳೂರು: ಅಂಗದಾನ ಜಾಗೃತಿ ವಾಕಥಾನ್‌ಗೆ ನಟ ಪ್ರಕಾಶ್ ರೈ ಚಾಲನೆ

Update: 2018-11-25 17:15 GMT

ಬೆಂಗಳೂರು, ನ.25 : ಅಂಗದಾನ ಕುರಿತು ಜಾಗೃತಿ ಮೂಡಿಸಲು ಮೋರ್ ಟು ಗೀವ್ ಅಭಿಯಾನದ ಅಂಗವಾಗಿ ಫೋರ್ಟಿಸ್ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ‘ವಾಕಥಾನ್’ಗೆ ಬಹುಭಾಷಾ ನಟ ಪ್ರಕಾಶ್ ರೈ ಇಂದಿಲ್ಲಿ ಚಾಲನೆ ನೀಡಿದರು.

ಅಂಗದಾನದಂತಹ ಯೋಜನೆಗೆ ಬೆಂಬಲ ಸೂಚಿಸುವ ಉದ್ದೇಶದಿಂದ 1200 ಕ್ಕೂ ಹೆಚ್ಚಿನ ಜನರು ವಾಕಥಾನ್‌ನಲ್ಲಿ ಪಾಲ್ಗೊಂಡಿದ್ದರು. ನಗರದ ವಿವಿಧ ಸ್ಥಳಗಳಲ್ಲಿ ಜಾಗೃತಿ ಅಭಿಯಾನ ನಡೆಸಿ, ಅಂಗದಾನ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಫೋರ್ಟಿಸ್ ಆಸ್ಪತ್ರೆಯ ಹೃದಯ ರಕ್ತನಾಳ ವಿಜ್ಞಾನಗಳ ವಿಭಾಗದ ಅಧ್ಯಕ್ಷ ಡಾ.ವಿವೇಕ್ ಮಾತನಾಡಿ, ಪ್ರತಿ ವರ್ಷ ಭಾರತ ತೀವ್ರ ಪ್ರಮಾಣದಲ್ಲಿ ಅಂಗದಾನಿಗಳ ಕೊರತೆ ಅನುಭಸುತ್ತಿದೆ. ಇದರಲ್ಲಿ ಅಂಗದಾನ ಕುರಿತು ಜ್ಞಾನದ ಕೊರತೆಯೇ ಅಧಿಕವಾಗಿದೆ. ಹೀಗಾಗಿ ಅಂಗದಾನ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಒಬ್ಬ ವ್ಯಕ್ತಿಗೆ ಅಂಗದಾನದಿಂದ ಮರು ಜೀವ ನೀಡುತ್ತದೆ. ಹೀಗಾಗಿ, ಸಾಯುವವರು ತಮ್ಮ ಅಂಗಗಳನ್ನು ದಾನ ಮಾಡಬೇಕು ಹಾಗೂ ಇನ್ನಿತರರನ್ನು ಪ್ರೇರೇಪಿಸಬೇಕು ಎಂದ ಅವರು ತಿಳಿಸಿದರು.

ಅಂಗ ಅಲಭ್ಯತೆಯ ಕಾರಣ ಪ್ರತಿವರ್ಷ ಸುಮಾರು 5 ಲಕ್ಷ ಜನರು ಭಾರತದಲ್ಲಿ ಮೃತಪಡುತ್ತಿದ್ದಾರೆ. 1.5 ಲಕ್ಷ ಜನರು ಮೂತ್ರ ಪಿಂಡದ ಅಗತ್ಯ ಹೊಂದಿರುತ್ತಾರಾದರೂ ಕೇವಲ 3000 ಜನರು ಮಾತ್ರ ಮೂತ್ರಪಿಂಡವನ್ನು ಸ್ವೀಕರಿಸಲು ಸಾಧ್ಯವಾಗುತ್ತಿದೆ. ಪ್ರಮುಖ ಅಂಗಗಳಾದ ಹೃದಯ, ಪ್ಯಾಂಕ್ರಿಯಾಗಳು, ಪಿತ್ತಜನಕಾಂಗ, ಮೂತ್ರಪಿಂಡಗಳು ಮತ್ತು ಶ್ವಾಸಕೋಶಗಳನ್ನು, ಅಂಗವೈಫಲ್ಯ ಹೊಂದಿರುವವರಿಗೆ ಕಸಿ ಮಾಡಿ ಜೋಡಿಸಬಹುದಾಗಿರುತ್ತದೆ. ಹೃದಯ, ಶ್ವಾಸಕೋಶ, ಪ್ಯಾಂಕ್ರಿಯಾಗಳು, ಪಿತ್ತಜನಕಾಂಗ, ಮೂತ್ರಪಿಂಡಗಳು ಮತ್ತು ಸಣ್ಣ ಕರುಳಿನ ದಾನ ಮಾಡುವುದರೊಂದಿಗೆ ಒಬ್ಬ ದಾನಿ ಎಂಟು ಜೀವಗಳನ್ನು ಉಳಿಸಬಹುದಾಗಿದೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News