ಎಲ್‌ಇಡಿ ಸ್ಕ್ರೀನ್‌ನಲ್ಲಿ ಅಂಬರೀಷ್ ಅಂತ್ಯ ಸಂಸ್ಕಾರದ ವಿಧಿ ವಿಧಾನ ವೀಕ್ಷಿಸಿದ ಅಭಿಮಾನಿಗಳು
ಬೆಂಗಳೂರು, ನ.26: ಹಿರಿಯ ನಟ ಅಂಬರೀಷ್ ಅವರ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳನ್ನು ಅಭಿಮಾನಿಗಳು ಕಂಠೀರವ ಸ್ಟುಡಿಯೋ ಹೊರಗೆ ಅಳವಡಿಸಿದ್ದ ಎಲ್‌ಇಡಿ ಸ್ಕ್ರೀನ್ ಮೂಲಕ ವೀಕ್ಷಿಸಿದರು.
ಸ್ಟುಡಿಯೊ ಹೊರಭಾಗದ ಹೊರ ವರ್ತುಲ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಅಳವಡಿಸಿದ್ದ ಎರಡು ಬೃಹತ್ ಎಲ್‌ಇಡಿ ಪರದೆ ಮೇಲೆ ಅಂಬರೀಷ್ ಅಂತ್ಯ ಕ್ರಿಯೆಯ ಅಂತಿಮ ವಿಧಿ ವಿಧಾನ ನೆರವೇರುವ ದೃಶ್ಯಾವಳಿಗಳನ್ನು ಪ್ರದರ್ಶಿಸಲಾಯಿತು.
ಈ ಸಂದರ್ಭ ಚಿತ್ರರಂಗದ ಹಲವು ಕಲಾವಿದರು ಅಂತಿಮ ನಮನ ಸಲ್ಲಿಸಲು ಆಗಮಿಸಿದ ವೇಳೆ ಅವರ ಅಭಿಮಾನಿಗಳು ಸ್ಕ್ರೀನ್‌ನಲ್ಲಿ ವೀಕ್ಷಿಸಿ ಸಿಳ್ಳೆ, ಕೇಕೆ ಹಾಕಿದ್ದು ಕಂಡುಬಂತು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರಾಜಕಾರಣಿಗಳು, ಚಿತ್ರರಂಗದ ಗಣ್ಯರು ಅಂಬರೀಷ್‌ಗೆ ಅಂತಿಮ ನಮನ ಸಲ್ಲಿಸಿದರು. ಇದನ್ನೆಲ್ಲಾ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಕಣ್ತುಂಬಿಕೊಂಡರು.
ಅಸ್ವಸ್ಥರಾದ ಸಿಬ್ಬಂದಿ: ಬೆಳಗ್ಗಿನಿಂದಲೂ ಬಿಸಿಲಿನಲ್ಲಿ ನಿಂತು ಕರ್ತವ್ಯ ನಿಭಾಯಿಸುತ್ತಿದ್ದ ಪೊಲೀಸ್ ಸಿಬ್ಬಂದಿ ತಲೆಸುತ್ತು ಬಂದು ಬಿದ್ದಿದ್ದು ಕಂಡು ಬಂತು. ಇವರನ್ನು ಉಳಿದವರು ಆರೈಕೆ ಮಾಡಿ ಚೇತರಿಸಿಕೊಳ್ಳಲು ಸಹಕರಿಸಿದರು. ಅಂಬರೀಷ್ ಅವರ ಪಾರ್ಥಿವ ಶರೀರ ಬಂದ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೇಂಟ್ ಪೀಟರ್ಸ್ ಸಂಸ್ಥೆಯ ಸಿಬ್ಬಂದಿ ಕೂಡ ಅಸ್ವಸ್ಥರಾದದ್ದು ಕಂಡುಬಂತು. ಬೆಳಗಿನಿಂದಲೂ ಆಹಾರ ಸೇವಿಸದೆ ಕರ್ತವ್ಯದಲ್ಲಿ ಭಾಗಿಯಾಗಿದ್ದ ಸಂಸ್ಥೆಯ ಸಿಬ್ಬಂದಿ ವಾಹನದಲ್ಲಿ ಬಂದ ಕಾರಣ ಉಸಿರಾಟದ ಸಮಸ್ಯೆಗೆ ತುತ್ತಾಗಿದ್ದರು. ಕೂಡಲೇ ಅವರಿಗೆ ನೀರು ಕುಡಿಸಿ ಆರೈಕೆ ಮಾಡಲಾಯಿತು. ವಾಹನದಿಂದ ಕೆಳಗಿಳಿದ ಅವರು ವಾಂತಿ ಮಾಡಿಕೊಂಡರು. ಕೂಡಲೇ ಅವರಿಗೆ ತುರ್ತು ಚಿಕಿತ್ಸೆ ನೀಡಿ ಸುಧಾರಿಸಿಕೊಳ್ಳಲು ಅವಕಾಶ ಮಾಡಿಕೊಡಲಾಯಿತು.
ಕರ್ತವ್ಯದಲ್ಲಿದ್ದ ಪೇದೆಗೆ ಗಾಯ: ಅಂಬರೀಷ್ ಅವರ ಅಂತಿಮ ಯಾತ್ರೆಗೆ ಜನಸಾಗರವೇ ಹರಿದು ಬಂದಿತ್ತು. ಅಂಬಿ ಅವರ ಅಂತಿಮ ಯಾತ್ರೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಣ್ಣಲ್ಲಿ ಕಣ್ಣಿಟ್ಟು ಭದ್ರತೆ ಒದಗಿಸುತ್ತಿತ್ತು. ಕಿಕ್ಕಿರಿದು ತುಂಬಿದ್ದ ಅಭಿಮಾನಿಗಳ ಸಾಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು ಗಾಯಗೊಂಡರು. ಗಾಯಗೊಂಡಿರುವ ಹೊಡೆತಕ್ಕೆ ಪೇದೆ ಇನ್ನೊಬ್ಬ ಪೊಲೀಸ್ ಪೇದೆಯ ಸಹಾಯ ಪಡೆದರು. ಸದ್ಯ ಪೊಲೀಸ್ ಪೇದೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೇಗೆ ಗಾಯಗೊಂಡರು ಅನ್ನೋದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.