ವಿಟಾಮಿನ್ ಡಿ ಕೊರತೆಯನ್ನು ಕಡೆಗಣಿಸಬೇಡಿ, ಅದು ಕ್ಯಾನ್ಸರ್‌ಗೂ ಕಾರಣವಾಗಬಲ್ಲುದು

Update: 2018-11-26 12:38 GMT

ವಿಟಾಮಿನ್ ಡಿ ಕೊರತೆ ಇಂದು ವಿಶ್ವಾದ್ಯಂತ ಜೀವನಶೈಲಿ ಸಮಸ್ಯೆಯಾಗುತ್ತಿದೆ. ಹಿರಿಯ ಜೀವಗಳು ಮತ್ತು ತಮ್ಮನ್ನು ಬಿಸಿಲಿಗೆ ಸಾಕಷ್ಟು ಒಡ್ಡಿಕೊಳ್ಳದವರು ವಿಟಾಮಿನ್ ಡಿ ಕೊರತೆಗೆ ಗುರಿಯಾಗುವ ಹೆಚ್ಚಿನ ಅಪಾಯವಿರುತ್ತದೆಯಾದರೂ ವಯಸ್ಸು,ಲಿಂಗ ಮತ್ತು ಜನಾಂಗ ಭೇದವಿಲ್ಲದೆ ಯಾರಲ್ಲಿಯೂ ಈ ಕೊರತೆಯುಂಟಾಗಬಹುದು. 2018ರ ಅಧ್ಯಯನವೊಂದರಂತೆ ಭಾರತದಲ್ಲಿ ಶೇ.40ರಿಂದ ಶೇ.99ರಷ್ಟು ಜನರು ವಿವಿಧ ಪ್ರಮಾಣಗಳಲ್ಲಿ ವಿಟಾಮಿನ್ ಡಿ ಕೊರತೆಯಿಂದ ಬಳಲುತ್ತಿದ್ದಾರೆ. ಅಂದರೆ ಹೆಚ್ಚುಕಡಿಮೆ ಪ್ರತಿಯೋರ್ವ ಭಾರತೀಯನಿಗೂ ಸಾಕಷ್ಟು ಪ್ರಮಾಣದಲ್ಲಿ ಈ ವಿಟಾಮಿನ್ ದೊರೆಯುತ್ತಿಲ್ಲ.

ರಕ್ತದಲ್ಲಿ ಡಿ ವಿಟಾಮಿನ್ ಮಟ್ಟ 20 ಎನ್‌ಜಿ/ಎಂಎಲ್(ನ್ಯಾನೊಗ್ರಾಂ ಪ್ರತಿ ಮಿಲಿಲೀಟರ್‌ಗೆ)ಗಿಂತ ಕಡಿಮೆಯಿದ್ದರೆ ಅದನ್ನು ಕೊರತೆ ಎಂದು ಪರಿಗಣಿಸಲಾಗಿದೆ. ಸಾಮಾನ್ಯವಾಗಿ ವಿಟಾಮಿನ್ ಡಿ ಮಟ್ಟ 30ಎನ್‌ಜಿ/ಎಂಎಲ್‌ಗಿಂತ ಹೆಚ್ಚಿರಬೇಕು. 20ರಿಂದ 30 ಎನ್‌ಜಿ/ಎಂಎಲ್ ಇದ್ದರೆ ಅಂತಹ ವ್ಯಕ್ತಿಯು ಸಾಕಷ್ಟು ವಿಟಾಮಿನ್ ಡಿ ಹೊಂದಿರುವುದಿಲ್ಲ.

 ವಿಟಾಮಿನ್ ಡಿ ಕೊರತೆಯು ಅಸ್ಥಿರಂಧ್ರತೆ,ಸೋಂಕುಗಳು,ಅಲರ್ಜಿ, ಆಟೋಇಮ್ಯೂನ್ ಅಥವಾ ಸ್ವರಕ್ಷಿತ ರೋಗಗಳು,ಹೃದಯರಕ್ತನಾಳ ಕಾಯಿಲೆಗಳು,ಕ್ಷಯರೋಗ,ಖಿನ್ನತೆ.....ಅಷ್ಟೇ ಏಕೆ,ಕ್ಯಾನ್ಸರ್‌ನ ಅಪಾಯವನ್ನೂ ಉಂಟು ಮಾಡುತ್ತದೆ.

 ಲಕ್ಷಣಗಳು

ಹೆಚ್ಚಿನ ಪ್ರಕರಣಗಳಲ್ಲಿ ವಿಟಾಮಿನ್ ಡಿ ಕೊರತೆಯ ಲಕ್ಷಣಗಳು ಸುಪ್ತವಾಗಿರುತ್ತವೆ ಮತ್ತು ಹೆಚ್ಚಿನ ಜನರಿಗೆ ತಾವು ಅದರಿಂದ ಬಳಲುತ್ತಿದ್ದೇವೆ ಎನ್ನುವುದು ಗೊತ್ತಿರುವುದಿಲ್ಲ. ವ್ಯಕ್ತಿಯಲ್ಲಿ ವಿಟಾಮಿನ್ ಡಿ ಕೊರತೆಯಿದ್ದರೆ ಈ ಕೆಳಗಿನ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

►ಸೋಂಕುಗಳಿಗೆ ಗುರಿಯಾಗುವ ಹೆಚ್ಚಿನ ಸಾಧ್ಯತೆ

 ವಿಟಾಮಿನ್ ಡಿ ನಮ್ಮ ಶರೀರದ ರೋಗ ನಿರೋಧಕ ಶಕ್ತಿಯ ಸಮರ್ಪಕ ಕಾರ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುವ ಅದು ವಿವಿಧ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಸೋಂಕುಗಳ ವಿರುದ್ಧ ಹೋರಾಡಿ ನಮ್ಮನ್ನು ಆರೋಗ್ಯವಂತರಾಗಿಡುತ್ತದೆ. ವಿಟಾಮಿನ್ ಡಿ ಮಟ್ಟ ಕಡಿಮೆಯಾಗುವುದಕ್ಕೂ ಶೀತ ಮತ್ತು ನ್ಯುಮೋನಿಯಾ ದಂತಹ ಕೆಳ ಶ್ವಾಸನಾಳದ ಸೋಂಕುಗಳಿಗೂ ನಂಟು ಇದೆ ಎನ್ನುವುದನ್ನು 2017ರಲ್ಲಿ ನಡೆಸಲಾದ ಅಧ್ಯಯನವು ಬೆಳಕಿಗೆ ತಂದಿದೆ. ಹೀಗಾಗಿ ನೀವು ಆಗಾಗ್ಗೆ ಅನಾರೋಗ್ಯಕ್ಕೆ,ವಿಶೇಷವಾಗಿ ಕೆಮ್ಮು ಮತ್ತು ಶೀತಕ್ಕೆ ಗುರಿಯಾಗುತ್ತಿದ್ದರೆ ಅದಕ್ಕೆ ವಿಟಾಮಿನ್ ಡಿ ಕೊರತೆ ಕಾರಣವಾಗಿರಬಹುದು.

►ಬಳಲಿಕೆ

  ಬಳಲಿಕೆ ಮತ್ತು ದಣಿವನ್ನುಂಟು ಮಾಡುವ ಹಲವಾರು ಆರೋಗ್ಯ ಸಮಸ್ಯೆಗಳಿದ್ದು, ವಿಟಾಮಿನ್ ಡಿ ಕೊರತೆ ಅವುಗಳಲ್ಲೊಂದಾಗಿದೆ. ಆದರೆ ಈ ಲಕ್ಷಣವನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿಲ್ಲ. ರಕ್ತದಲ್ಲಿ ವಿಟಾಮಿನ್ ಡಿ ಮಟ್ಟ ಕಡಿಮೆಯಾದರೆ ಅದು ಶರೀರದ ಶಕ್ತಿಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಬಳಲಿಕೆ ಹಾಗೂ ದಣಿವುಗಳಿಗೆ ಕಾರಣವಾಗುತ್ತದೆ.

►ಮೂಳೆ ನೋವು

ನಮ್ಮ ಶರೀರವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ವಿಟಾಮಿನ್ ಡಿ ಅಗತ್ಯವಾಗಿದೆ ಮತ್ತು ಕ್ಯಾಲ್ಸಿಯಂ ಮೂಳೆಗಳ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ವಿಟಾಮಿನ್ ಡಿ ಕೊರತೆಯು ಮೂಳೆ ಸಾಂದ್ರತೆಯ ಮೇಲೆ ಪ್ರತಿಕೂಲ ರಿಣಾಮವನ್ನು ಬೀರುತ್ತದೆ ಮತ್ತು ಮೂಳೆ ನೋವು ಹಾಗೂ ಬೆನ್ನುನೋವಿನಂತಹ ಲಕ್ಷಣಗಳಿಗೆ ಕಾರಣವಾಗುತ್ತದೆ.

ವಿಟಾಮಿನ್ ಡಿ ಕೊರತೆಯು ದೀರ್ಘಕಾಲೀನ ಬೆನ್ನುನೋವಿನೊಂದಿಗೆ ತಳುಕು ಹಾಕಿಕೊಂಡಿದೆ ಎನ್ನುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಅಲ್ಲದೆ ರಕ್ತದಲ್ಲಿ ಸಹಜ ವಿಟಾಮಿನ್ ಡಿ ಮಟ್ಟವನ್ನು ಹೊಂದಿರುವವರಿಗೆ ಹೋಲಿಸಿದರೆ ಈ ಕೊರತೆಯನ್ನು ಅನುಭವಿಸುವವರಲ್ಲಿ ಕಾಲುಗಳು,ಪಕ್ಕೆಲವುಗಳು ಮತ್ತು ಕೀಲುಗಳಲ್ಲಿ ಎರಡು ಪಟ್ಟು ನೋವು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಗಂಭೀರ ಪ್ರಕರಣಗಳಲ್ಲಿ ವಿಟಾಮಿನ್ ಡಿ ಕೊರತೆಯು ಕಡಿಮೆ ಮೂಳೆ ಖನಿಜ ಸಾದ್ರತೆಯಿಂದಾಗಿ ಮೂಳೆ ನಷ್ಟಕ್ಕೆ ಕಾರಣವಾಗುತ್ತದೆ ಮತ್ತು ಇದು ಮೂಳೆ ಮುರಿತದ ಅಪಾಯಗಳನ್ನು ಹೆಚ್ಚಿಸುತ್ತದೆ.

►ಮಾಂಸಖಂಡಗಳಲ್ಲಿ ನೋವು

ವಿಟಾಮಿನ್ ಡಿ ಕೊರತೆಯು ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಮಾಂಸಖಂಡಗಳ ನೋವನ್ನುಂಟು ಮಾಡಬಹುದು ಎನ್ನುವುದನ್ನು ಅಧ್ಯಯನವೊಂದು ಬೆಟ್ಟು ಮಾಡಿದೆ. ದೀರ್ಘಕಾಲದಿಂದ ನೋವನ್ನು ಅನುಭವಿಸುತ್ತಿರುವ ಸುಮಾರು ಶೇ.71ರಷ್ಟು ಜನರಲ್ಲಿ ಈ ವಿಟಾಮಿನ್ ಕೊರತೆಯಿರುವುದು ಕಂಡುಬಂದಿದೆ. ನೋವನ್ನು ಗ್ರಹಿಸುವ ವಿಟಾಮಿನ್ ಡಿ ಗ್ರಾಹಕಗಳು ನರಕೋಶಗಳಲ್ಲಿರುವುದು ಇದಕ್ಕೆ ಕಾರಣವಾಗುತ್ತದೆ. ವಿಟಾಮಿನ್ ಡಿ ಕೊರತೆಯು ಈ ಗ್ರಾಹಕಗಳ ಅತಿಸಂವೇದನೆಗೆ ಕಾರಣವಾಗುವ ಮೂಲಕ ನೋವನ್ನುಂಟು ಮಾಡುತ್ತದೆ.

►ತಲೆಗೂದಲು ನಷ್ಟ

 ತಲೆಗೂದಲು ಉದುರಲು ಪ್ರಮುಖ ಕಾರಣಗಳಲ್ಲಿ ಪೌಷ್ಟಿಕಾಂಶಗಳ ಕೊರತೆಯೂ ಒಂದಾಗಿದೆ. ಮಹಿಳೆಯರಲ್ಲಿ ವಿಟಾಮಿನ್ ಡಿ ಕೊರತೆಯಿಂದ ತಲೆಗೂದಲು ಹೆಚ್ಚು ಉದುರುತ್ತದೆ. ಈ ವಿಟಾಮಿನ್ ಕೊರತೆಯು ತೀವ್ರ ತಲೆಗೂದಲು ನಷ್ಟವನ್ನುಂಟು ಮಾಡುವ ಅಲೋಪೇಸಿಯಾ ಅರಿಯೇಟಾ ಎಂಬ ಸ್ವರಕ್ಷಿತ ರೋಗದೊಂದಿಗೆ ತಳುಕು ಹಾಕಿಕೊಂಡಿದೆ. ಹೀಗಾಗಿ ತಲೆಗೂದಲು ಉದುರಲು ಆರಂಭವಾದರೆ ಅದನ್ನು ಕಡೆಗಣಿಸಬೇಡಿ,ವೈದ್ಯರನ್ನು ಕಂಡು ನಿಖರವಾದ ಕಾರಣವನ್ನು ತಿಳಿದುಕೊಂಡು ಚಿಕಿತ್ಸೆ ಪಡೆದುಕೊಳ್ಳಿ.

►ಖಿನ್ನತೆಯ ಅನುಭವ

ವಿಟಾಮಿನ್ ಡಿ ಕೊರತೆಗೆ ಮತ್ತು ವಿಶೇಷವಾಗಿ ವಯಸ್ಕರಲ್ಲಿ ಖಿನ್ನತೆಗೆ ನಂಟು ಇರುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಹಲವಾರು ನರವೈಜ್ಞಾನಿಕ ಮತ್ತು ಚಯಾಪಚಯ ಕಾರ್ಯಗಳನ್ನು ಕ್ರಮಬದ್ಧಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಮಿದುಳಿನ ಅಂಗಾಂಶಗಳಲ್ಲಿ ವಿಟಾಮಿನ್ ಡಿ ಗ್ರಾಹಕಗಳಿರುವುದು ಇದಕ್ಕೆ ಕಾರಣವಾಗಿದೆ. ವಿಟಾಮಿನ್ ಡಿ ಪೂರಕಗಳು ಉದ್ವೇಗ ಮತ್ತು ಖಿನ್ನತೆಯ ಲಕ್ಷಣಗಳನ್ನು ಹೊಂದಿರುವವರಲ್ಲಿ ಚೇತರಿಕೆಯನ್ನುಂಟು ಮಾಡುತ್ತವೆ ಎನ್ನುವುದೂ ಅಧ್ಯಯನಗಳಿಂದ ಸಾಬೀತಾಗಿದೆ.

ವಿಟಾಮಿನ್ ಡಿ ಕೊರತೆಯ ಲಕ್ಷಣಗಳು ನಿರ್ದಿಷ್ಟತೆ ಹೊಂದಿಲ್ಲ,ಹೀಗಾಗಿ ಅದನ್ನು ನಿರ್ಧರಿಸುವುದು ಸುಲಭವಲ್ಲ. ಆದ್ದರಿಂದ ವಿಟಾಮಿನ್ ಡಿ ಕೊರತೆಯನ್ನು ಸೂಚಿಸುವ ಈ ಯಾವುದೇ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಭೇಟಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಸೂಕ್ತ ಆಹಾರ,ಸೂರ್ಯನ ಬಿಸಿಲು ಮತ್ತು ಪೂರಕಗಳ ನೆರವಿನೊಂದಿಗೆ ವಿಟಾಮಿನ್ ಡಿ ಕೊರತೆಯನ್ನು ನೀಗಿಸಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News