ಸಕಲ ಸರಕಾರಿ ಗೌರವಗಳೊಂದಿಗೆ ಅಂಬಿಗೆ ಅಂತಿಮ ವಿದಾಯ

Update: 2018-11-26 14:01 GMT

ಬೆಂಗಳೂರು, ನ.26: ನಾಡಿನ ಜನರ ಮೆಚ್ಚಿನ ನಟನಾಗಿ, ರಾಜಕಾರಣಿಯಾಗಿ, ಆಪ್ತ ಗೆಳೆಯನಾಗಿದ್ದ ಮಾಜಿ ಸಚಿವ, ಕನ್ನಡ ಚಲನಚಿತ್ರ ರಂಗದ ಹಿರಿಯ ನಟ ಅಂಬರೀಷ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಗರದ ಕಂಠೀರವ ಸ್ಟುಡಿಯೊದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು.

ಅಂಬರೀಷ್ ಪುತ್ರ ಅಭಿಷೇಕ್ ಅವರು ತಂದೆಯ ದೇಹವನ್ನು ಇರಿಸಿದ್ದ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಅಂಬರೀಷ್ ಅವರ ಪತ್ನಿ ಸುಮಲತಾ ಅವರ ಮಾರ್ಗದರ್ಶನದಲ್ಲಿ ಒಕ್ಕಲಿಗರ ಸಂಪ್ರದಾಯದಂತೆ ಅಭಿಷೇಕ್ ಹಾಗೂ ಕುಟುಂಬದವರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು. ಅಂತ್ಯಕ್ರಿಯೆ ಪೂಜಾ ಕೈಂಕರ್ಯದಲ್ಲಿ ಪುರೋಹಿತರು ವಿಷ್ಣು ಸಹ್ರಸ್ರನಾಮ, ಶಾಂತಿ ಮಂತ್ರ ಪಠಣ ಮಾಡಿದರು. ಪೊಲೀಸರು ಮೂರು ಸುತ್ತು ಕುಶಾಲ ತೋಪು ಹಾರಿಸಿ ಸಕಲ ಸರಕಾರಿ ಗೌರವ ಸಲ್ಲಿಸಿದರು. ಬಳಿಕ, ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಸಿಎಂಗೆ ನೀಡಲಾಯಿತು. ಅಂಬರೀಷ್ ಅವರ ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಂಬರೀಷ್ ಪತ್ನಿ ಸುಮಲತಾ ಅವರಿಗೆ ಹಸ್ತಾಂತರಿಸಿದರು. ಧ್ವಜ ಸ್ವೀಕರಿಸಿದ ಸುಮಲತಾ ಅವರಿಗೆ ದುಃಖ ಉಮ್ಮಳಿಸಿ ಬಂತು, ಧ್ವಜ ಹಿಡಿದು ಕಣ್ಣೀರಿಟ್ಟರು.

ಇದಕ್ಕೂ ಮೊದಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಡಿಸಿಎಂ ಜಿ.ಪರಮೇಶ್ವರ್, ಮಾಜಿ ಸಿಎಂಗಳಾದ ಎಸ್.ಎಂ.ಕೃಷ್ಣ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಮಾಜಿ ಕೇಂದ್ರ ಗೃಹ ಸಚಿವ ಸುಶೀಲ್‌ ಕುಮಾರ್ ಶಿಂಧೆ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಅನೇಕ ಗಣ್ಯರು ಅಂಬರೀಶ್ ಅವರಿಗೆ ಅಂತಿಮ ನಮನ ಸಲ್ಲಿಸಿ ಗೌರವ ಸಲ್ಲಿಸಿದರು.

13 ಕಿ.ಮೀ ದೂರ ಸಾಗಿದ ಯಾತ್ರೆ: ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೊವರೆಗೆ 13 ಕಿಮೀ ದೂರ ಸಾಗಿ ಬಂದ ಅಂತಿಮ ಯಾತ್ರೆಯಲ್ಲಿ ಅಭಿಮಾನಿಗಳ ಸಾಗರವೇ ಹರಿದುಬಂತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಕಂಠೀರವ ಸ್ಟುಡಿಯೊ ಸುತ್ತ ಮುತ್ತ ಸಂಚಾರ ಬಂದ್ ಆಗಿತ್ತು. ಭದ್ರತೆಗಾಗಿ ಬೆಂಗಳೂರು ನಗರದಲ್ಲಿ 15 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಪಾರ್ಥಿವ ಶರೀರವನ್ನು ಹೊತ್ತು ಮೆರವಣಿಗೆ ತೆರಳಿದ ವಾಹನಕ್ಕೆ 1,800 ಕೆ.ಜಿ.ಹೂವಿನಿಂದ ಅಲಂಕಾರ ಮಾಡಲಾಗಿತ್ತು. 

ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಪ್ರಮುಖರು

ಅಂಬರೀಶ್ ಆಪ್ತ ಮಿತ್ರ ಹಾಗೂ ಸಚಿವ ಕೆ.ಜೆ.ಜಾರ್ಜ್, ಸಚಿವ ಡಿ.ಕೆ.ಶಿವಕುಮಾರ್, ಸಚಿವೆ ಜಯಮಾಲ, ಸಂಸದ ಡಿ.ಕೆ.ಸುರೇಶ್, ಸಂಸದ ಶಿವರಾಮೇಗೌಡ, ಮಾಜಿ ಡಿಸಿಎಂ ಆರ್.ಅಶೋಕ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಿಬಿಎಂಪಿ ಮೇಯರ್ ಗಂಗಾಂಬಿಕೆ, ತೆಲುಗು ಸೂಪರ್ ಸ್ಟಾರ್ ಮೋಹನ್ ಬಾಬು ಹಾಗೂ ಅವರ ಕುಟುಂಬಸ್ಥರು, ಮಾಜಿ ಸಚಿವ ಚಲುವರಾಯಸ್ವಾಮಿ, ಹಿರಿಯ ನಟಿ ಬಿ.ಸರೋಜಾದೇವಿ, ನಟರಾದ ಶಿವರಾಜ್ ಕುಮಾರ್, ರವಿಚಂದ್ರನ್, ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ, ಹಿರಿಯ ನಿರ್ದೇಶ ರಾಜೇಂದ್ರ ಸಿಂಗ್ ಬಾಬು, ನಟ ದರ್ಶನ್, ನಿರ್ಮಾಪಕ ಹಾಗೂ ಶಾಸಕ ಮುನಿರತ್ನ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ಯಶ್, ಪುನೀತ್‌ ರಾಜ್‌ಕುಮಾರ್, ನಟ ಅರ್ಜುಜ್ ಸರ್ಜಾ, ಹಿರಿಯ ನಟ ದೊಡ್ಡಣ್ಣ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಚಿನ್ನೇಗೌಡ, ನಟ ಜಗ್ಗೇಶ್, ಅಂಬರೀಶ್ ಸ್ನೇಹಿತ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್, ಶಾಸಕ ಎನ್.ಎ.ಹಾರೀಸ್, ವಿಪಕ್ಷ ನಾಯಕ ಗೋವಿಂದ ಕಾರಜೋಳ, ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್, ಪರಿಷತ್ ಸದಸ್ಯ ಶರವಣ, ನಟರಾದ ಸುಂದರ್ ರಾಜ್, ನಿರ್ಮಾಪಕ ಸಾ.ರಾ. ಗೋವಿಂದು, ಹಿರಿಯ ನಟ ವಿನೋದ್ ಆಳ್ವಾ, ಹಿರಿಯ ನಟ ಶ್ರೀನಾಥ್, ಸಂಗೀತ ನಿರ್ದೇಶಕ ಗುರುಕಿರಣ್, ರಮೇಶ್ ಅರವಿಂದ್, ಪ್ರೇಮ್, ಆದಿತ್ಯ, ದುನಿಯ ವಿಜಯ್, ಅಜಯ್ ರಾವ್, ಧ್ರುವ ಸರ್ಜಾ, ಸಾಧು ಕೋಕಿಲಾ, ಜಿರಂಜೀವಿ ಸರ್ಜಾ, ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಕೂಡ ಅಂತಿಮ ನಮನ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News