ಪಂಚಭೂತಗಳಲ್ಲಿ ಅಂಬರೀಷ್ ಲೀನ: ಶಾಂತಿಗೆ ಭಂಗ ಬರದಂತೆ ನೋಡಿಕೊಂಡ ಬೆಂಗಳೂರು ಪೊಲೀಸರು

Update: 2018-11-26 14:51 GMT

ಬೆಂಗಳೂರು, ನ.26: ಕನ್ನಡ ಚಲನಚಿತ್ರರಂಗದ ಹಿರಿಯ ನಟ ಅಂಬರೀಷ್(66) ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಅಪಾರ ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳನ್ನು ಹೊಂದಿದ್ದ ಅಂಬರೀಶ್ ಅವರ ಅಂತಿಮ ದರ್ಶನ ಮತ್ತು ಅಂತಿಮ ಸಂಸ್ಕಾರದ ವೇಳೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. 

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಬೆಂಗಳೂರು ಮತ್ತು ಮಂಡ್ಯ ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಆದರೆ, ಸಣ್ಣಪುಟ್ಟ ತೊಂದರೆಯೂ ಬಾರದಂತೆ, ಜೊತೆಗೆ ಕಿಂಚಿತ್ತೂ ಅಂಬರೀಷ್ ಅಭಿಮಾನಿಗಳಿಗೆ ಬೇಸರವಾಗದಂತೆ, ಪೊಲೀಸರು ಅತ್ಯಂತ ಸಂಯಮದಿಂದ, ಜಾಗರೂಕತೆಯಿಂದ, ಕೆಲಸ ನಿರ್ವಹಿಸಿ, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪ್ರಮುಖವಾಗಿ, ಬೆಂಗಳೂರು ಪೊಲೀಸರು, ಕಾನೂನು ಸುವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅಂಬರೀಷ್ ನಿಧನವಾದ ಮರುದಿನ ಅಂದರೆ ರವಿವಾರ, ಕಾಂಗ್ರೆಸ್ಸಿನ ಹಿರಿಯ ಮುಖಂಡ ಜಾಫರ್ ಷರೀಫ್ ಅವರೂ ವಿಧಿವಶರಾಗಿದ್ದರು. ಬೆಂಗಳೂರು ಪೊಲೀಸರು ಎರಡೆರಡು ಜವಾಬ್ದಾರಿಯನ್ನು ಹೊರಬೇಕಾಗಿತ್ತು. ರಾಜ್ಯದ ಡಿಜಿ ಐಜಿಪಿ ನೀಲಮಣಿ ರಾಜು ಮತ್ತು ಬೆಂಗಳೂರು ಕಮಿಷನರ್ ಸುನಿಲ್ ಕುಮಾರ್, ಖುದ್ದಾಗಿ ಜವಾಬ್ದಾರಿಯ ನೇತೃತ್ವವನ್ನು ವಹಿಸಿದ್ದರು.

ಡಾ. ರಾಜಕುಮಾರ್ ಅಂತ್ಯಕ್ರಿಯೆಯ ವೇಳೆ, ನಡೆದ ಹಿಂಸಾಚಾರ ಯಾವ ಕಾರಣಕ್ಕೂ ಮರುಕಳಿಸಬಾರದು ಎಂದು, ಮುಖ್ಯಮಂತ್ರಿಗಳು ಕಾನೂನು, ಸುವ್ಯವಸ್ಥೆಯ ಇಂಚಿಂಚು ಮಾಹಿತಿಯನ್ನು ಪಡೆಯುತ್ತಿದ್ದರು. ಪ್ರಮುಖವಾಗಿ, ಹದಿಮೂರು ಕಿಲೋಮೀಟರ್ ದೂರ ಸಾಗಿದ, ಅಂತಿಮಯಾತ್ರೆಯ ವೇಳೆ, ಯಾವುದೇ ಅಹಿತಕರ ಘಟನೆ ನಡೆಯದಂತೆ, ಪೊಲೀಸರು ಮುತುವರ್ಜಿ ವಹಿಸಿದ್ದರು. ಪೊಲೀಸ್ ಬಂದೋಬಸ್ತ್ ಇನ್ನೂ ಹೆಚ್ಚಿಸಲಾಗಿತ್ತು. ಅಂತಿಮಯಾತ್ರೆಗೆ, ಬೆಂಗಳೂರು ಸಿಸಿಬಿ ಹೆಡ್, ಅಲೋಕ್ ಕುಮಾರ್ ಕೂಡಾ ವಿಶೇಷ ಪೊಲೀಸ್ ತಂಡದ ನೇತತ್ವ ವಹಿಸಿಕೊಂಡವರಲ್ಲಿ ಒಬ್ಬರಾಗಿದ್ದರು. ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ಮತ್ತು ಅಂತಿಮಯಾತ್ರೆಯ ವೇಳೆ, ಶಾಂತಿಗೆ ಭಂಗ ಬರದಂತೆ, ಮದ್ಯ ಮಾರಾಟವನ್ನು ಎರಡು ದಿನ ನಿಷೇಧಿಸಿ, ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದರು. ಮದ್ಯ ಮಾರಾಟದ ಸಂಬಂಧ, ಪೊಲೀಸ್ ಆಯುಕ್ತರು ಅಂತಿಮಯಾತ್ರೆಯ ವೇಳೆ, ಕಿಡಿಗೇಡಿಗಳು, ಮದ್ಯಪಾನದ ಅಮಲಿನಲ್ಲಿ, ದುಷ್ಕೃತ್ಯವನ್ನು ನಡೆಸಿ, ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡುವ ಸಂಭವವಿರುವುದಾಗಿ ಗುಪ್ತವಾರ್ತಾ ವಿಭಾಗದ ಮಾಹಿತಿಯಿಂದ ತಿಳಿದುಬಂದಿದೆ ಎಂದು ಉಲ್ಲೇಖಿಸಿದ್ದರು.

ಅಂತಿಮಯಾತ್ರೆ ಸಾಗುವ ಹದಿಮೂರು ಕಿಲೋಮೀಟರ್ ದಾರಿಯನ್ನು ಪ್ರತ್ಯೇಕ ವಾರ್ಡ್ ಆಗಿ ವಿಂಗಡಿಸಿ, ಪ್ರತೀ ವಾರ್ಡಿಗೆ ಒಬ್ಬೊಬ್ಬರು ಡಿಸಿಪಿಯನ್ನು ನೇಮಿಸಲಾಗಿತ್ತು. ತಮ್ಮ ತಮ್ಮ ವಾರ್ಡಿನಲ್ಲಿ, ಡಿಸಿಪಿ ನೇತತ್ವದಲ್ಲಿ ಎಲ್ಲೂ ಶಾಂತಿಗೆ ಭಂಗ ಬರದಂತೆ ಪೊಲೀಸರು ಎಚ್ಚರಿಕೆಯನ್ನು ವಹಿಸಿದ್ದರು. ರಾಜ್ಯ ಸರಕಾರವೂ ಭಾರೀ ಬಂದೋಬಸ್ತ್ ಅನ್ನು ನಿಯೋಜಿಸಿತ್ತು. ಡಿಸಿಪಿ ಸೇರಿದಂತೆ, ಒಟ್ಟು ನಾಲ್ಕು ಎಡಿಜಿಪಿ, ಮೂರು ಆರ್‌ಎ ಎಫ್ ತುಕುಡಿ, ಮೂವತ್ತು ಕೆಎಸ್ ಆರ್ ಪಿ ತುಕುಡಿ, 34 ಸಿಎಆರ್, ಹನ್ನೊಂದು ಸಾವಿರ ಪೊಲೀಸರನ್ನು ನೇಮಿಸಲಾಗಿತ್ತು. ಪ್ರವಾಹೋಪಾದಿಯಲ್ಲಿ ಹರಿದು ಬಂದ ಅಭಿಮಾನಿಗಳನ್ನು, ಎಲ್ಲೂ ತಾಳ್ಮೆಗೆಡದೆ ಪೊಲೀಸರು ನಿಭಾಯಿಸಿಕೊಂಡು ಬಂದರು. ಪೊಲೀಸ್ ಮುಖ್ಯಸ್ಥರು ಮತ್ತು ಸಿಎಂ ಎಲ್ಲಾ ಮಾಹಿತಿಗಳನ್ನು ಪಡೆಯುತ್ತಿದ್ದರು. 

ಪೊಲೀಸರಿಗೆ ಅಭಿನಂದನೆಗಳು: ಕಳೆದ ಮೂರು ದಿನದಿಂದ, ಅದರಲ್ಲೂ ಪ್ರಮುಖವಾಗಿ ಬೆಂಗಳೂರು ಪೊಲೀಸರು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿ, ಶಾಂತಿ ಕದಡದಂತೆ ನೋಡಿಕೊಂಡರು. ಇಷ್ಟು ದೊಡ್ಡ ವಿದ್ಯಮಾನವನ್ನು ಯಾವುದೇ ತೊಂದರೆಯಿಲ್ಲದೆ ನೋಡಿಕೊಂಡ ಬೆಂಗಳೂರು ಪೊಲೀಸರಿಗೆ ಅಂಬರೀಷ್ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News