ಮೂರನೇ ಟೆಸ್ಟ್: ಇಂಗ್ಲೆಂಡ್ ಗೆ ರೋಚಕ ಜಯ

Update: 2018-11-27 05:11 GMT

ಕೊಲಂಬೊ, ನ.26: ನಾಯಕ ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾವನ್ನು 42 ರನ್‌ಗಳ ಅಂತರದಿಂದ ಮಣಿಸಿತು. ಈ ಮೂಲಕ 55 ವರ್ಷಗಳ ಬಳಿಕ ವಿದೇಶಿ ನೆಲದಲ್ಲಿ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿದೆ.

ಮೂರನೇ ಪಂದ್ಯ ಗೆಲ್ಲಲು 327 ರನ್ ಗುರಿ ಪಡೆದಿದ್ದ ಶ್ರೀಲಂಕಾ ತಂಡ ನಾಲ್ಕನೇ ದಿನವಾದ ಸೋಮವಾರ ಸ್ಪಿನ್ನರ್‌ಗಳಾದ ಜಾಕ್ ಲೀಚ್(4-72) ಹಾಗೂ ಮೊಯಿನ್ ಅಲಿ(4-92) ದಾಳಿಗೆ ತತ್ತರಿಸಿ 284 ರನ್‌ಗೆ ಆಲೌಟಾಯಿತು. ಲೀಚ್ ಹಾಗೂ ಅಲಿ ತಲಾ ನಾಲ್ಕು ವಿಕೆಟ್‌ಗಳನ್ನು ಕಬಳಿಸಿ ತಂಡದ ಗೆಲುವಿಗೆ ನೆರವಾದರು.

ನಾಯಕ ಸುರಂಗ ಲಕ್ಮಲ್ ವಿಕೆಟ್ ಉರುಳಿಸುವ ಮೂಲಕ ಲೀಚ್ ಶ್ರೀಲಂಕಾದ 2ನೇ ಇನಿಂಗ್ಸ್‌ಗೆತೆರೆ ಎಳೆದರು. ಲಕ್ಮಲ್ ವಿಕೆಟ್ ಬಿದ್ದ ಬೆನ್ನಿಗೇ ಇಂಗ್ಲೆಂಡ್ ತಂಡ ಗೆಲುವಿನ ಸಂಭ್ರಮ ಆಚರಿಸಿತು. ಇಂಗ್ಲೆಂಡ್ ತಂಡ ವಿದೇಶದಲ್ಲಿ 1963ರ ಬಳಿಕ 3-0 ಅಂತರದಿಂದ ಟೆಸ್ಟ್ ಸರಣಿಯೊಂದನ್ನು ಜಯಿಸಿದೆ. 1963ರಲ್ಲಿ ನ್ಯೂಝಿಲೆಂಡ್ ವಿರುದ್ಧ ಟೆಡ್ ಡೆಕ್ಸ್‌ಟರ್ ನಾಯಕತ್ವದಲ್ಲಿ ಕೊನೆಯ ಬಾರಿ 3-0 ಅಂತರದಲ್ಲಿ ಸರಣಿ ಜಯಿಸಿತ್ತು.

ಶ್ರೀಲಂಕಾದ 11ನೇ ಕ್ರಮಾಂಕದ ಆಟಗಾರ ಮಲಿಂದ ಪುಷ್ಪಕುಮಾರ 40 ಎಸೆತಗಳಲ್ಲಿ ಔಟಾಗದೆ 42 ರನ್(6 ಬೌಂಡರಿ,1 ಸಿಕ್ಸರ್) ಗಳಿಸಿ ತಂಡದ ಸೋಲಿನ ಅಂತರದ ತಗ್ಗಿಸಿದರು. ಪುಷ್ಪಕುಮಾರ್ ಅವರು ಲೀಚ್‌ಗೆ ವಿಕೆಟ್ ಒಪ್ಪಿಸುವ ಮೊದಲು ಲಕ್ಮಲ್‌ರೊಂದಿಗೆ 10ನೇ ವಿಕೆಟ್‌ಗೆ 58 ರನ್ ಜೊತೆಯಾಟ ನಡೆಸಿದ್ದರು.

ಶ್ರೀಲಂಕಾದ ಪರ ಕುಶಾಲ್ ಮೆಂಡಿಸ್ ಅಗ್ರ ಸ್ಕೋರರ್(86 ರನ್) ಎನಿಸಿಕೊಂಡರು. ಮೆಂಡಿಸ್ ಅವರೊಂದಿಗೆ 6ನೇ ವಿಕೆಟ್‌ನಲ್ಲಿ 102 ರನ್ ಜೊತೆಯಾಟ ನಡೆಸಿ ಶ್ರೀಲಂಕಾ ಪ್ರತಿರೋಧ ಒಡ್ಡಲು ನೆರವಾದ ರೋಶನ್ ಸಿಲ್ವಾ 65 ರನ್(161 ಎಸೆತ,4 ಬೌಂಡರಿ) ಗಳಿಸಿದರು.

 ಇಂದು 15 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಮೆಂಡಿಸ್ ಟೆಸ್ಟ್‌ನಲ್ಲಿ 7ನೇ ಅರ್ಧಶತಕ ದಾಖಲಿಸಿದರು. ಜೋಸ್ ಬಟ್ಲರ್ ನಿರ್ಣಾಯಕ ಅರ್ಧಶತಕ (64)ನೆರವಿನಿಂದ ರವಿವಾರ ಇಂಗ್ಲೆಂಡ್ ತಂಡ ಎರಡನೇ ಇನಿಂಗ್ಸ್‌ನಲ್ಲಿ 230 ರನ್‌ಗೆ ಆಲೌಟಾಯಿತು. ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಇಂಗ್ಲೆಂಡ್ ತಂಡ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ವಾಪಸಾಗಿರುವ ಜಾನಿ ಬೈರ್‌ಸ್ಟೋವ್(110)ಶತಕದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 336 ರನ್ ಗಳಿಸಿ ಆಲೌಟಾಗಿತ್ತು. ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಐದು ವಿಕೆಟ್‌ಗಳ ಗೊಂಚಲು ಪಡೆದು ಶ್ರೀಲಂಕಾವನ್ನು ಮೊದಲ ಇನಿಂಗ್ಸ್ ನಲ್ಲಿ 240 ರನ್‌ಗೆ ನಿಯಂತ್ರಿಸಿದರು. ಪ್ರವಾಸಿ ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 96 ರನ್ ಮುನ್ನಡೆ ಪಡೆಯಲು ಸಮರ್ಥವಾಯಿತು.

 ಶ್ರೀಲಂಕಾ ಪ್ರವಾಸದಲ್ಲಿ ಇಂಗ್ಲೆಂಡ್ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಏಕದಿನ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿದ್ದ ಇಂಗ್ಲೆಂಡ್ ಏಕೈಕ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನು ಜಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News