ಜಾತ್ಯಾತೀತ ನಾಯಕ ಅಸ್ತಂಗತ: ಟಿಪ್ಪು ಸುಲ್ತಾನ್ ಸಂಯುಕ್ತ ರಂಗ ಮುಖಂಡ ದಾವೂದ್ ಇಕ್ಬಾಲ್
ಬೆಂಗಳೂರು, ನ.26: ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್, ಯಾವುದೋ ಒಂದು ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ಅವರೊಬ್ಬ ಅಪ್ಪಟ ಜಾತ್ಯತೀತ ನಾಯಕರಾಗಿದ್ದರು ಎಂದು ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಪ್ರಧಾನ ಕಾರ್ಯದರ್ಶಿ ದಾವೂದ್ ಇಕ್ಬಾಲ್ ತಿಳಿಸಿದ್ದಾರೆ.
ಸೋಮವಾರ ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಜಾಫರ್ ಶರೀಫ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮಾಜಿ ಸಿಎಂ ನಿಜಲಿಂಗಪ್ಪ ಅವರ ಒಡನಾಟದೊಂದಿಗೆ ಆರಂಭವಾದ ಜಾಫರ್ ಶರೀಫ್ ಅವರ ರಾಜಕೀಯ ಜೀವನವು, ಹಲವಾರು ಏರಿಳಿತಗಳನ್ನು ಕಂಡಿದೆ. ಒಕ್ಕಲಿಗರ ಪ್ರಾಬಲ್ಯವಿದ್ದ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು ಅವರ ಜಾತ್ಯಾತೀತ ಮನೋಭಾವನೆಗೆ ಸಂದ ಜಯವಾಗಿತ್ತು ಎಂದು ಅವರು ಸ್ಮರಿಸಿದರು.
ಜಾಫರ್ ಶರೀಫ್ ರನ್ನು ರಾಜ್ಯ ಹಾಗೂ ದೇಶದ ಜನತೆ ಕೇವಲ ಅಲ್ಪಸಂಖ್ಯಾತ ಸಮುದಾಯದ ನಾಯಕರೆಂದು ಪರಿಗಣಿಸಲಿಲ್ಲ. ಅಲ್ಪಸಂಖ್ಯಾತರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅನ್ಯ ಸಮುದಾಯದವರ ಪ್ರೀತಿ, ಗೌರವಕ್ಕೆ ಅವರು ಪಾತ್ರರಾಗಿದ್ದರು ಎಂದು ಅವರು ಹೇಳಿದರು.
ರೈಲ್ವೆ ಸಚಿವರಾಗಿ ಕೇವಲ ಕರ್ನಾಟಕ ಅಷ್ಟೇ ಅಲ್ಲ, ದೇಶದೆಲ್ಲೆಡೆ ತಮ್ಮ ಛಾಪು ಮೂಡಿಸಿದರು. ಸ್ವತಂತ್ರ ಭಾರತದಲ್ಲಿ ಈವರೆಗೆ ಎಷ್ಟು ಮಂದಿ ರೈಲ್ವೆ ಸಚಿವರಾಗಿದ್ದಾರೋ ಅವರೆಲ್ಲರ ಪೈಕಿ ಜಾಫರ್ ಶರೀಫ್ ಅಗ್ರ ಗಣ್ಯರು ಎಂದು ಅವರು ಹೇಳಿದರು.
ರೈಲ್ವೆ ಗೆ ಸಂಬಂಧಿಸಿದ ಕಾರ್ಖಾನೆಗಳನ್ನು ರಾಜ್ಯಕ್ಕೆ ತರುವ ಮೂಲಕ ಕನ್ನಡಿಗರಿಗೆ ಉದ್ಯೋಗಗಳನ್ನು ಕೊಡಿಸಿದ್ದನ್ನು ಯಾರೂ ಮರೆಯುವಂತಿಲ್ಲ. ಇವರ ಗರಡಿಯಲ್ಲಿ ಪಳಗಿದ ಅನೇಕ ಅಲ್ಪಸಂಖ್ಯಾತರು ಹಾಗೂ ಇತರ ಸಮುದಾಯದವರು ರಾಜಕೀಯ ಕ್ಷೇತ್ರದಲ್ಲಿ ಹಲವಾರು ಮಹತ್ವದ ಸ್ಥಾನಗಳನ್ನು ಅಲಂಕರಿಸಿದ್ದಾರೆ ಎಂದು ದಾವೂದ್ ಇಕ್ಬಾಲ್ ಹೇಳಿದರು.