×
Ad

ಅಂಧರಿಗಾಗಿ ಬೆಂಗಳೂರು ವಿವಿ ನೂತನ ಪ್ರಯತ್ನ: ಪರೀಕ್ಷೆ ಬರೆಯಲು ಇನ್ನು ಮುಂದೆ ಸ್ಕ್ರೈಬ್ ಸಹಾಯ

Update: 2018-11-26 20:32 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.26: ಅಂಧರು ತಮ್ಮ ಪರಿಚಿತರು ಹಾಗೂ ಸ್ವಯಂಸೇವಾ ಸಂಸ್ಥೆಗಳ ಮೂಲಕ ಪರೀಕ್ಷೆ ಬರೆಯಲು ಇಲ್ಲಿಯವರೆಗೂ ಸಹಾಯ ಪಡೆಯುತ್ತಿದ್ದು, ಇದಕ್ಕೆ ತಿಲಾಂಜಲಿ ಇಟ್ಟು ಉದ್ದೇಶಿತ ಜನರ ಸಮೂಹ ರಚಿಸಲು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಬ್ರೈಲ್‌ಸಂಪನ್ಮೂಲ ಕೇಂದ್ರ ಚಿಂತನೆ ನಡೆಸಿದೆ.

ಉದ್ದೇಶಿತ ಸಮೂಹ ರಚನೆಗೊಂಡರೆ ಪರೀಕ್ಷೆಗೂ ಮುನ್ನ ಸಹಾಯಕರನ್ನು ಹುಡುಕುವ ಕಷ್ಟ ತಪ್ಪಲಿದ್ದು, ವಿದ್ಯಾರ್ಥಿಗಳು ಪರೀಕ್ಷಾ ತಯಾರಿ ನಡೆಸುವ ಜತೆಗೆ, ಸಹಾಯಕರನ್ನು ಹುಡುಕಲು ಸಹ ಸಮಯ ವ್ಯಯಿಸಬೇಕಿದೆ. ಸಮೂಹ ರಚನೆಗೊಂಡರೆ ವಿದ್ಯಾರ್ಥಿಗಳಲ್ಲಿನ ಹುಡುಕಾಟದ ಆತಂಕ ದೂರ ಆಗಲಿದೆ.

ದೃಷ್ಟಿಹೀನ ವಿದ್ಯಾರ್ಥಿಗಳಿಗೆ ಸ್ಕ್ರೈಬ್‌ಗಳ ಹೆಚ್ಚಿನ ಅಗತ್ಯವಿದ್ದು, ಉದ್ದೇಶಿತ ಸಮೂಹದಲ್ಲಿ ಎಲ್ಲ ವಯೋಮಾನದವರು ಸೇರಬಹುದು. ಕೆಲವು ನಿಯಮಗಳ ಅನುಸಾರ ಅಗತ್ಯವಿದ್ದವರಿಗೆ ಸ್ಕ್ರೈಬ್ ಸಹಾಯ ನೀಡಲಾಗುವುದು. ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಸಂಪರ್ಕಿಸಿದಾಗ, ಸಮೂಹ ಸೇರಲು ಈಗಾಗಲೇ ಕೆಲವರು ಮುಂದೆ ಬಂದಿದ್ದಾರೆ. ಇನ್ನೂ ಹೆಚ್ಚಿನ ಸಹಾಯಕರ ಅಗತ್ಯತೆಯಿದೆ ಎಂದು ಅವರು ತಿಳಿಸಿದರು.

ಕೇಂದ್ರ ವಿಶ್ವವಿದ್ಯಾಲಯದಲ್ಲಿನ ಬ್ರೈಲ್‌ಸಂಪನ್ಮೂಲ ಕೇಂದ್ರವು ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿನ ಅಂಧ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ಮಾಡುತ್ತಿದೆ. ಕೇಂದ್ರದಲ್ಲಿ ಸದ್ಯ 152 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ನಿಯಮ: ಸಹಾಯಕರಾಗಲು ಮುಂದೆ ಬರುವವರಿಗೆ ಕೆಲವೊಂದು ನಿಯಮಗಳನ್ನು ರೂಪಿಸಲಾಗಿದೆ. ಸಹಾಯ ಬಯಸುವ ವಿದ್ಯಾರ್ಥಿಗಿಂತ ಭಿನ್ನವಾದ ಶೈಕ್ಷಣಿಕ ಹಿನ್ನೆಲೆ ಹೊಂದಿರಬೇಕು. ವಿದ್ಯಾರ್ಥಿಗಳಿಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರಬಾರದು. ಒಮ್ಮೆ ಈ ಸಮೂಹ ರಚನೆಗೊಂಡರೆ, ನಗರದಲ್ಲಿನ ಇತರೆ ಅಂಧರ ಕಲಿಕಾ ಕೇಂದ್ರಗಳಿಗೂ ಸಹಾಯಕರನ್ನು ಕಳುಹಿಸಿಕೊಡುವ ಯೋಚನೆ ಇದೆ.

ಕೊನೆ ಗಳಿಗೆಯಲ್ಲೂ ಸಹಾಯ: ಸಹಾಯಕರಾಗಿ ಬರುವುದಾಗಿ ಹೇಳಿದವರು, ಕೆಲವೊಮ್ಮೆ ಕೊನೆ ಗಳಿಗೆಯಲ್ಲಿ ಕೈಕೊಡುತ್ತಾರೆ. ಇದರಿಂದ ಅಂಧ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಆಗುತ್ತದೆ. ಸ್ಕ್ರೈಬ್‌ ಸಮೂಹವಿದ್ದರೆ, ಕೊನೆ ಗಳಿಗೆಯಲ್ಲಿಯೂ ತಕ್ಷಣಕ್ಕೆ ಮತ್ತೊಬ್ಬರನ್ನು ಕರೆಸಬಹುದು ಹಾಗೂ ಪರೀಕ್ಷೆಗೂ ಮುನ್ನವೇ ಒಂದಷ್ಟು ಸಮಯವನ್ನು ಸಹಾಯಕರೊಂದಿಗೆ ಕಳೆದು, ಪರೀಕ್ಷೆಗಳನ್ನು ಮತ್ತಷ್ಟು ಚೆನ್ನಾಗಿ ಬರೆಯಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-22961295 ಅನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News