×
Ad

ಬೆಂಗಳೂರು: ರಾಮೋಹಳ್ಳಿ ಪಂಚಾಯತ್ ಜನರಿಗೆ ಹಕ್ಕುಪತ್ರ ವಿತರಣೆ

Update: 2018-11-26 20:24 IST

ಬೆಂಗಳೂರು, ನ.26: ಸರಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ಅಕ್ರಮ-ಸಕ್ರಮದ ಅಡಿಯಲ್ಲಿ ಹಕ್ಕುಪತ್ರಗಳಿಗಾಗಿ ಕಾಯುತ್ತಿದ್ದ ರಾಮೋಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರಿಗೆ ಕೊನೆಗೂ ಹಕ್ಕುಪತ್ರ ದೊರಕಿದ್ದು, ಗ್ರಾಮದ ಜನರ ಮೊಗದಲ್ಲಿ ಸಂತಸ ಮೂಡಿಸಿದೆ. 

ಇಲ್ಲಿನ ಗ್ರಾಮದ ಬಯಲು ರಂಗಮಂದಿರ ಆವರಣದಲ್ಲಿ ನಡೆದ ಪಂಚಾಯ್ತಿ ಕಟ್ಟೆ ಕಾರ್ಯಕ್ರಮದಲ್ಲಿ ಶಾಸಕ ಎಸ್.ಟಿ.ಸೊಮಶೇಖರ್ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿದರು. ರಾಮೋಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ 17 ಫಲಾನುಭವಿಗಳು ನಿರ್ಮಿಸಿಕೊಂಡಿರುವ ಮನೆ ಹಾಗೂ ಜಾಗಕ್ಕೆ ಹಕ್ಕುಪತ್ರ ಸಿದ್ಧಗೊಂಡಿದ್ದು, ಉಳಿದವರಿಗೆ ಪಂಚಾಯತ್ ಕಚೇರಿಯಲ್ಲಿಯೇ ವಿತರಣೆ ಮಾಡಲಾಗುತ್ತದೆ ಎಂದು ಶಾಸಕ ಭರವಸೆ ನೀಡಿದರು.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 200 ಮಂದಿ ಅಕ್ರಮ-ಸಕ್ರಮ ಯೋಜನೆ ಅಡಿಯಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಹಸಿರು ವಲಯದಲ್ಲಿರುವ ಸರಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡವರಿಗೆ ಕಾನೂನಿನ ಅನ್ವಯ ಹಕ್ಕುಪತ್ರ ವಿತರಣೆ ಸಾಧ್ಯವಿಲ್ಲ. ಹೀಗಾಗಿ ಹಕ್ಕುಪತ್ರ ನೀಡಲು ಕಷ್ಟವಾಗುತ್ತಿದೆ. ಹಳದಿ ವಲಯದಲ್ಲಿ ಇದ್ದರೆ ಎಲ್ಲರಿಗೂ ಶೀಘ್ರದಲ್ಲಿಯೇ ಹಕ್ಕುಪತ್ರ ಸಿಗುತ್ತಿತ್ತು. ಸರಕಾರದ ಮಟ್ಟದಲ್ಲಿ ಹಸಿರು ವಲಯವನ್ನು ಹಳದಿ ವಲಯವನ್ನಾಗಿ ಮಾರ್ಪಡಿಸಿ ಹಕ್ಕುಪತ್ರ ನೀಡಲಾಗುತ್ತದೆ. ಅಲ್ಲದೆ, ಕಾನೂನು ಅಡಿಯಲ್ಲಿ ಹಕ್ಕುಪತ್ರ ನೀಡಲು ಕ್ರಮ ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಬಿಬಿಎಂಪಿಗೆ ಸೇರಿಸಲು ಚಿಂತನೆ: ಈಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು 5 ವಿಭಾಗಗಳಲ್ಲಿ ವಿಭಜಿಸುವ ಪ್ರಸ್ತಾವನೆ ಸರಕಾರದ ಮಟ್ಟದಲ್ಲಿದೆ. ಅದು ಕಾರ್ಯರೂಪಕ್ಕೆ ಬಂದರೆ ರಾಮೋಹಳ್ಳಿ, ಕುಂಬಳಗೂಡು ಸೇರಿ ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಹಲವು ಪಂಚಾಯತ್ ಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಲಾಗುವುದು ಎಂದು ಶಾಸಕ ಸೊಮಶೇಖರ್ ಇದೇ ವೇಳೆ ಮಾಹಿತಿ ನೀಡಿದರು.

ಪಂಚಾಯತ್ ವ್ಯಾಪ್ತಿಯ ಗ್ರಾಮಗಳನ್ನು ಬಿಬಿಎಂಪಿ ವಾರ್ಡ್‌ಗಳಂತೆ ಅಭಿವೃದ್ಧಿಪಡಿಸಲು ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಬಿಬಿಎಂಪಿ ವ್ಯಾಪ್ತಿಗೆ ಸೇರಿದರೆ ಅಭಿವೃದ್ಧಿ ಕೆಲಸಗಳಿಗೆ ವೇಗ ದೊರೆಯುತ್ತದೆ. ಪ್ರಸ್ತುತ ರಾಮೋಹಳ್ಳಿ ಮತ್ತೆರಡು ಪಂಚಾಯತ್ ಗಳನ್ನು ಪಟ್ಟಣ ಪಂಚಾಯತ್ ಗಳಾಗಿ ರೂಪಿಸುವ ಚಿಂತನೆ ಇದ್ದು, ಶೀಘ್ರದಲ್ಲೆ ಕಾರ್ಯರೂಪಕ್ಕೆ ತರಲಾಗುತ್ತದೆ. ರಸ್ತೆ ವಿಸ್ತರಣೆ, ಸರಕಾರಿ ಆಸ್ಪತ್ರೆ, ಶಾಲೆಗಳನ್ನು ಅಭಿವೃದ್ಧಿಪಡಿಸುವುದು, ಕೆರೆಗಳ ಅಭಿವೃದ್ಧಿ ಸೇರಿ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ರೂಪುರೇಷೆ ಸಿದ್ಧಪಡಿಸಲಾಗಿದೆ. ತುರ್ತು ಕೆಲಸಗಳನ್ನು ಶೀಘ್ರದಲ್ಲೆ ಮುಗಿಸಲಾಗುವುದು. ಕೆಲ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ನುಡಿದರು.

ಬಿಡಿಎ ವತಿಯಿಂದ ಅಭಿವೃದ್ಧಿ: ರೈತರಿಂದ ನಿವೇಶನಕ್ಕಾಗಿ ಬಿಡಿಎ ಜಮಿನು ವಶಪಡಿಸಿಕೊಳ್ಳುವ ವೇಳೆ ಗ್ರಾಮದ ಅಭಿವೃದ್ಧಿ ಮಾಡುವ ಬಗ್ಗೆ ನೀಡಿರುವ ಭರವಸೆಯನ್ನು ಈಡೇರಿಸಲಿದೆ ಎಂದು ಬಿಡಿಎ ಇಂಜಿನಿಯರ್ ಚೇತನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News